ಬದಲಾಗುತ್ತಿರುವ ರಾಜಕೀಯ ಸಮೀಕರಣ : ಅಥಣಿ ಬಿಜೆಪಿ ಅಭ್ಯರ್ಥಿ ಲಕ್ಷಣ ಸವದಿ ನಿಶ್ಚಿತ..?
ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅನೇಕ ರಾಜಕೀಯ ಮುಖಂಡರು ತಮ್ಮ ಅಸ್ತಿತ್ವ ಗಟ್ಟಿ ಮಾಡಿಕೊಳ್ಳುವತ್ತ ಗಮನ ಹರಿಸಿದ್ದಾರೆ. ಕೆಲವರು ಹೈಕಮಾಂಡ್ ಮಟ್ಟದಲ್ಲಿ ಟಿಕೆಟ್ ಕುರಿತು ಟವಲ್ ಹಾಕುತ್ತಿದ್ದರೆ, ಇನ್ನೂ ಕೆಲವರು ತಮ್ಮ ರಾಜಕೀಯ ಪ್ರಭಾವದಿಂದ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳುವ ಯತ್ನ ಮುಂದುವರಿಸಿದ್ದಾರೆ.
ಅಥಣಿ ವಿಧಾನಸಭೆ ಕ್ಷೇತ್ರ ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು. ಮಾಜಿ ಡಿಸಿಎಂ ಲಕ್ಷಣ ಸವದಿ ತವರು ಕಗಷೇತ್ರವಾದ ಹಿನ್ನಲೆಯಲ್ಲಿ ಈ ಬಾರಿ ಟಿಕೆಟ್ ಲೆಕ್ಕಾಚಾರ ಜೋರಾಗಿ ನಡೆದಿದೆ. ಪ್ರಸ್ತುತ ಬಿಜೆಪಿ ಮಹೇಶ್ ಕುಮಠಳ್ಳಿ ಶಾಸಕರಾಗಿದ್ದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ನೀಡುತ್ತದೆಯಾ ಎಂಬುದನ್ನು ಕಾದು ನೋಡಬೇಕು.
ಬದಲಾಗುತ್ತಿರುವ ರಾಜಕೀಯ ಸಮೀಕರಣದಲ್ಲಿ ಮುಂಬರುವ ಚುನಾವಣೆಯಲ್ಲಿ ಅಥಣಿ ಬಿಜೆಪಿ ವತಿಯಿಂದ ಮಾಜಿ ಡಿಸಿಎಂ ಲಕ್ಷಣ ಸವದಿ ಈಗಾಗಲೇ ಚುನಾವಣೆ ನಿಲ್ಲುವ ಮುನ್ಸೂಚನೆ ಆಪ್ತ ವಲಯದ ಮೂಲಕ ತೋರ್ಪಡಿಸುವ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಶಾಸಕನಾಗಿ ವಿಧಾನಸೌಧಕ್ಕೆ ಮರು ಪ್ರವೇಶ ಮಾಡಿದರೆ ಪಕ್ಷದ ವಲಯದಲ್ಲಿ ಮಹತ್ವದ ಜವಾಬ್ದಾರಿ ಪಡೆಯಬಹುದು ಎಂಬ ಲೆಕ್ಕಾಚಾರ ಇವರಲ್ಲಿದೆ. ಈ ಎಲ್ಲಾ ಕಾರಣಗಳಿಂದ ಲಕ್ಷಣ ಸವದಿ ಮುಂಬರುವ ಚುನಾವಣೆ ಸ್ಪರ್ಧಿಸುವ ಲೆಕ್ಕಾಚಾರ ಹೊಂದಿದ್ದಾರೆ ಎನ್ನಲಾಗುತ್ತಿದೆ.
ಕುಮಠಳ್ಳಿ ಮಾತಿಗೆ ಸಿಗದ ಮಹತ್ವ – ಈಗಾಗಲೇ ರಮೇಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಹೇಶ್ ಕುಮಠಳ್ಳಿ ಅವರ ಪ್ರಾಮುಖ್ಯತೆ ಪಕ್ಷದ ವಲಯದಲ್ಲಿ ಅಷ್ಟೊಂದು ಮಹತ್ವ ಪಡೆದಿಲ್ಲ. ಜೊತೆಗೆ ಸಂಘಟನೆ ದೃಷ್ಟಿಯಿಂದ ಈವರೆಗೂ ಪಕ್ಷಕ್ಕೆ ಯಾವುದೇ ಲಾಭವಾಗಿಲ್ಲ. ಜೊತೆಗೆ ನಿಗಮ ಮಂಡಳಿ ಸ್ಥಾನ ನೀಡಿದ್ದರು ಹೇಳಿಕೊಳ್ಳುವ ಯಾವುದೇ ಬದಲಾವಣೆ ಕಾಣದ ಹಿನ್ನಲೆ ಬಿಜೆಪಿ ಹೈಕಮಾಂಡ್ ಇವರ ಮೇಲೆ ವಿಶ್ವಾಸ ಕಡಿಮೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಕಾರ್ಯಕರ್ತರ ಒಳಜಗಳ : ಈಗಾಗಲೇ ಅಥಣಿ ಬಿಜೆಪಿಯಲ್ಲಿ ಎರಡು ಬಣಗಳಾಗಿ ಪರಿವರ್ತನೆ ಆಗಿದ್ದು ಲಕ್ಷಣ ಸವದಿ ಬಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಜೊತೆಗೆ ಮೂಲ ಬಿಜೆಪಿಗರ ದಂಡೇ ಸವದಿ ಬೆನ್ನಿಗಿದ್ದು, ಹಿಂದಿನ ತಪ್ಪು ತಿದ್ದಿಕೊಂಡು ಮುಂಬರುವ ಚುನಾವಣೆ ಸ್ಪರ್ಧೆಗೆ ತಯಾರಿ ಮಾಡುವ ತವಕದಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಲ್ಲಾ ಹಿನ್ನಲೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಲಕ್ಷಣ ಸವದಿ ಸ್ಪರ್ಧಿಸುವುದು ಪಕ್ಕಾ ಎನ್ನಲಾಗುತ್ತಿದೆ.