ಲಾಭದ ನಡುವೆ ರೈತನ ಕೈ ಬಿಡದ ಸಾಹುಕಾರ ; ಮಹತ್ವದ ನಿರ್ಧಾರ ಕೈಗೊಂಡ ಬೆಮುಲ್..!

ಬೆಳಗಾವಿ : ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುತ್ತಿರುವ ಕ್ರಿಯಾಶೀಲ ಸದಸ್ಯರು ಮರಣ ಹೊಂದಿದ್ದಲ್ಲಿ ಅಂತಹ ಕುಟುಂಬಗಳಿಗೆ 60 ಸಾವಿರ ರೂಪಾಯಿ ಮತ್ತು ಹಾಲು ಪೂರೈಕೆ ಮಾಡದ ರೈತ ಸದಸ್ಯರು ಮರಣ ಹೊಂದಿದ್ದಲ್ಲಿ 25 ಸಾವಿರ ರೂಪಾಯಿಗಳನ್ನು ನೀಡಲು ಒಕ್ಕೂಟವು ನಿರ್ಧರಿಸಿದೆ.
ಶುಕ್ರವಾರ, ಅರಭಾವಿ ಶಾಸಕರೂ ಆಗಿರುವ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಅಧ್ಯಕ್ಷತೆಯಲ್ಲಿ ಜರುಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮರಣ ಹೊಂದಿದ ರೈತ ಸದಸ್ಯರಿಗೆ 1 ಲಕ್ಷ ರೂಪಾಯಿವರೆಗೆ ವಿಮಾ ಸೌಲಭ್ಯವನ್ನು ಕಲ್ಪಿಸಿಕೊಡುವ ಟೆಂಡರ್ ಪ್ರಕ್ರಿಯೆ ಕರೆಯುವ ಇರಾದೆ ಹೊಂದಿತ್ತರಾದರೂ ಕಡೆ ಗಳಿಗೆಯಲ್ಲಿ ವಯೋಮಾನದ ಹಿನ್ನೆಲೆಯಲ್ಲಿ ಇದನ್ನು ರದ್ದುಪಡಿಸಿ ರೈತರ ಹಿತದೃಷ್ಟಿಯಿಂದ 70 ವರ್ಷ ಮೇಲ್ಪಟ್ಟ ರೈತರು ಈ ಯೋಜನೆಗೆ ಒಳಪಡಲಿದ್ದಾರೆ.
ಕಂತು ವಿಮೆ ಜಾರಿಗೆ ಮಾಡಿದ್ದರೆ 18 ರಿಂದ 70 ವರ್ಷ ಒಳಗಿನ ರೈತರು ಮಾತ್ರ ಈ ಯೋಜನೆಗೆ ಒಳಪಡುತ್ತಿದ್ದರು. ಇದರಿಂದ ಸುಮಾರು 5 ಸಾವಿರ ರೈತರು ಈ ವಿಮಾ ಯೋಜನೆಯಿಂದ ಹೊರಗುಳಿಯಬೇಕಾಯಿತು. ಇದನ್ನು ಮನಗಂಡು ಎಲ್ಲ ವಯೋಮಾನದವರಿಗೂ ನೀಡುವ ಉದ್ದೇಶದಿಂದ ಕಂತು ವಿಮೆ ಸೌಲಭ್ಯವನ್ನು ರದ್ದು ಮಾಡಿ ಒಕ್ಕೂಟದಿಂದಲೇ ರೈತ ಕಲ್ಯಾಣ ಸಂಘಕ್ಕೆ ನೇರವಾಗಿ ಪಾವತಿಸಲು ಕ್ರಮ ಕೈಗೊಂಡಿರುವುದಾಗಿ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಜಿಲ್ಲೆಯಲ್ಲಿ ಸುಮಾರು 33 ಸಾವಿರ ರೈತರು ನಮ್ಮ ಒಕ್ಕೂಟದ ಸದಸ್ಯರಿದ್ದು, ಇದರಲ್ಲಿ 12 ರಿಂದ 15 ಸಾವಿರ ರೈತರು ಹಾಲು ಪೂರೈಕೆ ಮಾಡುತ್ತಿದ್ದು, ಉಳಿದ 18 ಸಾವಿರ ಸದಸ್ಯರು ಹಾಲು ಹಾಕದೇ ಒಕ್ಕೂಟದ ಸದಸ್ಯತ್ವವನ್ನು ಪಡೆದಿದ್ದಾರೆ ಎಂದು ತಿಳಿಸಿದರು.
12.59 ಕೋಟಿ ರೂಪಾಯಿ ಲಾಭ : ಸನ್ 2025-26 ನೇ ಸಾಲಿನಲ್ಲಿ ಬೆಳಗಾವಿ ಹಾಲು ಒಕ್ಕೂಟಕ್ಕೆ ಸುಮಾರು 12.59 ಕೋಟಿ ರೂಪಾಯಿ ಲಾಭಾಂಶ ಬಂದಿದೆ. ಇದರಲ್ಲಿ ಬಂದ ಲಾಭಾಂಶದಲ್ಲಿ ಶೇ. 60 ರ ರಿಯಾಯತಿ ದರದಲ್ಲಿ ರೈತರಿಗೆ ವಿವಿಧ ಉಪಕರಣಗಳ ಖರೀದಿಗೆ ಒತ್ತು ನೀಡಲಾಗಿದೆ.
ಅಂದಾಜು 2.50 ಕೋಟಿ ರೂಪಾಯಿ ವೆಚ್ಚದಲ್ಲಿ 10 ಸಾವಿರ ರಬ್ಬರ್ ಮ್ಯಾಟ್ಗಳು, ಸುಮಾರು 1.68 ಕೋಟಿ ರೂಪಾಯಿ ವೆಚ್ಚದಲ್ಲಿ 400 ಚಾಪ್ ಕಟರ್, ಅಂದಾಜು 35 ಲಕ್ಷ ರೂಪಾಯಿ ವೆಚ್ಚದಲ್ಲಿ 100 ಹಾಲು ಕರೆಯುವ ಯಂತ್ರಗಳನ್ನು ವಿತರಿಸಲಾಗುತ್ತದೆ.
40 ಸಂಘಗಳ ಕಟ್ಟಡಗಳಿಗೆ ತಲಾ 5 ಲಕ್ಷ
ರೂಪಾಯಿಗಳಂತೆ ಪ್ರತಿ ಸಂಘಗಳಿಗೆ ನೀಡಲಾಗುತ್ತಿದ್ದು ಇದಕ್ಕಾಗಿ 2 ಕೋಟಿ ರೂಪಾಯಿ ವೆಚ್ಚವನ್ನು ವ್ಯಯ ಮಾಡಲಾಗುತ್ತಿದೆ. ಒಕ್ಕೂಟಕ್ಕೆ ಬಂದ ಲಾಭಾಂಶದಲ್ಲಿ ಅಂದಾಜು 6.53 ಕೋಟಿ ರೂಪಾಯಿ ವೆಚ್ಚವನ್ನು ರೈತರಿಗೆ ಖರ್ಚು ಮಾಡುತ್ತಿರುವುದಾಗಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಹೇಳಿದರು.
ಸಭೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ. ಬಸವರಾಜ ಪರನ್ನವರ, ಬಾಬುರಾವ ವಾಘ್ಮೊಡೆ, ವಿರುಪಾಕ್ಷ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರಿ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಶಂಕರ ಇಟ್ನಾಳ, ಸವಿತಾ ಖಾನಪ್ಪಗೋಳ, ವಸಂತ ಕರಿಗಾರ, ಅಜೀತ ದೇಸಾಯಿ, ಬಸವರಾಜ ಮಾಳೆದವರ, ವ್ಯವಸ್ಥಾಪಕ ನಿರ್ದೇಶಕ ಡಾ. ಶ್ರೀಕಾಂತ್ ಅವರು ಉಪಸ್ಥಿತರಿದ್ದರು.

