
ಬೆಳಗಾವಿ ಹುಡುಗಿಯನ್ನು ಅಪಹರಿಸಿ ಅಥಣಿಯಲ್ಲಿ ಮದುವೆಯಾದ ಕಿರಾತಕ

ಬೆಳಗಾವಿ : ಕೇವಲ 50 ಸಾವಿರ ರೂ. ಸಾಲ ವಾಪಸ್ ಕೊಡದಿದ್ದಕ್ಕೆ ಅಪ್ರಾಪ್ತೆಯನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸವದತ್ತಿ ತಾಲೂಕಿನ ಅಪ್ರಾಪ್ತೆ ತಾಯಿಯ ಜೊತೆ ಬೆಳಗಾವಿಯಲ್ಲಿ ವಾಸವಿದ್ದಳು. ಕುಟುಂಬದ ಆಸ್ಪತ್ರೆ ಖರ್ಚಿಗಾಗಿ ಅಪ್ರಾಪ್ತೆಯ ತಾಯಿ ನಗರದ ವಡಗಾಂವಿಯ ರೇಖಾ ಡವಳಿ ಎಂಬುವವರ ಬಳಿ 50 ಸಾವಿರ ರೂ. ಸಾಲ ಪಡೆದುಕೊಂಡಿದ್ದರು.
ಪಡೆದುಕೊಂಡ ಸಾಲಕ್ಕೆ ಅಪ್ರಾಪ್ತೆ ತನ್ನ ಕಿವಿ ಓಲೆಯನ್ನು ಸಾಲಗಾರಿಗೆ ಕೊಟ್ಟು ಸ್ವಲ್ಪ ಸಮಯದ ನಂತರ ಸಾಲ ತೀರಿಸುವುದಾಗಿ ಹೇಳಿದ್ದರು. ಹಣ ವಾಪಸ್ ಕೊಡಲು ತಡವಾಗಿದ್ದಕ್ಕೆ ಕೋಪಗೊಂಡ ಆರೋಪಿ ರೇಖಾ ಡವಳಿ ಅಪ್ರಾಪ್ತೆಗೆ
ಹಣ ಕೊಡುವಂತೆ ಕಿರುಕುಳ ನೀಡಿದ್ದಾಳೆ. ಅಷ್ಟೇ ಅಲ್ಲದೆ ಹಣ ಕೊಡಲು ಸಾಧ್ಯವಾಗದಿದ್ದರೆ ಆರೋಪಿತಳು ತನ್ನ ಮಗ ವಿಶಾಲ್ ಗೆ ಅಪ್ರಾಪ್ತೆಯನ್ನು ಮದುವೆ ಮಾಡಿ ಕೊಡುವಂತೆ ಒತ್ತಾಯಿಸಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದ ಆರೋಪಿ ರೇಖಾ ಪತಿ ಪುಂಡಲಿಕ ಹಾಗೂ ತನ್ನ ಇಬ್ಬರು ಮಕ್ಕಳಾದ ವಿಶಾಲ್ ಹಾಗೂ ಶಾಮ್ ಜೊತೆಗೂಡಿ ಅಪ್ರಾಪ್ತೆಯನ್ನು ಕಳೆದ ನವೆಂಬರ್ 17 ರಂದು ತಮ್ಮ ಮನೆಗೆ ಕರೆದೊಯ್ದಿದ್ದಾರೆ. ತನ್ನ ಮಗಳನ್ನು ಬಿಡುವಂತೆ
ಅಪ್ರಾಪ್ತೆ ತಾಯಿ ಅಂಗಲಾಚಿದರು ಬಿಡದ ಆರೋಪಿತರು ಅಥಣಿಗೆ ಕರೆದೊಯ್ದು ದೇವಸ್ಥಾನ ಒಂದರಲ್ಲಿ ವಿಶಾಲ್ ಜೊತೆ ಅಪ್ರಾಪ್ತೆಯ ಮದುವೆ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ಆರೋಪಿತ ಕುಟುಂಬದವರು ಕಿರುಕುಳ ನೀಡಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಶುಕ್ರವಾರ ನಗರದ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.