
ಚಿಕ್ಕೋಡಿ : ಕುಸಿದ ಮನೆ ಗೋಡೆ ; ಅದೃಷ್ಟವಶಾತ್ ಬದುಕುಳಿದ ಕುಟುಂಬ

ಚಿಕ್ಕೋಡಿ : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಈ ನಡುವೆ ಮನೆಗಳ ಗೋಡೆಗಳ ಕುಸಿತ ಹೆಚ್ಚಾಗುತ್ತಿದ್ದು ಜನ ಭಯದಿಂದ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ರಾಮನಗರದಲ್ಲಿರುವ ರಾಜಕುಮಾರ ಬಾಳಪ್ಪಗೋಳ ಎಂಬುವವರ ಮನೆ ಗೋಡೆ ಮಳೆಗೆ ಉರುಳಿದೆ. ತಕ್ಷಣ ಮನೆಯಿಂದ ಹೊರಗೆ ಓಡಿಬಂದ
ಪರಿಣಾಮ ಕುಟುಂಬದವರು ಸುರಕ್ಷಿತವಾಗಿ ಬಚಾವ್ ಆಗಿದ್ದಾರೆ. ಇದ್ದ ಮನೆ ಗೋಡೆ ಕುಸಿದ ಪರಿಣಾಮ ಕುಟುಂಬದ ಸದಸ್ಯರು ವಾಸಿಸಲು ಸೂರುಇಲ್ಲದ ಪರಿಸ್ಥಿತಿಯಲ್ಲಿದ್ದಾರೆ.
ಸೋರುತ್ತಿದೆ ಡಿಡಿಪಿಐ ಕಚೇರಿ : ಬೆಳಗಾವಿ: ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿಯ ಡಿಡಿಪಿಐ ಕಚೇರಿ ಸೋರುತ್ತಿದ್ದು, ಸಿಬ್ಬಂದಿಗಳು ಛತ್ರಿ ಹಿಡಿದು ಕೆಲಸ ಮಾಡುವ ದುಸ್ಥಿತಿ ಬಂದೊದಗಿದೆ.
ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹಾಗಾಗಿ ಸೋರುತ್ತಿರುವ ಕಚೇರಿ ಒಳಗಡೆ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಸುಮಾರು 50 ವರ್ಷ
ಹಳೆಯದಾದ ಕಚೇರಿ ಇದಾಗಿದ್ದು ಸಧ್ಯ ಮಳೆಯಿಂದ ಸೋರುತ್ತಿದೆ. ಸಧ್ಯ ಕಚೇರಿಯಲ್ಲಿನ ಮಹತ್ವದ ದಾಖಲೆಗಳು ಸಹ ನೀರು ಪಾಲಾಗುವ ಆತಂಕ ಎದುರಾಗಿದೆ.
ದಿನನಿತ್ಯ ನೂರಾರು ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ಕೆಲಸಗಳಿಗೆ ಡಿಡಿಪಿಐ ಕಚೇರಿಗೆ ಬರುತ್ತಾರೆ. ಆದರೆ, ಒಂದು ಸುಸಜ್ಜಿತ ಕಟ್ಟಡ ನಿರ್ಮಿಸಲು ಆಗದ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.