
ಗಂಡನ ಆಸೆಗೆ ಬಲಿಯಾದ ಬೈಲಹೊಂಗಲ ಯುವತಿ ; ಭೀಕರ ಹತ್ಯೆ

ಬೈಲಹೊಂಗಲ : ಎರಡನೇ ಪತ್ನಿಯ ಮಾತು ಕೇಳಿ ಮೊದಲನೇ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಪರಾರಿಯಾದ ಘಟನೆ ಸಮೀಪದ ಇಂಚಲ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಇಂಚಲ ಗ್ರಾಮದ ಶಮಾ ಪಠಾಣ್ ( 25 )ಕೊಲೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ. ಆರೋಪಿತರನ್ನು ಧಾರವಾಡ ಲಕ್ಷ್ಮೀಸಿಂಗಕೇರಿಯ ರಿಯಾಜ ಸಾಹೇಬಖಾನ ಪಠಾಣ(30), ಫರ್ಜಾನಾ ರಿಯಾಜ ಪಠಾಣ (28) ಎಂದು ಗುರುತಿಸಲಾಗಿದೆ.
ಇಬ್ಬರು ಆರೋಪಿತರು ಪರಾರಿಯಾಗಿದ್ದು ಡಿವೈಎಸ್‌ಪಿ ಚಿದಂಬರ ಇವರ ಮಾಗದರ್ಶನದಲ್ಲಿ ಪಿಐ ವೀರೇಶ ಮಠಪತಿ ನೇತೃತ್ವದಲ್ಲಿ ತಂಡ ರಚಿಸಿ ಬಂಧನಕ್ಕೆ ಜಾಲ ಬೀಸಿದ್ದಾರೆ.
ಘಟನೆ ಹಿನ್ನಲೆ : ಆರೋಪಿ ರಿಯಾಜ್ ಕಳೆದ ಒಂದು ವರ್ಷದ ಹಿಂದೆ ಫರ್ಜಾನಾ ಎಂಬುವಳನ್ನು ಎರಡನೇ ದುವೆಯಾಗಿದ್ದ. ಮೊದಲನೇ ಹೆಂಡತಿ ಶಮಾ ಹಾಗೂ ರಿಯಾಜ ನಡುವೆ ವೈಮನಸ್ಸು ಉಂಟಾಗಿ ಹೊಂದಾಣಿಕೆ ಆಗದ್ದರಿಂದ ಅವಳಿ ತನ್ನ ತವರುಮನೆ ಇಂಚಲ ಗ್ರಾಮಕ್ಕೆ ಬಂದು ವಾಸವಾಗಿದ್ದಳು.
ಆರೋಪಿತನು ತನ್ನ ಎರಡನೇ ಹೆಂಡತಿ ಫರ್ಜಾನಾ ಇವಳನ್ನು ಸಹ ಇಂಚಲ ಗ್ರಾಮದಲ್ಲಿ ಕರೆದುಕೊಂಡು ಬಂದು ಇಬ್ಬರನ್ನೂ ಬೇರೆ ಮನೆ ಮಾಡಿಟ್ಟಿದ್ದನು. ಎರಡನೇ ಹೆಂಡತಿ ಫರ್ಜಾನಾ ನಿನ್ನ ಮೊದಲ ಹೆಂಡತಿ ಶಮಾ ಇವಳನ್ನು ಬಿಟ್ಟು ಬಾ ನಾವಿಬ್ಬರೂ ಧಾರವಾಡಕ್ಕೆ ಹೋಗಿ ಇರೋಣ ಎಂದು ಹೇಳಿದ್ದಳು.
ರಿಯಾಜ ಪತ್ನಿ ಫರ್ಜಾನ ಮಾತು ಕೇಳಿ ಅವಳ ಕುಮ್ಮಕ್ಕಿನಿಂದ ಶಮಾಳನ್ನು ಬುಧವಾರ ಬೆಳಗಿನ ಜಾವ ಮನೆಯಲ್ಲಿ ಮಲಗಿದಾಗ ಮುಖ ಮತ್ತು ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಲೆ ಮಾಡಿದ್ದಾನೆ ಎಂದು ದಾವಲಸಾಬ ಮಕ್ತುಮಸಾಬ ಬುಡ್ಡನ್ನವರ ಮುರಗೋಡ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ ಪಿ ಬಸರಗಿ, ಡಿವೈಎಸ್ ಪಿ ಚಿದಂಬರ, ಪಿಐ ವೀರೇಶ ಮಠಪತಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.