Select Page

7 ಗಂಭೀರ ವಿಷಯ ; ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ನೇರ ಚರ್ಚೆಗೆ ಎಫ್ಒಎಬಿ ನಿರ್ಧಾರ

7 ಗಂಭೀರ ವಿಷಯ ; ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆ ನೇರ ಚರ್ಚೆಗೆ ಎಫ್ಒಎಬಿ ನಿರ್ಧಾರ



ಬೆಳಗಾವಿ :  ಬೆಳಗಾವಿ ಅಭಿವೃದ್ಧಿ ದೃಷ್ಟಿಯಿಂದ ತುರ್ತಾಗಿ ಆಗಬೇಕಿರುವ 7 ಗಂಭೀರ ವಿಷಯಗಳನ್ನು ಗುರುತಿಸಿರುವ  ಎಫ್ಒಎಬಿ (ಫೆಡರೇಶನ್ ಆಫ್ ಅಸೋಸಿಯೇಶನ್ಸ್ ಆಫ್ ಬೆಳಗಾವಿ), ಈ  ಕುರಿತು ಜಿಲ್ಲೆಯ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ನೇರ ಚರ್ಚೆಗೆ ನಿರ್ಧರಿಸಿದೆ.

ಗುರುವಾರ ಸಂಜೆ ಫೌಂಡ್ರಿ ಕ್ಲಸ್ಟರ್ ಸಭಾಭವನದಲ್ಲಿ ಸಭೆ ಸೇರಿದ್ದ ಎಫ್ಒಎಬಿಯ ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳ ಪ್ರತಿನಿಧಿಗಳು ಸುಮಾರು ಎರಡು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರು. ನಗರದ ಅಭಿವೃದ್ಧಿಗೆ ಪೂರಕವಾಗಿ ರೂಪಿಸಬೇಕಿರುವ ರೈಲ್ವೆ ಮೇಲ್ಸೆತುವೆ ಯೋಜನೆ, ಸಂಚಾರ ದಟ್ಟಣೆ ನಿವಾರಿಸಬೇಕಿರುವ ರಿಂಗ್ ರಸ್ತೆ, ಕೈತಪ್ಪಿ ಹೋಗುವ ಹಂತದಲ್ಲಿರುವ ಸಿಟೀಸ್ 2, ನಿರ್ಲಕ್ಷ್ಯಕ್ಕೊಳಗಾಗಿರುವ ಸಿಡಿಪಿ ಹಾಗೂ ಎಸ್ ಟಿಪಿ ಯೋಜನೆ, ತುರ್ತಾಗಿ ಮೇಲ್ದರ್ಜೆಗೇರಿಸಬೇಕಾಗಿರುವ ಹೆಸ್ಕಾಂ ಪವರ್ ಸ್ಟೇಶನ್ಸ್, ಗೇಲ್ ಗ್ಯಾಸ್ ಪೈಪ್ ಲೈನ್, ಬಯೋಗ್ಯಾಸ್, ಗೋಬರ್ ಧನ್ ಯೋಜನೆಗಳ ಕುರಿತು ಚರ್ಚೆ ನಡೆಸಲಾಯಿತು.

ಈಗಾಗಲೆ ನಿರ್ಮಾಣವಾಗಿರುವ ಅವೈಜ್ಞಾನಿಕ ರೈಲ್ವೆ ಮೇಲ್ಸೆತುವೆಗಳಿಂದಾಗಿ ನಗರದಲ್ಲಿ ಉಂಟಾಗಿರುವ ಸಮಸ್ಯೆ ಹಾಗೂ ಆಗಬೇಕಿರುವ ಇನ್ನಷ್ಟು ಮೇಲ್ಸೆತುವೆಗಳಿಂದ ನಗರ ಅಭಿವೃದ್ಧಿಗೆ ಮಾರಕವಾಗುವ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ರಸ್ತೆಗೆ ಮೇಲ್ಸೆತುವೆ ಬದಲು ರೈಲ್ವೆ ಟ್ರ್ಯಾಕ್ ಗೆ ಮೇಲ್ಸೆತುವೆ ಮಾಡಿ, ಎಲಿವೇಟೆಡ್ ರೈಲ್ವೆ ಟ್ರ್ಯಾಕ್ ನಿರ್ಮಾಣದಿಂದ ನಗರದ ಅಭಿವೃದ್ಧಿಗೆ ವೇಗ ನೀಡಬಹುದು, ನಗರ ಸೌಂದರ್ಯ, ಪಾರಂಪರಿಕ ತಾಣಗಳ ಸಂರಕ್ಷಣೆ ಜೊತೆಗೆ ಹಲವಾರು ಸಕಾರಾತ್ಮಕ ಅಂಶಗಳನ್ನು ಇದು ಒಳಗೊಂಡಿದೆ ಎನ್ನುವುದನ್ನು, ದೇಶದ ಅನೇಕ ನಗರಗಳ ಸಕ್ಸಸ್ ಸ್ಟೋರಿಗಳೊಂದಿಗೆ ತಜ್ಞರು ಸಭೆಯಲ್ಲಿ ವಿವರಿಸಿದರು. 

ನಗರದ ಎಲ್ಲ ವಿದ್ಯುತ್ ಸ್ಟೇಶನ್ ಗಳು ಮಿತಿಮೀರಿದ ಹೊರೆಯಿಂದ ಕೂಡಿವೆ. ತುರ್ತಾಗಿ 400 ಕೆವಿ ಸ್ಟೇಶನ್ ಮತ್ತು ಹಲವು ಸಬ್ ಸ್ಟೇಶನ್ ಗಳು ಆಗದಿದ್ದರೆ ಇನ್ನೊಂದ ವರ್ಷದಲ್ಲಿ ನಗರ ದೊಡ್ಡ ಸಮಸ್ಯೆಗೆ ಒಳಗಾಗಲಿದೆ ಎನ್ನುವ ಕುರಿತು ಗಮನ ಸೆಳೆಯಲಾಯಿತು. ಇದರ ಜೊತೆಗೆ ಇನ್ನೂ ಕೆಲವು ವಿಷಯಗಳ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಜೊತೆ ಮೊದಲ ಸುತ್ತಿನ ಚರ್ಚೆ ನಡೆಸಿ, ನಂತರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜಿಲ್ಲೆಯ ಸಚಿವರು ಹಾಗೂ ಬೆಳಗಾವಿ ನಗರದ ಶಾಸಕರೊಂದಿಗೆ ಸಭೆ ನಡೆಸಿ ಗಮನ ಸೆಳೆಯಬೇಕು ಎನ್ನುವ ನಿರ್ಧಾರವನ್ನು ಸಭೆ ಕೈಗೊಂಡಿತು. 

ಅಧ್ಯಕ್ಷತೆ ವಹಿಸಿದ್ದ ಹಿರಿಯ ಉದ್ಯಮಿ, ಫೌಂಡ್ರಿ ಕ್ಲಸ್ಟರ್ ಚೇರಮನ್ ರಾಮ್ ಭಂಡಾರೆ ಮಾತನಾಡಿ, ಬೆಳಗಾವಿ ಅಭಿವೃದ್ಧಿ ದೃಷ್ಟಿಯಿಂದ ಎಫ್ಒಎಬಿ ಸಂಘಟನೆಯ ಹೆಜ್ಜೆ ಅತ್ಯಂತ ಪ್ರಶಂಸನೀಯವಾಗಿದೆ, ಇದು ಅಗತ್ಯವಾಗಿತ್ತು. ಮುಂದಿನ ದಿನಗಳಲ್ಲಿ ಎಲ್ಲ ಸಂಘಟನೆಗಳನ್ನು, ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆ ಕೆಲಸ ಮಾಡಬೇಕು ಎಂದರು. ಎಫ್ಒಎಬಿ ಸಂಚಾಲಕ ಚೈತನ್ಯ ಕುಲಕರ್ಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಇನ್ನೋರ್ವ ಸಂಚಾಲಕ ಎಂ.ಕೆ.ಹೆಗಡೆ, ಮುಂದಿನ ಯೋಜನೆಗಳ ಕುರಿತು ವಿವರಿಸಿ, ವಂದಿಸಿದರು.

ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ಪ್ರೊಪೇಶನಲ್ ಫೋರಮ್ ನ ಡಾ.ಎಚ್.ಬಿ.ರಾಜಶೇಖರ ಮತ್ತು ಬಿ.ಜಿ.ಧರೆಣ್ಣಿ, ಲಘು ಉದ್ಯೋಗ ಭಾರತಿಯ ಸಚಿನ್ ಸಬ್ನಿಸ್, ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ನ ಸಿ.ಬಿ.ಹಿರೇಮಠ, ಕ್ರೆಡೈ ನ ಯುವರಾಜ ಹುಲಜಿ ಮತ್ತು ಆನಂದ ಕುಲಕರ್ಣಿ, ಫೌಂಡ್ರಿ ಕ್ಲಸ್ಟರ್ ನ ಸದಾನಂದ ಹುಂಬರವಾಡಿ ಮತ್ತು ವಿಜಯ ಮುಚ್ಚಂಡಿಕರ್, ಎಫ್ಒಎಬಿ ಸಂಯೋಜಕ ರಾಜೇಂದ್ರ ಮುಂದಡ, ಕೆಮಿಸ್ಟ್ ಆ್ಯಂಡ್ ಡ್ರಗ್ಗಿಸ್ಟ್ ಅಸೋಸಿಯೇಶನ್ ನ ಎಸ್.ಎಸ್.ಗಡಿಯಣ್ಣವರ್,  ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಪ್ರಸನ್ನ ಕೋಚರಿ, ಎಸ್.ಬಿ.ದಂಡಗಿ, ಅಮಿತ್ ಕಾಲಕುಂದ್ರಿ, ಅನಿಲ ರಾಮದುರ್ಗ ಮೊದಲಾದವರು ಭಾಗವಹಿಸಿದ್ದರು. ಕೆಮಿಸ್ಟ್ ಆಂಡ್  ಡ್ರಗ್ಗಿಸ್ಟ್ ಅಸೋಸಿಯೇಶನ್ ನ ಎಸ್.ಎಸ್.ಗಡಿಯಣ್ಣವರ್,  ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಪ್ರಸನ್ನ ಕೋಚರಿ, ಎಸ್.ಬಿ.ದಂಡಗಿ, ಅಮಿತ್ ಕಾಲಕುಂದ್ರಿ, ಅನಿಲ ರಾಮದುರ್ಗ ಮೊದಲಾದವರು ಭಾಗವಹಿಸಿದ್ದರು.

Advertisement

Leave a reply

Your email address will not be published. Required fields are marked *

error: Content is protected !!