ನುಂಗಣ್ಣರ ಕೈಗೆ ಸಿಕ್ಕ ಬೆಳಗಾವಿ ; ಕಣ್ಣಿದ್ದು ಕುರುಡರಾದ ಬುಡಾ ಆಯುಕ್ತರು, ಬಾಚಿಕೊಳ್ಳುವುದೇ ಅಧ್ಯಕ್ಷರ ಕಾಯಕವಾಯ್ತಾ….? ಉಸ್ತುವಾರಿ ಸಚಿವರೆ ಸ್ವಲ್ಪ ಕಣ್ಣಾಡಿಸಿ…!

ಬೆಳಗಾವಿ : ಸಧ್ಯ ಬೆಳಗಾವಿ ನಗರದ ನುಂಗಣ್ಣರ ಕೈಗೆ ಸಿಕ್ಕು ನರಳಾಡುತ್ತಿದೆ. ಸರಕಾರಿ ಆಸ್ತಿ ಉಳಿಸುವ ಜವಾಬ್ದಾರಿ ಹೊತ್ತ ಅಧಿಕಾರಿಗಳೇ ಜನಪ್ರತಿನಿಧಿಗಳ ಮಾತಿಗೆ ಬಲಿಯಾಗಿ ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ಇನ್ನೂ ನಂಬಿಕೆ ಇಟ್ಟು ಅಧಿಕಾರಿಗಳಿಗೆ ಸ್ವಾತಂತ್ರ್ಯ ಕೊಟ್ಟ ಉಸ್ತುವಾರಿ ಸಚಿವರು ಕೊಂಚ ಸಮಯ ಮಾಡಿಕೊಂಡು ನುಂಗಣ್ಣರ ಮೇಲೆ ಒಂದು ಕಣ್ಣಿಟ್ಟರೆ ಜನರಿಗೆ ಒಳಿತಾಗಲಿದೆ.
ಹೌದು ಅಲ್ಪಸಂಖ್ಯಾತರ ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ವಸತಿ ನಿಲಯದ ಅಧಿಕಾರಿಯೊಬ್ಬ ಮೇಲಿನವರ ಕೃಪಾಶಿರ್ವಾದದಿಂದ ಸರಕಾರಿ ಜಮೀನು ಕಬಳಿಸುವ ಮಟ್ಟಿಗೆ ಧೈರ್ಯ ತೋರಿದ್ದಾನೆ ಎಂದರೆ ಇದರ ಹಿಂದೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತರು ಹಾಗೂ ಮುಡಾ ಅಧ್ಯಕ್ಷರ ಪಾತ್ರದ ಕುರಿತು ಅನುಮಾನ ಮೂಡುತ್ತಿದೆ. ಜೊತೆ ಸಾರ್ವಜನಿಕ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಹೌದು ಬೆಳಗಾವಿ ಉತ್ತರ ಮತಕ್ಷೇತ್ರದ ವ್ಯಾಪ್ತಿಗೆ ಬರುವ ರಾಮತೀರ್ಥ ನಗರದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ಶಾಲೆಯ ಮುಂದಿನ ಬುಡಾ ಇಲಾಖೆಗೆ ಸೇರಿದ್ದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಲ್ಲದೆ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಲಕ್ಷಾಂತರ ಹಣ ಖರ್ಚು ಮಾಡಿ ತಡೆಗೋಡೆ ನಿರ್ಮಿಸಿದ್ದು ಈ ಹಣ ಯಾರ ಜೇಬಿನಿಂದ ಬಂದಿದೆ ಎಂಬ ಅನುಮಾನ ಹಲವರಲ್ಲಿ ಮೂಡಿದೆ. ಹಾಸ್ಟೆಲ್ ಮಕ್ಕಳಿಗೆ ಸರಿಯಾದ ಊಟ ಕೊಡಲು ಶಕ್ತಿ ಇರದ ವಸತಿ ನಿಲಯದ ಮುಖ್ಯಸ್ಥ ಲಕ್ಷಾಂತರ ರೂ. ಕರ್ಚು ಮಾಡಲ ಹೇಗೆ ಸಾಧ್ಯವಾಯಿತು ಎಂಬ ಮಾತು ಕೇಳಿಬರುತ್ತಿವೆ.
ಸಧ್ಯ ಘಟನೆ ಕುರಿತು ನಿವೃತ್ತ ಸೈನಿಕರ ಸಂಘ ಹೋರಾಟ ಮಾಡಿದ್ದು ಇವರ ಜೊತೆ ಬಿಜೆಪಿ ಕೈ ಜೋಡಿಸಿದ ಪರಿಣಾಮ ಅತಿಕ್ರಮಣ ಆಗಿದ್ದ ರಾಮತೀರ್ಥನಗರದಲ್ಲಿನ ಸರ್ವೆ ನಂ 561 ಮತ್ತು 562 ಸಿಎ ನಿವೇಶನದಲ್ಲಿ ಎಸ್‌ಟಿಪಿ ಪ್ಲಾಂಟ್ ಸ್ಥಾಪನೆಗೆ ಮೀಸಲಿಟ್ಟ 20 ಗುಂಟೆ ಜಮೀನನ್ನು ಬುಡಾ ವಾಪಸ್ ಪಡೆದುಕೊಂಡಿದೆ. ಕೇವಲ ಪ್ರತಿಭಟನೆಗೆ ಈ ಜಮೀನು ವಾಪಸ್ ಬಂದಿದೆ ಎಂದರೆ ಕಾಣದ ಕೈಗಳು ಎಷ್ಟು ಅನಾಚಾರ ಮಾಡಿರಬಹುದು ಎಂದು ಅಂದಾಜಿಸಲು ಸಾಧ್ಯವಿಲ್ಲ.
ಇನ್ನೂ ಈ ಘಟನೆ ಕುರಿತು ನಗರಾಭಿವೃದ್ಧಿ ಜಲಾಖೆ ಆಯುಕ್ತರು ಹಾಗೂ ಅಧ್ಯಕ್ಷರ ಕಾರ್ಯವೈಖರಿ ಕುರಿತು ಸಾಕಷ್ಟು ಅನುಮಾನ ಮೂಡಿದೆ. ಬುಡಾ ಭೂಮಿ ಅತಿಕ್ರಮಣದ ಮಾಹಿತಿ ನೀಡಿದರು ಇವರೆಲ್ಲ ಸುಮ್ಮನೆ ಇದ್ದದ್ದು ಏಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಹಾಗಾದರೆ ಇವರಿಗೆಲ್ಲ ಮೂಗುದಾರ ಹಾಕುವವರು ಯಾರು ಎಂಬ ಪ್ರಶ್ನೆ ಮೂಡಿದೆ.
ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಧಿಕಾರಿಗಳಿಗೆ ನೀಡುವ ಹೆಚ್ಚಿನ ಸ್ವಾತಂತ್ರ್ಯ ಎಲ್ಲೋ ಒಂದುಕಡೆ ಸ್ವಾರ್ಥಕ್ಕಾಗಿ ಬಳಕೆ ನಡೆಯುತ್ತಿದೆ ಎಂಬ ಮಾತು ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ತಮಗೆ ಬೇಕಾದ ರೀತಿಯಲ್ಲಿ ಕಾನೂನು ಉಪಯೋಗಿಸಿಕೊಂಡು ಅಧಿಕಾರಿಗಳು ದರೋಡೆಗೆ ವರ್ತಿಸುತ್ತಿದ್ದು ಇವರನ್ನು ಸರಿ ದಾರಿಗೆ ತರುವ ಕೆಲಸ ಉಸ್ತುವಾರಿ ಸಚಿವರದ್ದಾಗಿದ್ದು ಈ ಕುರಿತು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

