ಅಥಣಿ : ಹಿಪ್ಪರಗಿ ಆಣೆಕಟ್ಟು ಯೋಜನೆ ಕಚೇರಿ ಅವ್ಯವಸ್ಥೆ ಆಗರ / ಶೌಚಾಲಯದಲ್ಲಿ ಸಾರಾಯಿ ಬಾಟಲ್
ಅಥಣಿ : ತಾಲೂಕಿನ ಹೃದಯಭಾಗದಲ್ಲಿರುವ ಹಿಪ್ಪರಗಿ ಆಣೆಕಟ್ಟು ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿ ಅವ್ಯವಸ್ಥೆ ಆಗರವಾಗಿದೆ. ದಿನನಿತ್ಯ ಸಾವಿರಾರು ಜನ ಕಚೇರಿ ಕೆಲಸಕ್ಕೆ ಬರುವವರು ಶೌಚಾಲಯಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸ್ವಚ್ಛ ಭಾರತ ಪರಿಕಲ್ಪನೆಯಲ್ಲಿ ದೇಶ ಸ್ವಚ್ಚತೆ ಕಡೆಗೆ ಗಮನಹರಿಸುತ್ತಿದ್ದರೆ ಇತ್ತ ಸರ್ಕಾರಿ ಕಚೇರಿಗಳು ಮಾತ್ರ ಸ್ವಚ್ಚತಾ ಪರಿಕಲ್ಪನೆ ದೂರ ತಳ್ಳಿ ಅವ್ಯವಸ್ಥೆ ಆಗರವಾಗುತ್ತಿರುವುದು ದುರಂತವೇ ಸರಿ. ಸರ್ಕಾರಿ ಕೆಲಸಕ್ಕೆ ಅಲೆದಾಡುವ ರೈತರು ಹಾಗೂ ಮಹಿಳೆಯರು ಶೌಚಾಲಯಕ್ಕೆ ಹೋಗಬೇಕಾದರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಥಣಿ ತಾಲೂಕಿನ ಹಿಪ್ಪರಗಿ ಆಣೆಕಟ್ಟು ಯೋಜನೆ ಕಚೇರಿ ಅವ್ಯವಸ್ಥೆ ನೋಡಿದರೆ ತಿಳಿಯುತ್ತದೆ ಅಧಿಕಾರಿಗಳು ಯಾವ ರೀತಿಯಲ್ಲಿ ಸ್ವಚ್ಚತೆ ಕುರಿತು ಜಾಗೃತಿ ಹೊಂದಿದ್ದಾರೆ ಎಂದು. ಇಲ್ಲಿನ ಶೌಚಾಲಯ ಪರಿಸ್ಥಿತಿ ನೋಡಿದರೆ ಎಂತವರಿಗೂ ಅಸಹ್ಯ ಹುಟ್ಟುವುದು ಸಹಜ. ದೊಡ್ಡ ಕಚೇರಿ ಸ್ಥಾಪಿಸಿ ಲಕ್ಷಾಂತರ ರೂ ಸಂಬಳ ಪಡೆಯುವ ಅಧಿಕಾರಿಗಳು ಜನರಿಗೆ ಅನುಕೂಲಕರ ವಾತಾವರಣ ಮೂಡಿಸಬೇಕೆ ಹೊರತು ಈ ರೀತಿಯಲ್ಲಿ ಕಚೇರಿ ಆವರಣ ಹಾಗೂ ವ್ಯವಸ್ಥೆ ತಮಗೆ ಸಂಬಂಧ ಇಲ್ಲದಂತೆ ವರ್ತಿಸುತ್ತಿರುವುದು ಎಷ್ಟು ಸರಿ.