ಅಥಣಿ : ಪಟ್ಟಣದ ಶಿವಯೋಗಿ ವೃತ್ತದಲ್ಲಿ ಲಾರಿಯೊಂದು ಹರಿದು ವ್ಯಕ್ತಿಯೊಬ್ಬ ಮೃತಪಟ್ಟು, ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಮಂಗಳವಾರ ಮಧ್ಯಾನ ನಡೆದಿದೆ.
ಈ ಘಟನೆಯಲ್ಲಿ ಬೈಕ್ ಸವಾರ ರುದ್ರಗೌಡ ನೀವಲಗಿ (70 ) ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದ ಬೈಕ್ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಟ್ಟಣದ ಶಿವಯೋಗಿ ವೃತ್ತದಲ್ಲಿ ರಸ್ತೆ ದಾಟುವಾಗ ವಿಜಯಪುರ ಕಡೆಯಿಂದ ಗೂಡ್ಸ್ ತುಂಬಿದ 10 ವ್ಹೀಲರ್ ಲಾರಿಯ ಬ್ರೇಕ್ ಫೇಲಾಗಿ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಸವಾರರ ಮೇಲೆ ಹರಿದು ಈ ಅವಘಡ ಸಂಭವಿಸಿದೆ.
ರಸ್ತೆಯ ಬದಿಯಲ್ಲಿ ಕುಳಿತು ಕಡಲೆಕಾಯಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳು ಓಡಿಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿಯೂ ಹರಿದ ರಭಸಕ್ಕೆ ಒಂದು ಕಾರಿಗೆ ಡಿಕ್ಕಿ ಆಗಿದ್ದಲ್ಲದೆ, ನಾಲ್ಕು ಬೈಕ್ ಸವಾರರಿಗೆ ಬಿದ್ದು ಕೈ ಮತ್ತು ಕಾಲುಗಳಿಗೆ ತೀವ್ರ ಪೆಟ್ಟಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಕ್ ಸವಾರನ ಮೇಲೆ ಲಾರಿ ಹರಿದ ಪರಿಣಾಮ ದ್ವಿಚಕ್ರ ವಾಹನ ನುಚ್ಚು ನೂರಾಗಿದ್ದು, ವ್ಯಕ್ತಿಗೆ ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವವಾಗಿತ್ತು, ಸಾರ್ವಜನಿಕರು ನೆರವಿಗೆ ಬಂದು ಆಸ್ಪತ್ರೆಗೆ ದಾಖಲಿರುವಷ್ಟರಲ್ಲಿ ಸಾವನ್ನಪ್ಪಿದರು.
ಘಟನೆಯ ಸ್ಥಳದಲ್ಲಿ ಜನ, ವಾಹನಗಳು ನಿಂತಿದ್ದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಆಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಟ್ರಾಫಿಕ್ ಕ್ಲಿಯರ್ ಮಾಡಿ, ಲಾರಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




