Select Page

Advertisement

ಹೆಮ್ಮಯ ಕರುನಾಡ ಸಂಗೀತ ಸಾಧಕ ಪಂಡಿತ್ ಕುಮಾರ್ ಗಂಧರ್ವ – ವಿಶೇಷ ಅಂಕಣ

ಹೆಮ್ಮಯ ಕರುನಾಡ ಸಂಗೀತ ಸಾಧಕ ಪಂಡಿತ್ ಕುಮಾರ್ ಗಂಧರ್ವ – ವಿಶೇಷ ಅಂಕಣ

ಕರುನಾಡಿನ ಬಹುತೇಕ ಎಲ್ಲರೂ ಪಂಡಿತ್ ಕುಮಾರ್ ಗಂಧರ್ವರ ಹೆಸರು ಕೇಳಿಯೇ ಕೇಳಿರ್ತೀರಾ..ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಮಹಾನ್ ಸಾಧನೆಗೈದ ಮಹಾನ್ ಸಂಗೀತ ಸಾಧಕ ಪಂಡಿತ್ ಕುಮಾರ ಗಂಧರ್ವರು.

ಪಂಡಿತ್ ಕುಮಾರ್ ಗಂಧರ್ವರ ಹುಟ್ಟು ಹೆಸರು ಶಿವಪುತ್ರ ಸಿದ್ದರಾಮಯ್ಯ ಕೊಂಕಾಳಿಮಠ..ಹುಟ್ಟಿದ್ದು 8 ಏಪ್ರಿಲ್ 1924 ರಂದು ಬೆಳಗಾವಿ ಜಿಲ್ಲೆಯ ಸುಳೇಭಾವಿ ಗ್ರಾಮದಲ್ಲಿ.

ಕುಮಾರ ಗಂಧರ್ವರಿಗೆ ಗಾಯನದ ಮೇಲಿನ ಆಸಕ್ತಿ ಅವರು ಐದು ವರ್ಷದವರು ಇದ್ದಾಗಲೇ ಆರಂಬವಾಯಿತು.ವೇದಿಕೆ ಮೇಲೆ ಅವರು ಗಾಯನ ಕಾರ್ಯಕ್ರಮ ಕೊಟ್ಟಾಗ ಅವರಿಗೆ ಕೇವಲ ಹತ್ತು ವರ್ಷ..ನಂತರ ಗಂಧರ್ವರಿಗೆ 11 ವರ್ಷವಿದ್ದಾಗ ಅವರ ತಂದೆಯವರು ಅವರನ್ನ ಸಂಗೀತ ಅಧ್ಯಯನ ಮಾಡಲು ಪ್ರಸಿದ್ಧ ಶಾಸ್ತ್ರೀಯ ಸಂಗೀತ ಶಿಕ್ಷಕರಾಗಿದ್ದ ಬಿ ಆರ್ ದೇವದರ ಅವರ ದೇವದರ್ ಸ್ಕೂಲ್ ಆಫ್ ಮ್ಯೂಸಿಕ್ ಗೇ ಕಳಿಸಿ ಕೊಡುತ್ತಾರೆ.ಕೇವಲ 9 ವರ್ಷದಲ್ಲಿ ಸಂಗೀತದಲ್ಲಿ ಅಪಾರವಾದ ಪಾಂಡಿತ್ಯವನ್ನು ತೋರಿಸಿ ತಮ್ಮ 20 ನೇ ವಯಸ್ಸಿನಲ್ಲಿಯೇ ದೇವದರ್ ಸಂಗೀತ ಶಾಲೆಯಲ್ಲಿ ಸಂಗೀತ ಶಿಕ್ಷಣ ಕಲಿಸಲು ಪ್ರಾರಂಭ ಮಾಡುತ್ತಾರೆ..ಅಲ್ಲಿಂದ ಸಂಗೀತದ ತಾರೆಯಾಗಿ ಪಂಡಿತ್ ಕುಮಾರ ಗಂಧರ್ವರು ಹೊರ ಹೊಮ್ಮಿ ನಂತರ ನಡೆದದ್ದು ಇತಿಹಾಸ.

ಕರುನಾಡಿನ ಕುಲಪುತ್ರ ಪಂಡಿತ್ ಕುಮಾರ ಗಂಧರ್ವರು ಮಧ್ಯಪ್ರದೇಶದಲ್ಲಿ ಕೂಡಾ ಹೆಸರುವಾಸಿ ಆಗಿದ್ದಾರೆ..ಹಿಂದೂಸ್ತಾನಿ ಸಂಗೀತದ ಸವಿ ರುಚಿಯನ್ನು ಜನರಿಗೆ ತಮ್ಮದೇ ಆದ ವಿಶಿಷ್ಟವಾದ ಶೈಲಿಯಲ್ಲಿ ನೀಡಿದ ಕೀರ್ತಿ ಕುಮಾರ ಗಂಧರ್ವರಿಗೆ ಸಿಗುತ್ತದೆ..ಶಾಸ್ತ್ರೀಯ ಸಂಗೀತದ ಒಂದು ರೂಪವಾದ ಘರಾಣೆಯನ್ನು ಹಾಡುವ ಸಾಂಪ್ರದಾಯಿಕ ಶೈಲಿಯನ್ನು ಮುರಿದು ತಮ್ಮದೇ ಶೈಲಿಯಲ್ಲಿ ಹಾಡಿ ಪ್ರಸಿದ್ಧರಾಗುತ್ತಾರೆ…ಅನೇಕ ಹೊಸ ರಾಗಗಳಿಗೆ ಜೀವ ನೀಡುತ್ತಾರೆ ಕುಮಾರ ಗಂಧರ್ವರು..ತಾವು ಸೃಷ್ಟಿಸಿದ ರಾಗಗಳಿಗೆ “ಧುನ್ ಉಗಮ ರಾಗಗಳು” ಎಂದೂ ಪಂಡಿತ್ ಗಂಧರ್ವರು ಕರೆಯುತ್ತಾರೆ..ಜನರ ಅಭಿರುಚಿಗೇ ತಕ್ಕಂತೆ ಸರಣಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಕರ್ನಾಟಕ ಮತ್ತು ಮಧ್ಯಪ್ರದೇಶದ ಎರಡು ರಾಜ್ಯದ ಜನರ ಮನದಲ್ಲಿ ಉಳಿದಿರುವ ಸಂಗೀತ ಸರಸ್ವತಿಯ ಪುತ್ರ ಪಂಡಿತ್ ಕುಮಾರ್ ಗಂಧರ್ವರು..

40ನೇ ದಶಕದ ಉತ್ತರಾರ್ಧದಲ್ಲಿ ಗಂಧರ್ವರು ಬಹುದೊಡ್ಡ ತಿರುವಿಗೆ ಒಳಗಾಗುತ್ತಾರೆ..ಕ್ಷಯರೋಗಕ್ಕೆ ತುತ್ತಾಗುವ ಗಂಧರ್ವರಿಗೆ ವೈದ್ಯರು ಇನ್ನು ಮುಂದೆ ಸಂಗೀತ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಿಲ್ಲವೆಂದು ಹೇಳುತ್ತಾರೆ..ಆದರೆ ಅದೇ ಸಮಯದಲ್ಲಿ ವೈದ್ಯರು ಅವರಿಗೊಂದು ಸಲಹೆ ನೀಡುತ್ತಾರೆ..ನಿಮ್ಮ ಆರೋಗ್ಯದ ಸುಧಾರಣೆಗಾಗಿ ಮಧ್ಯಪ್ರದೇಶದ ದೇವಾಸ್ ಕೆ ಹೋಗಿ ಅಲ್ಲಿನ ಶುಷ್ಕ ವಾತಾವರಣದಲ್ಲಿ ನೆಲೆಸುವುದು ಒಳಿತೆಂದು..ನಂತರ ಆರು ವರ್ಷಗಳ ಕಾಲ ಅನಾರೋಗ್ಯ ಪೀಡಿತರಾಗಿ ಯಾವುದೇ ಸಂಗೀತ ಕಚೇರಿಯನ್ನು ನೀಡಲು ಸಾಧ್ಯವಾಗದೇ ಹಾಸಿಗೆ ಹಿಡಿಯುತ್ತಾರೆ..ನಂತರ 1952 ರಲ್ಲಿ ಕ್ಷಯರೋಗದ ನಿವಾರಣೆಗಾಗಿ ಬಿಡುಗಡೆ ಆದ ಸ್ಟ್ರೆಪ್ಟೊಮೈಸಿನ್ ಔಷದಿಯನ್ನು ತೆಗೆದುಕೊಳ್ಳುತ್ತಾ ಚೇತರಿಸಿಕೊಂಡು ನಂತರ ಮತ್ತೆ 1953 ರಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಭ ಮಾಡುತ್ತಾರೆ..

ಪಂಡಿತ್ ಕುಮಾರ್ ಗಂಧರ್ವರ ಸಂಗೀತದ ಸಾಧನೆಯನ್ನು ಗಮನಸಿ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು 1977 ರಲ್ಲಿ ಭಾರತ ಸರ್ಕಾರ ನೀಡುತ್ತದೆ..ಹಾಗೆಯೇ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು 1990 ರಲ್ಲಿ ಭಾರತ ಸರ್ಕಾರ ನೀಡಿ ಗೌರವಿಸಿದೆ..ಕುಮಾರ ಗಂಧರ್ವ ಅವರಿಗೆ ಸಿಕ್ಕಿರುವ ಇನ್ನೆರಡು ವಿಶೇಷ ಗೌರವಗಳು ಯಾವವುವೆಂದರೆ ಮಧ್ಯಪ್ರದೇಶದ ದೇವಾಸ ಪಟ್ಟಣದ ಚಾಮುಂಡಿ ಮಾತಾ ಮಂದಿರಕ್ಕೆ ಹೋಗುವ ಮಹಾದ್ವಾರಕ್ಕೆ “ಪಂಡಿತ್ ಕುಮಾರ ಗಂಧರ್ವ ಮಹಾದ್ವಾರ”ವೆಂದು ಮಧ್ಯಪ್ರದೇಶ ಸರ್ಕಾರ ನಾಮಕಾರಣ ಮಾಡಿದೆ..ದೇವಾಸ ಚಾಮುಂಡಿ ಮಾತಾ ಮಂದಿರವು ದೇಶದಲ್ಲಿರುವ 58 ಶಕ್ತಿಪೀಠಗಳಲ್ಲಿ ಒಂದಾಗಿದೆ..ಹಾಗೆಯೇ ಪಂಡಿತ್ ಕುಮಾರ ಗಂಧರ್ವರ ನೆನಪಿಗಾಗಿ ಅಂಚೆ ಇಲಾಖೆಯು 2014 ರಲ್ಲಿ ಸ್ಟ್ಯಾಂಪ್ ಪೇಪರ್ ಅನ್ನು ಬಿಡುಗಡೆ ಮಾಡಿದೆ.

ಪಂಡಿತ್ ಕುಮಾರ ಗಂಧರ್ವರ ಮಗ ಮುಕುಲ್ ಶಿವಪುತ್ರ ಅವರು ಕೂಡಾ ಸಂಗೀತಗಾರರಾಗಿ ಪ್ರಸಿದ್ದಿ ಹೊಂದಿದ್ದಾರೆ. ಹಾಗೆಯೇ ಮೊಮ್ಮಗ ಭುವನೇಶ ಮತ್ತು ಮೊಮ್ಮಗಳಾದ ಕಲಾಪಿನಿ ಅವರು ಕೂಡಾ ಹಿಂದೂಸ್ತಾನಿ ಸಂಗೀತದಲ್ಲಿ ಅಪಾರವಾದ ಸಾಧನೆ ಮಾಡುತ್ತಾ ಸಾಗಿದ್ದಾರೆ ಜೊತೆಗೆ ಮೊಮ್ಮಗ ಭುವನೇಶ್ ಅವರು ಮಧ್ಯಪ್ರದೇಶದ ದೇವಾಸ ನಲ್ಲಿ ಪ್ರಸ್ತುತ ಹಿಂದೂಸ್ತಾನಿ ಸಂಗೀತದ ಶಿಕ್ಷಣವನ್ನು ಕಲಿಸುವ ಕಾರ್ಯವನ್ನು ಕೂಡಾ ಮಾಡುತ್ತಿದ್ದಾರೆ ಅವರ ಹತ್ತಿರ ಕರ್ನಾಟಕದ ವಿದ್ಯಾರ್ಥಿಗಳು ಕಲಿಯಲು ಇರುವುದು ವಿಶೇಷ..ಸಂಗೀತ ಸರಸ್ವತಿಯ ಪುತ್ರ ಮಹಾನ್ ಸಾಧಕ ಕುಮಾರ ಗಂಧರ್ವರು ನಮ್ಮ ಕರುನಾಡಿನ ಸುಪುತ್ರ ಅನ್ನುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.

✍️ಪ್ರಕಾಶ್ ತೋಟಗೇರ
ವಾಯ್ಸ್ ವಿಥ್ ಹೊರನಾಡ ಕನ್ನಡಿಗ

Advertisement

Leave a reply

Your email address will not be published. Required fields are marked *