ಬೆಳಗಾವಿ : ಸಧ್ಯ ಸಕ್ಕರೆ ಕಾರ್ಖಾನೆಗಳು ದಿನಕ್ಕೊಂದು ರೀತಿಯಲ್ಲಿ ದರದ ವಿಚಾರವಾಗಿ ವಿಚಿತ್ರ ನಿರ್ಧಾರ ಕೈಗೊಳ್ಳುವ ಮೂಲಕ ಕಬ್ಬು ಬೆಳೆಗಾರರು ಹಾಗೂ ಜಿಲ್ಲಾಡಳಿತದ ಮಧ್ಯೆ ಗೊಂದಲ ಸೃಷ್ಟಿಸುವ ಕೆಲಸ‌ ಮಾಡುತ್ತಿವೆ ಎಂಬ ಆರೋಪ ಕೇಳಿಬರುತ್ತಿದೆ.

ಈಗಾಗಲೇ ರಾಜ್ಯ ರೈತ ಸಂಘಟನೆ ಪ್ರತಿಭಟನೆಗೆ ಮಣಿದಿದ್ದ ಬೆಳಗಾವಿ ಜಿಲ್ಲಾಡಳಿತ ಕಾರ್ಖಾನೆ ಮಾಲಿಕರ ಜೊತೆ ಮಾತನಾಡಿ ಪ್ರತಿ ಟನ್ ಕಬ್ಬಿಗೆ 3600 ರೂ. ಕೊಡಲು ನಿರ್ಧರಿಸಿದ್ದವು. ಇದನ್ನು ಒಪ್ಪಿಕೊಂಡ ರೈತ ಮುಖಂಡರು ಕಾರ್ಖಾನೆ ಪ್ರಾರಂಭಕ್ಕೆ ಅವಕಾಶ ಕಲ್ಪಿಸಿಕೊಟ್ಟು ಹೋರಾಟದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿದ್ದರು.

ಈಗ ರೈತರಿಗೆ ಗೊಂದಲ ಮೂಡಿಸಿರುವ ನಿರ್ಧಾರ ಏನೆಂದರೆ. ಬೆಳಗಾವಿ ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳು 4000 ಕ್ಕಿಂತ ಅಧಿಕ ದರ ಘೋಷಣೆ ಮಾಡಿವೆ. ಜೊಲ್ಲೆ ಕುಟುಂಬದ ಒಡೆತನದ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ 4270 ದರ ಘೋಷಣೆ ಮಾಡಿದೆ. ಇನ್ನುಳಿದ ನಿಪ್ಪಾಣಿ ತಾಲೂಕಿನ ಬೇಡಕಿಹಾಳದಲ್ಲಿರುವ ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯು ಪ್ರಸಕ್ತ ಹಂಗಾಮಿನ ಕಬ್ಬು ಪೂರೈಕೆದಾರರಿಗೆ ಪ್ರತಿ ಟನ್ ಕಬ್ಬಿಗೆ ಗರಿಷ್ಠ 4,200 ದರ ನೀಡಲು ನಿರ್ಧರಿಸಿದ್ದೆ. ಅಷ್ಟೇ ಅಲ್ಲದೆ ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ ವರ್ಕ್ಸ್ ಲಿ. ಪ್ರತಿ ಟನ್ ಕಬ್ಬಿಗೆ 4000 ರು. ದರ ನೀಡಲು ನಿರ್ಧರಿಸಿವೆ.

ಆಗ ಒಪ್ಪದವರು ಈಗೇಕೆ ದರ ಹೆಚ್ಚಳ :

ಅಂದು ಸಕ್ಕರೆ ಕಾರ್ಖಾನೆಗಳ ಜೊತೆ ಜಿಲ್ಲಾಡಳಿತ ಸಭೆ ನಡೆಸಿದ ಸಂದರ್ಭದಲ್ಲಿ ಸಕ್ಕರೆ ಕಾರ್ಖಾನೆಗಳು 3,500 ಕ್ಕಿಂತ ಹೆಚ್ಚಿನ ಬೆಲೆ ಕೊಡಲು ಸಾಧ್ಯವಿಲ್ಲ ಎಂದಿದ್ದ ಇವರು ಇಂದು 600 ಕ್ಕೂ ಅಧಿಕ ಬೆಲೆ ಹೆಚ್ಚುವರಿ ನೀಡಲು ಮುಂದಾಗಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದೆ. ಇದರಿಂದ ರೈತರಲ್ಲಿ ಗೊಂದಲ ಮೂಡಿಸುವ ಹುನ್ನಾರ ಇದೆ ಎಂಬ ಅನುಮಾನ ಹುಟ್ಟಿದೆ.

ದರ ಘೋಷಣೆ ನಡುವೆ ಕಾರ್ಖಾನೆಗಳ ಟ್ವಿಸ್ಟ್ :

ಸಧ್ಯ 4 ಸಾವಿರಕ್ಕೂ ಅಧಿಕ ಬಿಲ್ ನೀಡಲು ಮುಂದಾಗಿರುವ ಸಕ್ಕರೆ ಕಾರ್ಖಾನೆಗಳು ಬಿಲ್ ನಡುವೆ ಟ್ವಿಸ್ಟ್ ಇಡಲಾಗಿದೆ. ಸಕ್ಕರೆ ಬೆಲೆ ಮಾರುಕಟ್ಟೆಯಲ್ಲಿ 55 ಕ್ಕಿಂತ ಅಧಿಕ ಇರಬೇಕು. ಹಾಗೆಯೇ ಸಕ್ಕರೆ ಇಳುವರಿ 11.50 ಕ್ಕೆ ಅಧಿಕ ಇದ್ದರೆ ಮಾತ್ರ ನಾಲ್ಕು ಸಾವಿರಕ್ಕೂ ಅಧಿಕ ಬಿಲ್ ನೀಡುತ್ತೇವೆ ಎಂದು ಹೇಳಿವೆ. ಇವರು ಕೊನೆಗೆ ಪ್ರಾಮಾಣಿಕವಾಗಿ ಬಿಲ್ ಕೊಡುತ್ತಾರೆ ಎಂಬುದಕ್ಕೆ ಸಧ್ಯ ಯಾವುದೇ ನಂಬಿಕೆ ಜನರಲ್ಲಿ ಇಲ್ಲ.

ಹೋರಾಟಗಾರರ ವಿರುದ್ಧ ಜನರ ಆಕ್ರೋಶ :

ಸಧ್ಯ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ದರ ಘೋಷಣೆ ಮಾಡುತ್ತಿರುವುದರ ಹಿಂದೆ ಸಕ್ಕರೆ ಬೆಲೆ ಏರಿಕೆ ಪಾತ್ರ ಇದೆ. ಈ ಕುರಿತು ಅವರು ಪದೇ, ಪದೇ ಮಾತನಾಡುತ್ತಿದ್ದಾರೆ. ಇಷ್ಟೆಲ್ಲಾ ಇದ್ದರೂ ರೈತರು ಕೇಂದ್ರ ಸರ್ಕಾರ ಸಕ್ಕರೆ ಮೇಲಿನ ಎಂಎಸ್ ಪಿ ಹೆಚ್ಚಳ ಆಗ್ರಹಿಸಿ ನಡೆಸಿದ ಹೋರಾಟ ನ್ಯಾಯ ಕೊಡಿಸುವ ವರೆಗೆ ಮುಂದುವರಿಸದೆ ಪ್ರಹ್ಲಾದ ಜೋಶಿ ಕೇಳಿದಂತೆ ಸಮಯ ಕೊಟ್ಟಿದ್ದು ಏಕೆ ಎಂಬ ಪ್ರಶ್ನೆ ರೈತರು ಕೇಳುತ್ತಿದ್ದಾರೆ. ಹೋರಾಟಗಾರರು ರಾಜಕೀಯ ಒತ್ತಡಕ್ಕೆ ಮಣಿದರಾ ಎಂಬ ಪ್ರಶ್ನೆ ಎಲ್ಲೆಡೆ ಮೂಡಿದೆ.

ಬೆಳಗಾವಿ ಹೋರಾಟಗಾರರ ನಂಬಿ ಕೆಟ್ಟರಾ ಹೊರ ಜಿಲ್ಲೆಯ ರೈತರು?

ಹೌದು ಕಬ್ಬಿಗೆ 3600 ರೂ. ಘೋಷಣೆ ಮಾಡಿರುವುದು ಕೇವಲ ಬೆಳಗಾವಿ ಜಿಲ್ಲೆ ಕಾರ್ಖಾನೆ ಹಾಗೂ ಕಬ್ಬು ಬೆಳೆಗಾರರಿಗೆ ಮಾತ್ರ ಸೀಮಿತ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ದೊಡ್ಡ ಹೋರಾಟಕ್ಕೆ ಕೇವಲ ಬೆಳಗಾವಿ ರೈತರು ಮಾತ್ರ ಇರಲಿಲ್ಲ. ಬಾಗಲಕೋಟೆ ರೈತರ ಶಕ್ತಿ ಸಾಕಷ್ಟಿದೆ. ಆದರೆ ದರ ಮಾತ್ರ ಬೆಳಗಾವಿಗೆ ಸೀಮಿತ ಮಾಡಿದ್ದು ಬಾಗಲಕೋಟೆ ಸೇರಿದಂತೆ ಹೊರ ಜಿಲ್ಲೆಗಳ ರೈತರನ್ನು ಕೆರಳಿಸಿದೆ. ಈ ಕಾರಣಕ್ಕೆ ಬೆಳಗಾವಿ ಹೋರಾಟ ನಂಬಿ ಕೆಟ್ಟಿದ್ದೇವೆ ಎನ್ನುತ್ತಿದ್ದಾರೆ ರೈತ ಮುಖಂಡರು.