ಜನರಲ್ಲಿ ಧಾರ್ಮಿಕ ಚಿಂತನೆ ತುಂಬುತ್ತಿರುವ ಕಾರಂಜಿಮಠದ ಕಾರ್ಯ ಶ್ಲಾಘನೀಯ : ಡಾ. ಮಲ್ಲಿಕಾರ್ಜುನ ಶ್ರೀ
ಬೆಳಗಾವಿ : ಶಿವಾಚಾರ ಪಾಲಿಸುವ ಜರಿಗೆಲ್ಲ ಶ್ರಾವಣ ಮಾಸವೆಂದರೆ ಅತ್ಯಂತ ಪವಿತ್ರವಾದುದು. ಪ್ರಮುಖವಾಗಿ ಗ್ರಾಮೀಣ ಭಾಗದ ರೈತಾಪಿ ಜನರ ಬದುಕಿನಲ್ಲಿ ಹಾಸು ಹೊಕ್ಕಾಗಿರುವ ಶ್ರಾವಣದಲ್ಲಿ ಶಿವನ ದೇವಸ್ಥಾನಗಳಲ್ಲಿ ಪ್ರತಿ ಸೋಮವಾರ ಜಾತ್ರೆಗಳು ಜರುಗುತ್ತವೆ. ಅಂಥ ಸನ್ನಿವೇಶದಲ್ಲಿ ಬೆಳಗಾವಿಯ ಕಾರಂಜಿಮಠದಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘಣೀಯ ಎಂದು ಧಾರವಾಡದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಅಭಿಪ್ರಾಯ ಪಟ್ಟರು.
ಬೆಳಗಾವಿಯ ಕಾರಂಜಿಮಠದಲ್ಲಿ ಜರುಗಿದ ಶ್ರಾವಣ ಮಾಸದ ನಿಮಿತ್ಯ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ ಅವರು ಮುಳುಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳ ಕುರಿತು ಅನುಭಾವ ಪ್ರವಚನ ಮಾಡಿದ ಅವರು, ಅಥಣಿ ಶಿವಯೋಗಿಗಳಿಗಿಂತ ಮುಂಚೆಯೇ ಮುಳಗುಂದದ ಬಾಲಲೀಲಾ ಮಹಾಂತ ಶಿವಯೋಗಿಗಳು ಲಿಂಗಾಯತ ಸಮುದಾಯಕ್ಕೆ ಲಿಂಗದೀಕ್ಷಾ ಮಹತ್ವ ತಿಳಿಸಿದರು. ಕಾಯಕ ಹಾಗೂ ದಾಸೋಹಗಳೆರಡೂ ಜೀವನದಲ್ಲಿ ಸಮಸಮನಾಗಿ ಸಾಗಬೇಕು ಎಂದು ಸಾರಿದರು.
ಗಂಡ, ಮಕ್ಕಳನ್ನು ಕಳೆದುಕೊಂಡ ಅಬಲೆಯ ಕಣ್ಣೀರು ಒರೆಸಿ ಅವಳನ್ನು ತಾಯಿ ಎಂದು ಸ್ವೀಕರಿಸಿ ತಾವೇ ಮಗುವಾದವರು. ಕಷ್ಟ ನೋವುಗಳಿಂದ ಜರ್ಜರಿತರಾದ ಜನರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿ ಜನರ ಪಾಲಿಗೆ ಮಾರ್ಗದರ್ಶಿಯಾದ ಬಾಲಲೀಲಾ ಮಹಾಂತರ ಜೀವನ ಇಂದಿನ ಮಠಾಧೀಶರಿಗೆ ಅನುಕರಣೀಯರಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮ ನೇತೃತ್ವ ವಹಿಸಿ ಮಾತನಾಡಿದ ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು, ಶ್ರಾವಣ ಮಾಸದಲ್ಲಿ ಲಿಂಗಾಯತ ಮಠಗಳು ಸಮುದಾಯದ ಜನರತ್ತ ಸಾಗಿ ಶಿವಯೋಗದ ಮಹತ್ವ ತಿಳಿಸಿ ಸುಂದರ ಸಾರ ತಿಳಿಸಬೇಕು. ಬಹಿರಂಗ ಶುದ್ಧಿಯಷ್ಟೇ ಅಂತರಂಗ ಶುದ್ಧಿಗೆ ಹೆಚ್ಚಿನ ಗಮನಹರಿಸಬೇಕು ಎಂದರು.
ಶ್ರೀಮಠದ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, ಜಾತಿ,ವರ್ಣ,ವರ್ಗ, ಲಿಂಗ ಭೇದವಿಲ್ಲದ ಸಾಮರಸ್ಯದ ನಾಡು ಕಟ್ಟುವತ್ತ ನಾವಿಂದು ಸಾಗಬೇಕಿದೆ. ಆ ನಿಟ್ಟಿನಲ್ಲಿ ಪ್ರತಿ ಸೋಮವಾರ ನಡೆಯುವ ಉಪನ್ಯಾಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ಸಂಸ್ಕಾರವಂತರಾಗಲಿ ಎಂದು ನುಡಿದರು.
ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದ ಧಾರವಾಡದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನು ಬೆಳಗಾವಿ ಜನರ ಪರವಾಗಿ ಶ್ರೀಮಠದಿಂದ ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಧುರೀಣರಾದ ಶಂಕರಗೌಡ ಪಾಟೀಲ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ. ಬಸವರಾಜ ಜಗಜಂಪಿ, ಡಾ. ಮೈತ್ರೆಯಿನಿ ಗದಿಗೆಪ್ಪಗೌಡರ, ರಮೇಶ ಕಳಸಣ್ಣವರ,ನೀಲಗಂಗಾ ಚರಂತಿಮಠ, ವಿಜಯಶಾಸ್ತ್ರೀ ಹಿರೇಮಠ, ಅಪ್ಪಾಸಾಹೇಬ ವಿಭೂತಿ,ನಾನಾಗೌಡ ಬಿರಾದಾರ, ಶಂಕರ ಬಾಗೇವಾಡಿ ಮುಂತಾದವರು ಉಪಸ್ಥಿತರಿದ್ದರು.
ಕಾರಂಜಿಮಠದ ಮಾತೃ ಮಂಡಳಿ ಹಾಗೂ ಅಪ್ಪಾಜಿ ಸಂಗೀತ ಶಾಲೆಯ ಮಕ್ಕಳು ಹಾಡಿದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರೊ. ಶ್ರೀಕಾಂತ ಶಾನವಾಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರೊ.ಎ.ಕೆ.ಪಾಟೀಲ ನಿರೂಪಿಸಿದರು.
ವಕೀಲರಾದ ವಿ.ಕೆ.ಪಾಟೀಲ ವಂದಿಸಿದರು.