
ಸುರ್ಜೇವಾಲ ಸಭೆಯಲ್ಲಿ ಸತೀಶ್ ಬೆಂಬಲಿಗರ ಗಲಾಟೆ ; ಕಾಂಗ್ರೆಸ್ ನಲ್ಲಿ ಒಡಕು…?

ಬೆಳಗಾವಿ : ಸಚಿವ ಸತೀಶ್ ಜಾರಕಿಹೊಳಿ ಅವರ ಪ್ರಯತ್ನದ ಫಲವಾಗಿ ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ನಿರ್ಮಾಣವಾಗಿದೆ. ಈವರೆಗೂ ಕಚೇರಿ ನಿರ್ವಹಣೆ ಕರ್ಚು ಅವರೇ ನೋಡಿಕೊಳ್ಳುತ್ತಿದ್ದು, ಉಳಿದ ನಾಯಕರು ಎಲ್ಲಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಎದುರು ಅಸಮಾಧಾನ ಹೊರಹಾಕಿದರು.
ಶುಕ್ರವಾರ ನಗರದ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ ಜೈ ಬಾಪು, ಜೈ ಭೀಮ್ ಜಾಗೂ ಜೈ ಸಂವಿಧಾನ ಕಾರ್ಯಕ್ರಮ ಪೂರ್ವಭಾವಿ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಸುರ್ಜೇವಾಲ ಎದುರಿಗೆ ಕಾಂಗ್ರೆಸ್ ಭವನ ಕ್ರೆಡಿಟ್ ಕುರಿತು ಕಾರ್ಯಕರ್ತರು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು. ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಹಣ ಕೊಟ್ಟಿದ್ದಾರೆ. ಈಗ ಉಳಿದ ನಾಯಕರು ಎಲ್ಲಿದ್ದಾರೆ. ಕಾಂಗ್ರೆಸ್ ನಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಈ ಸಂದರ್ಭದಲ್ಲಿ ಮುಖಂಡರನ್ನು ಸಮಾಧಾನಪಡಿಸಿದ ಸುರ್ಜೇವಾಲ ರವರು. ಬೆಳಗಾವಿ ನೆಲದಲ್ಲಿ ನಡೆಯಲಿರುವ ಐತಿಹಾಸಿಕ ಸಮಾವೇಶಕ್ಕೆ ರಾಷ್ಟ್ರದ ನಾನಾ ಭಾಗಗಳಿಂದ ಮುಖಂಡರು ಹಾಗೂ ಲಕ್ಷಾಂತರ ಕಾರ್ಯಕರ್ತರು ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಇಡೀ ದೇಶಕ್ಕೆ ಬೆಳಗಾವಿ ನೆಲದ ಪರಿಚಯವಾಗಲಿದೆ. ಈ ಹಿನ್ನಲೆಯಲ್ಲಿ ಪಕ್ಷದ ಪ್ರತಿಯೊಬ್ಬರೂ ಶ್ರಮವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಮಾಜಿ ಸಂಸದ ಡಿ.ಕೆ ಸುರೇಶ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಸಂಸದರು, ಶಾಸಕರು ಹಾಗೂ ಮುಖಂಡರು ಉಪಸ್ಥಿತರಿದ್ದರು.
15 ಶಾಸಕರ ತಂಡ ದುಬೈ ಪ್ರವಾಸ : ಶೀಘ್ರದಲ್ಲೇ 15 ಜನರ ಶಾಸಕರ ತಂಡ ದುಬೈ ಪ್ರವಾಸ ಮಾಡಲಿದ್ದೇವೆ ಎಂದು ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಆಸೀಫ್ ಸೇಠ್ ಸಚಿವಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಈ ಮಧ್ಯೆ ತಾವೂ ಸೇರಿದಂತೆ 15 ಶಾಸಕರು ಶೀಘ್ರದಲ್ಲೇ ದುಬೈ ಪ್ರವಾಸ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ ನಿಮ್ಮ ಜೊತೆ ಪ್ರವಾಸಕ್ಕೆ ಬರುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಇವರು, ಅವರು ನಮ್ಮ ಜೊತೆ ಇರುವುದಿಲ್ಲ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟ ವಿಚಾರ. ಈಗಾಗಲೇ ನಮ್ಮ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ಅವರಿದ್ದು ಬದಲಾವಣೆ ಪ್ರಶ್ನೆ ಬರುವುದಿಲ್ಲ. ಸತೀಶ್ ಜಾರಕಿಹೊಳಿ ಅವರಿಗೆ ಅಧ್ಯಕ್ಷ ಹುದ್ದೆ ನೀಡಿದರೆ ನಿಭಾಯಿಸುವ ಶಕ್ತಿ ಇದೆ ಎಂದು ಹೇಳಿದರು.