ಮೂಡಲಗಿ ಛಾಯಾಗ್ರಾಹಕ ಎಸ್.ಎಂ.ಚಂದ್ರಶೇಖರ ಅಕಾಲಿಕ ನಿಧನ
ಬೆಳಗಾವಿ : ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯ ಸುದ್ದಿ ಕವರೇಜ್ ಗೆಂದು ಆಗಮಿಸಿದ ಮೂಡಲಗಿ ತಾಲ್ಲೂಕಿನ ಛಾಯಾಗ್ರಾಹಕ ವರದಿಗಾರರೊಬ್ಬರು ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ನಡೆದಿದೆ.
ಮೂಡಲಗಿ ಪಟ್ಟಣದ ಲಕ್ಷ್ಮಿ ನಗರ ನಿವಾಸಿ ಎಸ್.ಎಂ.ಚಂದ್ರಶೇಖರ (56) ಮೃತ ಪತ್ರಕರ್ತ. ಹಲವು ವರ್ಷಗಳಿಂದ ಮೂಡಲಗಿ ತಾಲ್ಲೂಕಿನ ವಿಶ್ವವಾಣಿ ದಿನ ಪತ್ರಿಕೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಸುತ್ತಿದ್ದರು. ಪರಿಷತ್ ಚುನಾವಣೆ ನಾಮಪತ್ರ ಸಲ್ಲಿಸುವ ಸುದ್ದಿಗಾಗಿ ಬೆಳಗಾವಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಏಕಾಏಕಿ ಎದೆನೋವು ಕಾಣಿಸಿಕೊಂಡು ಕುಸಿದು ಬಿದಿದ್ದಾರೆ. ತಕ್ಷಣ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ವರದಿಗಾರರಾದ ಎಸ್ ಎಮ್ ಚಂದ್ರಶೇಖರ ಅವರಿಗೆ ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಕೆಎಮ್ ಎಪ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ : ಮೂಡಲಗಿ ಛಾಯಾಗ್ರಾಹಕರಾಗಿ ಎಸ್. ಎಮ್. ಚಂದ್ರಶೇಖರ ಅವರ ಅಕಾಲಿಕ ನಿಧನಕ್ಕೆ ಕೆಎಮ್ ಎಪ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಉತ್ತಮ ವರದಿ ಹಾಗೂ ಛಾಯಾಚಿತ್ರಗಾರರಾಗಿ ರಾಜ್ಯ ಮಟ್ಟದ ಪತ್ರಿಕೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಭಗವಂತ ಮೃತರ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.