ಅಚ್ಚರಿ ಬೆಳವಣಿಗೆ ; ಮಹಾರಾಷ್ಟ್ರ ಸಿಎಂ ಹುದ್ದೆಗೆ ಹೊಸ ಮುಖ…?
ಮಹಾರಾಷ್ಟ್ರ : ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಬಂದು ವಾರ ಕಳೆಯುತ್ತಾ ಬಂದರೂ ಮಹಾಯುತಿ ಮೈತ್ರಿಕೂಟದಿಂದ ಈವರೆಗೂ ಸಿಎಂ ಅಭ್ಯರ್ಥಿ ಆಯ್ಕೆ ನಡೆದಿಲ್ಲ. ಈ ಮಧ್ಯೆ ಹೆಚ್ಚು ಸ್ಥಾನ ಗೆದ್ದ ಬಿಜೆಪಿಯಿಂದ ಸಿಎಂ ಹುದ್ದೆಗೆ ಹೊಸ ಮುಖ ಬಂದರೂ ಅಚ್ಚರಿ ಪಡಬೇಕಿಲ್ಲ.
ಹೌದು ಈ ಬಾರಿ ಮಹಾರಾಷ್ಟ್ರದಲ್ಲಿ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಲು ಬಿಜೆಪಿ, ಶಿವಸೇನೆ ಹಾಗೂ ಎನ್ ಸಿ ಪಿ ಮೂರು ಪಕ್ಷದ ಮತ ಸಮೀಕರಣವೇ ಕಾರಣ. ಮರಾಠಾ ಸಮುದಾಯದ ಜೊತೆ ಒಬಿಸಿ ಹಾಗೂ ಹಿಂದುಳಿದ ವರ್ಗದ ಮತ ಒಟ್ಟಾಗಿ ಬಂದ ಹಿನ್ನಲೆಯಲ್ಲಿ ಈ ಗೆಲುವು ಸಿಕ್ಕಿದೆ. ಈ ಎಲ್ಲಾ ಕಾರಣಕ್ಕೆ ಸೂಕ್ತ ಅಭ್ಯರ್ಥಿ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್ ಕಸರತ್ತು ನಡೆಸಿದೆ.
ಮಹಾರಾಷ್ಟ್ರದ ರಾಜಕಾರಣದಲ್ಲಿ ಅಚ್ಚರಿ ಬೆಳವಣಿಗೆ ನಡೆದಿದೆ. ಪುಣೆ ಸಂಸದ ಮುರಳಿಧರ್ ಮೊಹೋಲ್ ಮಹಾರಾಷ್ಟ್ರದ ಸಿಎಂ ಅಭ್ಯರ್ಥಿ ಎಂದು ಬಲವಾಗಿ ಕೇಳಿಬರುತ್ತಿದೆ. ಈ ಕುರಿತು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಜೋರಾಗಿ ನಡೆಯುತ್ತಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಆಗಿರುವ
ಮುರಳಿಧರ್ ಮೊಹೋಲ್ ಅವರು ಸಧ್ಯ ಬಿಜೆಪಿ ಸಂಸದ. ಈ ಹಿಂದೆ ಪುಣೆಯ ಮೇಯರ್ ಹುದ್ದೆ ಅಲಂಕರಿಸಿದ್ದರು. ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮುರಳಿಧರ್ ಮೊಹೋಲ್ ಅವರು ಪ್ರಸ್ತುತ ಮೋದಿ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಹಾಗೂ ಸಹಕಾರ ಸಚಿವಾಲಯದ ರಾಜ್ಯ ಖಾತೆ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಾಜಿ ಸಿಎಂ ದೇವೆಂದ್ರ ಫಡ್ನವಿಸ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆ ಅಲಂಕರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.