ಅಥಣಿ ಪುರಸಭೆಗಾಗಿ ಸಾಹುಕಾರರ ಅಸಲಿ ಆಟ ; ಜಾರಕಿಹೊಳಿ ಮಾಡುವರಾ ಕಮಾಲ್…?
ಅಥಣಿ: ತೀವ್ರ ಕುತೂಹಲ ಕೆರಳಿಸಿರುವ ಸ್ಥಳೀಯ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷರ ಗದ್ದುಗೆಯ ಚುನಾವಣೆ ಸೆ. 02 ರಂದು ಜರುಗಲಿದ್ದು, ಇಬ್ಬರು ಸಾಹುಕಾರ್ ಮಧ್ಯೆ ಜಟಾಪಟಿ ಜೋರಾಗಿದೆ. ಇತ್ತ ಶಾಸಕ ಲಕ್ಷ್ಮಣ ಸವದಿ ಹಾಗೂ ಅತ್ತ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ನಡುವೆ ಗದ್ದುಗೆ ಗುದ್ದಾಟ ಏರ್ಪಟ್ಟಿದೆ ಎಂಬ ಸುದ್ದಿ ಜೋರಾಗಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸ್ವತಃ ಮಗಳನ್ನೇ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದ ಸಚಿವ ಸತೀಶ್ ಜಾರಕಿಹೊಳಿ ನಂತರದ ದಿನಗಳಲ್ಲಿ ಶಾಸಕ ಲಕ್ಷ್ಮಣ ಸವದಿ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದರು. ನಮ್ಮ ವಿರುದ್ಧ ಷಡ್ಯಂತ್ರ ಮಾಡಲಾಗಿದ್ದು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಕಡಿಮೆ ಮತ ಬಂದಿವೆ ಎಂದು ಆರೋಪಿಸಿದ್ದರು.
ಇದರ ಮುಂದುವರಿದ ಭಾಗವಾಗಿ ಕಾಂಗ್ರೆಸ್ ತೆಕ್ಕೆಯಲ್ಲಿರುವ ಅಥಣಿ ಪುರಸಭೆಯಲ್ಲಿ ಸಧ್ಯ ಸ್ವಪಕ್ಷದಲ್ಲೇ ಒಡಕು ಉಂಟಾಗಿದೆ. ಮೂಲ ಕಾಂಗ್ರೆಸ್ ನಾಯಕರು ಹಾಗೂ ವಲಸಿಗ ಕಾಂಗ್ರೆಸ್ ನಾಯಕರ ನಡುವಿನ ಜಗಳದಲ್ಲಿ ಸಾಹುಕಾರ್ ನಡುವಿನ ಕಾಳಗ ಎಂದೇ ಬಿಂಬಿತವಾಗುತ್ತಿದೆ. ಕೆಲ ದಿನಗಳು ಬಾಕಿ ಇರುವಾಗ ಮೂಲ ಕಾಂಗ್ರೆಸ್ಸಿನ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮೂಲಕ ಹೈದರಾಬಾದ್ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ.
ಪ್ರಸ್ತುತ ಪುರಸಭೆಯಲ್ಲಿ ಒಟ್ಟು 27 ಸದಸ್ಯರ ಸಂಖ್ಯೆ ಇದ್ದು, ಅದರಲ್ಲಿ ಕಾಂಗ್ರೆಸ್ 15, ಪಕ್ಷೇತರ 03 ಬಿಜೆಪಿಯಿಂದ ಕಾಂಗ್ರೆಸ್‌ಗೆ ವಲಸೆ ಬಂದ 09 ಜನ ಸದಸ್ಯರು ಸೇರಿದಂತೆ 27 ಸದಸ್ಯರ ಬಲ ಹೊಂದಿದೆ. ಸಚಿವ ಸತೀಶ್ ಜಾರಕಿಹೊಳಿ ಆಪ್ತರಾದ ಶಿವಲೀಲಾ ಸದಾಶಿವ ಬುಟಾಳಿ ಮತ್ತು ವಿದ್ಯಾ ರಾವಸಾಬ ಐಹೊಳೆ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಮೂಲ ಕಾಂಗ್ರೆಸ್ಸಿನ 15 ಜನ ಸದಸ್ಯರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿಯವರನ್ನು ಭೇಟಿಯಾಗಿ ಒಂದು ಸುತ್ತಿನ ಮಾತುಕತೆ ನಡೆಸಿ ನಂತರ ಹೈದರಾಬಾದ ರೆಸಾರ್ಟ್ ನಲ್ಲಿ ಠಿಕಾಣಿ ಹೂಡಿದ್ದಾರೆ ಎನ್ನುವ ಚರ್ಚೆ ಈಗ ಜೋರಾಗಿದೆ.
ಇನ್ನೂ ಶಾಸಕ ಲಕ್ಷ್ಮಣ್ ಸವದಿ ಅವರ ಬೆಂಬಲಿತ ಗುಂಪಿನಲ್ಲಿ ಗುರುತಿಸಿಕೊಂಡಿರುವ ಶಾಂತಾ ದಿಲೀಪ ಲೋನಾರೆ ಅಧ್ಯಕ್ಷೆ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಶಾಸಕ ಲಕ್ಷ್ಮಣ ಸವದಿ ಅವರೊಂದಿಗೆ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ವಲಸಿ ಬಂದಿರುವ ಸದಸ್ಯರು ಸದ್ಯ ಮೌನ ವಹಿಸಿದ್ದಾರೆ. ಸಧ್ಯದ ಪರಿಸ್ಥಿತಿ ನೋಡಿದರೆ ಮೂಲ ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ಬಣ ಮೇಲುಗೈ ಸಾಧಿಸುವ ಲಕ್ಷಣ ಗೋಚರಿಸುತ್ತಿದೆ.