ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಕೃಷಿ ಕಾರ್ಮಿಕರಿದ್ದ ಆಟೋ ರಿಕ್ಷಾಗೆ ವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ (Accident) ಪರಿಣಾಮ, ಆಟೋ ಚಾಲಕ ಸೇರಿ ಆರು ಕೂಲಿ ಕಾರ್ಮಿಕರು ಸ್ಥಳದಲ್ಲೇ ದಾರುಣವಾಗಿ ಕೊನೆಯುಸಿರೆಳೆದ ಘಟನೆ ತೆಲಂಗಾಣದ (Telangana) ಸಂಗಾರೆಡ್ಡಿ ಜಿಲ್ಲೆಯ (Sangareddy district) ಜಹೀರಾಬಾದ್ ಬಳಿಯ ಚಿರಾಪಳ್ಳಿಯಲ್ಲಿ ಸ್ವಲ್ಪ ರಸ್ತೆ ಪಕ್ಕದ ಹದ್ದಿಯಲ್ಲಿ ನಡೆದಿದೆ.

ಮೃತಪಟ್ಟವರೆಲ್ಲರೂ ಬೀದರ್ ಜಿಲ್ಲೆಯ ರಾಜಗಿರಿ ಗ್ರಾಮದ ಮೂಲದವರೆಂದು ಗುರುತಿಸಲಾಗಿದೆ. ದಿನವಿಡೀ ಕೃಷಿ ಕೆಲಸ ಮುಗಿಸಿ ತಮ್ಮ ಗ್ರಾಮಕ್ಕೆ ಆಟೋದಲ್ಲಿ ವಾಪಸ್ ಆಗುತ್ತಿದ್ದಾಗ ಈ ಭೀಕರ ದುರ್ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದ ಐವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಅಸುನೀಗಿದ್ದಾರೆ.

ಈ ಭೀಕರ ಅಪಘಾತದಲ್ಲಿ ಏಳಕ್ಕೂ ಹಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಜಹೀರಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ

ಸಚಿವರ ಸಂತಾಪ ಹಾಗೂ ನೆರವು :

ಈ ದುರ್ಘಟನೆಗೆ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿರುವ ಅವರು, ಗಾಯಾಳುಗಳಿಗೆ ಸೂಕ್ತ ಹಾಗೂ ಉಚಿತ ವೈದ್ಯಕೀಯ ಚಿಕಿತ್ಸೆ ದೊರಕಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಮೃತದೇಹಗಳನ್ನು ಶೀಘ್ರವಾಗಿ ಸ್ವಗ್ರಾಮಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.