ಕಬ್ಬು ಬೆಲೆ ಹೆಚ್ಚಳ ಸೇರಿದಂತೆ ಹಲವು ಬಾಕಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹರಿಯಾಣದ ಅಖಿಲ ಭಾರತ ಕಿಸಾನ್ ಸಭಾ (AIKS) ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದೆ.
ನವೆಂಬರ್ 23ರಂದು ರೋಹ್ಟಕ್ ಜಿಲ್ಲೆಯ ಭಾಲಿ ಸಕ್ಕರೆ ಕಾರ್ಖಾನೆ ಬಳಿ ಬೃಹತ್ ರೈತ ಹೋರಾಟ, ಡಿಸೆಂಬರ್ 2ರಂದು ಕುರುಕ್ಷೇತ್ರದಲ್ಲಿರುವ ಮುಖ್ಯಮಂತ್ರಿ ನಿವಾಸದ ಎದುರು ಪ್ರತಿಭಟನೆ ನಡೆಸಲು ಸಂಘಟನೆ ನಿರ್ಧರಿಸಿದೆ. ಹೋರಾಟಕ್ಕೆ ರೈತರನ್ನು ಸಂಘಟಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿಯೂ ಅಭಿಯಾನ ನಡೆಸಲಾಗುವುದು ಎಂದು ‘ದಿ ಟ್ರಿಬ್ಯೂನ್’ ವರದಿ ಮಾಡಿದೆ.
ಮಂಗಳವಾರ ನಡೆದ ಸಂಘಟನೆಯ ಪದಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಲಾಯಿತು. ಹರಿಯಾಣದ ಕಬ್ಬು ಬೆಳೆಗಾರರು ಪ್ರತಿ ಕ್ವಿಂಟಲ್ಗೆ ₹600 ದರ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಹೆಚ್ಚುತ್ತಿರುವ ಕೃಷಿ ವೆಚ್ಚಕ್ಕೆ ಸರ್ಕಾರ ಘೋಷಿಸಿರುವ ಕಬ್ಬಿನ ದರ ಸಾಕಾಗುವುದಿಲ್ಲ ಎಂದು ಕಿಸಾನ್ ಸಭಾ ತಿಳಿಸಿದೆ.
ಮುಂದಿನ ಎರಡು ಕಬ್ಬು ನುರಿಸುವ ಹಂಗಾಮುಗಳಿಗೆ ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್ಗೆ ₹35ರಷ್ಟು ದರ ಹೆಚ್ಚಿಸಿದ್ದು, 2026-27ನೇ ಸಾಲಿಗೆ ₹430 ಹಾಗೂ 2027-28ನೇ ಸಾಲಿಗೆ ₹450 ದರ ನಿಗದಿಪಡಿಸಿದೆ. ಆದರೆ ಈ ಹೆಚ್ಚಳ ರೈತರ ಪಾಲಿಗೆ ‘ಕ್ರೂರ ಹಾಸ್ಯ’ದಂತಿದೆ ಎಂದು AIKS ಟೀಕಿಸಿದೆ. ಪರಿಷ್ಕೃತ ದರಗಳು ರೈತರ ನಿರೀಕ್ಷೆಗಿಂತ ಬಹಳ ಕಡಿಮೆ ಎಂದು ಸಂಘಟನೆ ಹೇಳಿದೆ.
AIKS ರಾಷ್ಟ್ರೀಯ ಉಪಾಧ್ಯಕ್ಷ ಇಂದರ್ಜಿತ್ ಸಿಂಗ್ ಮಾತನಾಡಿ, ಕೃಷಿ ಉತ್ಪಾದನಾ ವೆಚ್ಚ ನಿರಂತರವಾಗಿ ಏರಿಕೆಯಾಗುತ್ತಿದ್ದರೂ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರದ ನೀತಿಗಳು ರೈತರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಕೃಷಿ ಕ್ಷೇತ್ರದ ಮೇಲಿನ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂದು ಆರೋಪಿಸಿದರು.
ಟಿಕ್ರಿ ಗಡಿ ಕಡೆ ರೈತರ ಮೆರವಣಿಗೆ : ಸಂಯುಕ್ತ ಕಿಸಾನ್ ಮೋರ್ಚಾ (SKM) ನೀಡಿರುವ ಕರೆಯ ಮೇರೆಗೆ ನವೆಂಬರ್ 26ರಂದು ನಡೆಯಲಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲೂ AIKS ಭಾಗವಹಿಸಲಿದೆ. ದೆಹಲಿ ಗಡಿಗಳಲ್ಲಿ ನಡೆದ ರೈತರ ಹೋರಾಟಕ್ಕೆ ಆರು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಪ್ರತಿಭಟನೆ ನಡೆಯಲಿದೆ.
ಹರಿಯಾಣದಲ್ಲಿ ಬಹದ್ದೂರ್ಗಢದಲ್ಲಿ ರೈತರು ಸೇರಿ ಅಲ್ಲಿಂದ ಟಿಕ್ರಿ ಗಡಿಯತ್ತ ಮೆರವಣಿಗೆ ನಡೆಸಲಿದ್ದಾರೆ ಎಂದು ಇಂದರ್ಜಿತ್ ಸಿಂಗ್ ತಿಳಿಸಿದ್ದಾರೆ.
ರೈತರ ಹೋರಾಟದ ಸಂದರ್ಭದಲ್ಲಿ ನೀಡಲಾಗಿದ್ದ ಹಲವು ಭರವಸೆಗಳು ಇನ್ನೂ ಈಡೇರಿಲ್ಲ ಎಂದು ಅವರು ಆರೋಪಿಸಿದರು. ಕನಿಷ್ಠ ಬೆಂಬಲ ಬೆಲೆ (MSP)ಗೆ ಕಾನೂನು ಖಾತರಿ, ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಬೀಜ ಮಸೂದೆ ಹಿಂಪಡೆಯುವುದು ಹಾಗೂ ರೈತರು ಮತ್ತು ಕೃಷಿ ಕಾರ್ಮಿಕರ ಸಾಲಮನ್ನಾ ಸೇರಿದಂತೆ ಹಲವು ಬೇಡಿಕೆಗಳು ಇನ್ನೂ ಬಾಕಿ ಉಳಿದಿವೆ ಎಂದು ಹೇಳಿದರು.
ಬಾಕಿ ಬೆಳೆ ನಷ್ಟ ಪರಿಹಾರಕ್ಕೆ ಆಗ್ರಹ : ರೋಹ್ಟಕ್ ಜಿಲ್ಲೆಯ ಸ್ಥಳೀಯ ಸಮಸ್ಯೆಗಳ ಕುರಿತು ನವೆಂಬರ್ 18ರಂದು ಕಿಸಾನ್ ಸಭಾ ನಿಯೋಗವು ಜಿಲ್ಲಾಧಿಕಾರಿಯನ್ನು ಭೇಟಿಯಾಗಲಿದೆ. ಬೆಳೆ ನಷ್ಟಕ್ಕೆ ಬಾಕಿ ಇರುವ ಪರಿಹಾರ ಬಿಡುಗಡೆ ಹಾಗೂ ಸೌರಶಕ್ತಿ ಆಧಾರಿತ ಕೊಳವೆಬಾವಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವಂತೆ ನಿಯೋಗ ಒತ್ತಾಯಿಸಲಿದೆ.




