Select Page

ಸ್ವರ್ಣಯುಗ ಸ್ಥಾಪನೆಗೆ ಪದವೀಧರರ ಶ್ರಮ ಅವಶ್ಯ ; ರಾಜ್ಯಪಾಲ ಗೆಹ್ಲೋಟ್

ಸ್ವರ್ಣಯುಗ ಸ್ಥಾಪನೆಗೆ ಪದವೀಧರರ ಶ್ರಮ ಅವಶ್ಯ ; ರಾಜ್ಯಪಾಲ ಗೆಹ್ಲೋಟ್

ಬೆಳಗಾವಿ : ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಹಾಗೂ ಕರ್ನಾಟಕವನ್ನು ಜಾಗತಿಕ ತಾಂತ್ರಿಕ ಶಿಕ್ಷಣ ಕೇಂದ್ರವನ್ನಾಗಿಸಲು ವಿಟಿಯು ಅನುಷ್ಠಾನ ಮಾಡಿದ ಕಾರ್ಯಕ್ರಮಗಳು ಶ್ಲಾಘನೀಯ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಂದು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು. ಇವತ್ತಿನ ಪದವೀಧರರು ರಾಷ್ಟ್ರದಲ್ಲಿ ಮತ್ತೆ ಸ್ವರ್ಣಯುಗವನ್ನು ಸ್ಥಾಪಿಸಿ ವಿಶ್ವಗುರವನ್ನಾಗಿ ಮಾಡಲು ಶ್ರಮಿಸಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.

ಶನಿವಾರ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನ ಸಂಗಮ ಆವರಣದ ಡಾ. ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಟಿಯು 24 ನೇ ವಾರ್ಷಿಕ ಘಟಿಕೋತ್ಸವದ ಭಾಗ – 2 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಯುವಕರು ಪರಿಸರ ಸಂರಕ್ಷಣೆಯತ್ತ ಗಮನ ಹರಿಸಬೇಕು. ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.‌

ಖ್ಯಾತ ವಿಜ್ಞಾನಿ ಹಾಗೂ ಕನ್ಯಾಕುಮಾರಿಯ ನೂರುಲ್ ಇಸ್ಲಾಂ ಸೆಂಟರ್ ಫಾರ್ ಹೈಯರ್ ಎಜುಕೇಶನ್ ಕುಲಪತಿ ಡಾ. ಟೆಸ್ಸಿ ಥಾಮಸ್ ಮಾತನಾಡಿ. ಘಟಿಕೋತ್ಸವ ಸಮಾರಂಭ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣವನ್ನು ಪ್ರತಿಬಿಂಬಿಸುವ ಜೊತೆಗೆ ವೃತ್ತಿಜೀವನದಲ್ಲಿ ಸಾಧಿಸುವ ಸಾಧನೆ ದಾರಿ‌ ಆಗಲಿದೆ. ನೀವು ಪದವಿಯ ಜೊತೆಗೆ ನಿಮ್ಮ ತಾಂತ್ರಿಕ ಪರಿಣತಿ ಅನ್ವಯ ಸಮಾಜಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಪ್ರತಿಜ್ಞೆ ಮಾಡುತ್ತಿದ್ದೀರಿ ಎಂದು ಹೇಳಿದರು.

ನಾವೆಲ್ಲರು ಇವತ್ತು ಅತೀ ವೇಗದ ತಾಂತ್ರಿಕ ಪ್ರಗತಿಯ ಯುಗದಲ್ಲಿ ಬದುಕುತ್ತಿದ್ದೇವೆ. ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ಬ್ಲಾಕ್‌ಚೈನ್, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಬಾಹ್ಯಾಕಾಶ ಪರಿಶೋಧನೆಗಳು ಜಗತ್ತನ್ನು ಮರು ರೂಪಿಸುತ್ತಿವೆ. ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ದಶಕದ ಹಿಂದೆ ಊಹಿಸಲೂ ಸಾಧ್ಯವಿರಲಿಲ್ಲ. ಆದರೆ ಇಂದು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿವೆ. ಆದ್ದರಿಂದ ಇವತ್ತಿನ ಪದವೀಧರರು ಈ ಕ್ರಿಯಾತ್ಮಕ ಹಾಗೂ ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವ ಜಗತ್ತಿಗೆ ಕಾಲಿಡುತ್ತಿದ್ದಂತೆ ಅದಕ್ಕೆ ತಕ್ಕಂತೆ ಹೊಂದಿಕೊಳ್ಳಲು, ಕಲಿಯಲು ಮತ್ತು ನಾವೀನ್ಯತೆ ಸಾಧಿಸಲು ಸಿದ್ಧರಾಗಿರಬೇಕು ಎಂದು ಹೇಳಿದರು.

ವಿಕಸಿತ ಭಾರತ್ 2047, ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾದಂತಹ ಯೋಜನಗಳು ನಮ್ಮ ದೇಶವು ತಂತ್ರಜ್ಞಾನ, ಉತ್ಪಾದನೆ ಮತ್ತು ನಾವೀನ್ಯತೆಯಲ್ಲಿ ಜಾಗತಿಕವಾಗಿ ನಾಯಕನಾಗಲು ಸಜ್ಜಾಗಿದೆ. ಈ ಸಮಯದಲ್ಲಿ ಇವತ್ತಿನ ಎಂಜಿನಿಯರ್‌ ಪದವೀಧರರಾದ ನೀವು ಹವಾಮಾನ ಬದಲಾವಣೆ, ಸಂಪನ್ಮೂಲ ಕೊರತೆ, ಅಸಮಾನತೆ ಮತ್ತು ಜಾಗತಿಕ ಆರೋಗ್ಯ ಬಿಕ್ಕಟ್ಟುಗಳಂತಹ ಸವಾಲುಗಳಿಗೆ ಸುಸ್ಥಿರ ಪರಿಣಾಮಕಾರಿ ಪರಿಹಾರಗಳನ್ನು ಕಂಡುಕೊಂಡು ಮಾದರಿ ಸಮಾಜದ ವಾಸ್ತುಶಿಲ್ಪಿಗಳಂತೆ ಕೆಲಸಮಾಡಬೇಕಿದೆ ಎಂದು ಹೇಳಿದರು.

ಘಟಿಕೋತ್ಸವ ಆರಂಭದಲ್ಲಿ ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ್ ಎಸ್. ಸ್ವಾಗತ ಭಾಷಣ ‌ಮಾಡಿದರು. ತಾಂತ್ರಿಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ವಿಟಿಯು ಅನುಷ್ಠಾನಗೊಳಿಸಲಾದ ಯೋಜನೆಗಳ ಬಗ್ಗೆ ಹಾಗೂ ವಿಶ್ವವಿದ್ಯಾಲಯದ ಇತ್ತೀಚಿನ ಸಾಧನೆಗಳ ಪರಿಚಯ ‌ಮಾಡಿಕೊಟ್ಟರು. ಕುಲಸಚಿವಪ್ರೊ. ಬಿ. ಈ. ರಂಗಸ್ವಾಮಿ ಸ್ವರ್ಣ ಪದಕ ಪಡೆದ ಪದವೀಧರರು ಪಡೆದ ದತ್ತಿ ಬಹುಮಾನಗಳನ್ನು ವಿವರಿಸಿದರು. ಮೌಲ್ಯಮಾಪನ ದಂಡವನ್ನು ಹಿಡಿದ ಕುಲಸಚಿವರಾದ ಪ್ರೊ. ಟಿ. ಎನ್. ಶ್ರೀನಿವಾಸ ಅವರು ಘಟಿಕೋತ್ಸವದ ಪಥಸಂಚಲನವನ್ನು ಮುನ್ನಡೆಸಿದರು.

ಕಾರ್ಯಕ್ರಮದಲ್ಲಿ ಎಂಬಿಎ – 7194, ಎಂ,ಟೆಕ್ – 1313, ಎಂ, ಆರ್ಚ್ – 83, ಎಂ, ಪ್ಲ್ಯಾನ್ – 23 ಪದವಿಗಳ ಜೊತೆ 425 – ಪಿ ಹೆಚ್ ಡಿ,03 – ಎಂ ಎಸ್ಸಿ.ಬೈ ರಿಸರ್ಚ್ ಹಾಗೂ 05 – ಇಂಟಿಗ್ರೇಟೆಡ್ ಡುಯಲ್ ಡಿಗ್ರಿ ಪದವಿ ಜೊತೆಗೆ ಚಿನ್ನದ ‌ಪದಕ ವಿಜೇತರಿಗೆ ಪ್ರಶಸ್ತಿ ಪ್ರದಾನ ‌ಮಾಡಲಾಯಿತು.
ಈ ಸಂದರ್ಭದಲ್ಲಿ ವಿಟಿಯು ಡೀನ್ ಪ್ರೊ. ಸದಾಶಿವೆಗೌಡ, ಹಣಕಾಸು ಅಧಿಕಾರಿ ಡಾ ಪ್ರಶಾಂತ ನಾಯಕ್ ಜಿ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!