ಮಹಾತಪಸ್ವಿ ಶಿವಯೋಗಿಗಳು ಈ ನಾಡು ಕಂಡ ಶ್ರೇಷ್ಠ ಸಂತ : ಚಕ್ರವರ್ತಿ ಸೂಲಿಬೆಲೆ
ಅಥಣಿ : ಮನುಷ್ಯ ಬದುಕಿನ ಸಾರ್ಥಕ ಕ್ಷಣ ಅವರು ತೀರಿಹೋದ ನಂತರ ಎಷ್ಟು ನೆನಪಿಸಿಕೊಳ್ಳುತ್ತಾರೆ ಎಂಬುದ ಮೇಲೆ ನಿಂತಿರುತ್ತದೆ. ಅಥಣಿ ಶಿವಯೋಗಿಗಳನ್ನು ನೂರು ವರ್ಷಗಳ ನಂತರವೂ ನೆನಪಿಸಿಕೊಳ್ಳುತ್ತೇವೆ ಎಂದರೆ ಮಹಾನ್ ತಪಸ್ವಿಗಳ ಬದುಕು ಎಷ್ಟು ಅರ್ಥಪೂರ್ಣವಾಗಿತ್ತು ಎಂಬುದನ್ನು ತಿಳಿಸುತ್ತದೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.
ಭಾನುವಾರ ಗಚ್ಚಿನ ಮಠದ ವಿದ್ಯಾಪೀಠ ಆವರಣದಲ್ಲಿ ನಡೆಯುತ್ತಿರುವ ಮುರುಘೇಂದ್ರ ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಹಾಗೂ ಶಿವಬಸವ ಶ್ರೀಗಳ ನಿರಂಜನ ಚರಪಟ್ಟಾಧಿಕಾರ ಮೂರನೇ ದಿನದ ಸಮಾರಂಭದಲ್ಲಿ ಯುವ ಸಮಾವೇಶ ಕುರಿತು ಮಾತನಾಡಿದ ಇವರು. ಗುರುಸೇವೆಗೆಂದು ಮಠಕ್ಕೆ ಧನ ಅಪ್ಪಣೆ ಮಾಡುತ್ತೇವೆ ಆದರೆ ಅಥಣಿ ಮುರುಘೇಂದ್ರ ಶಿವಯೋಗಿಗಳ ತಂದೆ ತಾಯಿ ಮಗನನ್ನೇ ಮಠಕ್ಕೆ ಅರ್ಪಣೆ ಮಾಡಿದ್ದು ಶತಮಾನದ ಮಹತ್ವದ ಕಾರ್ಯ. ಅದೇ ಶಿವಯೋಗಿಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಧ್ವನಿಯಾಗಿ ನಮ್ಮ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದು ಇವರ ಸಂದೇಶ ಇಂದಿನ ಪೀಳಿಗೆಗೆ ನೀಡುವ ಕೆಲಸ ಮಾಡಬೇಕಾಗಿದೆ ಎಂದರು.
ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ. ಅಥಣಿ ನೆಲವನ್ನು ಭವ್ಯ ತಪೋನೆಲವನ್ನಾಗಿ ಮಾಡಿದವರು ಮುರುಘೇಂದ್ರ ಶಿವಯೋಗಿಗಳು. ಇಂತಹ ಮಹಾನ್ ತಪಸ್ವಿಗಳ ಲಿಂಗೈಕ್ಯ ಶತಮಾನೋತ್ಸವ ಆಚರಣೆ ಮಾಡುವ ಅಮೃತ ಘಳಿಗೆ ನಮಗೆ ಲಭಿಸಿದ್ದು ಪೂರ್ವಜನ್ಮದ ಪುಣ್ಯ ಎಂದರು. ಶ್ರೀಮಠಕ್ಕೆ ಶಿವಬಸವ ಶ್ರೀಗಳ ಚರಪಟ್ಟಾಧಿಕಾರ ನಡೆಯುತ್ತಿದ್ದು, ಒಬ್ಬ ಸರ್ವಧರ್ಮಿಯರನ್ನು ಪ್ರೀತಿಸುವ ಹಾಗೂ ಅಥಣಿ ಶಿವಯೋಗಿಗಳು ಹಾಕಿಕೊಟ್ಟ ಹಾದಿಯಲ್ಲಿ ಇವರು ನಡೆಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಹರಿಹರದ ವೇಮನ ಗುರುಪೀಠದ ವೇಮನಾನಂದ ಸ್ವಾಮೀಜಿ ಮಾತನಾಡಿ. ಅಥಣಿ ಶಿವಯೋಗಿಗಳು ಈ ನಾಡು ಕಂಡ ಶ್ರೇಷ್ಠ ಸಂತರು. ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದಲ್ಲಿ ಈ ದೇಶವನ್ನು ದಾರ್ಮಿಕ ಹೊಸತನದ ಮೂಲಕ ಬದಲಾವಣೆ ತಂದರು.ವಮುರುಘೇಂದ್ರ ಶಿವಯೋಗಿಗಳು ಎಲ್ಲರ ಧರ್ಮಿಯರು ಪ್ರೀತಿಸುವ ಮಹಾನ್ ವ್ಯಕ್ತಿಯಾಗಿದ್ದು ಇಂತವರ ಹಾದಿಯಲ್ಲಿ ನಾವೆಲ್ಲ ನಡೆಯಬೇಕಾಗಿದೆ ಎಂದರು.
ಭೋವಿ ಗುರುಪೀಠದ ಇಮ್ಮುಡಿ ಸಿದ್ಧರಾಮೇಶ್ವರ ಶ್ರೀಗಳು ಮಾತನಾಡಿ. ಭಾರತ ಆಧ್ಯಾತ್ಮಿಕವಾಗಿ ಅತ್ಯಂತ ಶ್ರೀಮಂತಿಕೆ ಹೊಂದಿರುವ ನಾಡು. ಅಥಣಿ ತಾಲೂಕಿನ ಒಂದು ಹಳ್ಳಿಯಲ್ಲಿ ಹುಟ್ಟಿದ ಮಹಾನ್ ಸಂತ ಈ ನಾಡಿನ ಉದ್ಧಾರಕ್ಕಾಗಿ ಶ್ರಮಿಸಿದವರು. ಲಿಂಗ ಪೂಜೆ ಹಾಗೂ ಗುರುಭಕ್ತಿಗೆ ಮಹಾನ್ ನಿದರ್ಶನ ಶಿವಯೋಗಿ ಅಪ್ಪಗಳು. ಇವರ ಲಿಂಗೈಕ್ಯ ಶತಮಾನೋತ್ಸವವನ್ನು ಶಿವಬಸವ ಶ್ರೀಗಳು ಅತ್ಯಂತ ಅಚ್ಚುಕಟ್ಟಾಗಿ ನೆರವೇರಿಸಿಕೊಂಡು ಹೋಗುತ್ತಿದ್ದಾರೆ. ಒಬ್ಬ ವಿದ್ಯಾವಂತ ಯುವ ಸ್ವಾಮೀಜಿಗಳು ಅಥಣಿ ಶಿವಯೋಗಿಗಳ ಮಠದ ಪೀಠಕ್ಕೆ ಪಟ್ಟಾಧಿಕಾರ ಆಗುತ್ತಿರುವುದು ಅತ್ಯಂತ ಸಂತೋಷದ ಸಂಗತಿ ಎಂದರು.
ಈ ಸಂದರ್ಭದಲ್ಲಿ ಚಿತ್ರದುರ್ಗದ ಶ್ರೀ ಶಿವಮೂರ್ತಿ ಮುರುಘಾ ಶರಣರು, ಕವಲಗುಡ್ಡದ ಅಮರೇಶ್ವರ ಮಹಾರಾಜರು, ಅಥಣಿ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸರಿಗಮಪ ಚಾಂಪಿಯನ್ ಸ್ಪರ್ಧೆಗಳು ಸಂಗೀತ ಸಂಭ್ರಮ ಹಾಗೂ ನಿಶ್ಚಲ್ ನೇತ್ರಾನಂದ ಅವರು ಕಾರ್ಯಕ್ರಮ ನಡೆಸಿಕೊಟ್ಟರು.