
ಭಾರಿ ಮಳೆ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನುಗ್ಗಿದ ನೀರು : ಮಳೆ ಕಡಿಮೆಯಾದ ನಂತರ ದೇವಸ್ಥಾನ ಭೇಟಿಗೆ ಮನವಿ

ಸುಬ್ರಹ್ಮಣ್ಯ : ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕುಕ್ಕೆ ಆದಿಸುಬ್ರಮಣ್ಯ ದೇವಸ್ಥಾನದ ಒಳಗೆ ನೀರು ನುಗ್ಗಿದ್ದು, ದೇವಸ್ಥಾನದ ಕಾಣಿಕೆ ಹುಂಡಿ ಸೇರಿದಂತೆ ಹಲವಾರು ಸಾಮಾಗ್ರಿಗಳು ನೀರಿನಲ್ಲಿ ತೆಲುತ್ತಿವೆ.
ಕುಮಾರಧಾರಾ ಸ್ನಾನಘಟ್ಟ ಹಾಗೂ ಸುಬ್ರಹ್ಮಣ್ಯ ಮಂಜೇಶ್ವರ ಹಾಗೂ ಸುಬ್ರಮಣ್ಯ ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು, ಹರಿಹರ, ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.

ಈ ಭಾಗದಲ್ಲಿ ಮುಂಜಾಗ್ರತಾ ಕ್ರಮವಹಿಸಲು ಎಸ್ ಡಿಆರ್ ಎಪ್ ಹಾಗೂ ಎನ್ ಡಿಆರ್ ಎಪ್ ತಂಡವನ್ನು ಆ ಭಾಗಕ್ಕೆ ಈಗಾಗಲೆ ಕಳುಹಿಸಿಕೊಡಲಾಗುತ್ತಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಒಂದೆರಡು ದಿನಗಳು ಕಾದು ಮಳೆ ಕಡಿಮೆಯಾದ ಬಳಿಕ ಕ್ಷೇತ್ರ ಸಂದರ್ಶಿಸುವಂತೆ ದೇವಸ್ಥಾನ ಮಂಡಳಿ ತಿಳಿಸಿದೆ.