
ಜಿಲ್ಲಾ ಕೇಂದ್ರದಲ್ಲೇ ಛತ್ರಿ ಹಿಡಿಯುವ ಪರಿಸ್ಥಿತಿ ; ಡಿಡಿಪಿಐ ಕಚೇರಿ ದುಸ್ಥಿತಿ

ಬೆಳಗಾವಿ : ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿಯ ಡಿಡಿಪಿಐ ಕಚೇರಿ ಸೋರುತ್ತಿದೆ. ಸೋರುತ್ತಿರುವ ಕಚೇರಿಯಲ್ಲಿ ಛತ್ರಿ ಹಿಡಿದು ಕೆಲಸ ಮಾಡುವ ದುಸ್ಥಿತಿ ಇಲ್ಲಿನ ಸಿಬ್ಬಂದಿಗಳಿಗೆ ಬಂದೊದಗಿದೆ.
ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಹಾಗಾಗಿ ಸೋರುತ್ತಿರುವ ಕಚೇರಿ ಒಳಗಡೆ ಸಿಬ್ಬಂದಿಗಳು ಕೆಲಸ ಮಾಡಲು ಹೈರಾಣಾಗಿ ಹೋಗಿದ್ದಾರೆ. ಕಚೇರಿಯಲ್ಲಿ ಛತ್ರಿ ಹಿಡಿದು ಕೂರಬೇಕು, ಅಲ್ಲದೇ ಒಂದು
ಕೊಠಡಿಯಿಂದ ಮತ್ತೊಂದು ಕೊಠಡಿಗೆ ಹೋಗಲು ಕೂಡ ಛತ್ರಿ ಹಿಡಿದುಕೊಂಡೇ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಅಲ್ಲದೇ ಕಚೇರಿಯಲ್ಲಿನ ಮಹತ್ವದ ದಾಖಲೆಗಳು ಸಹ ನೀರು ಪಾಲಾಗುವ ಆತಂಕವಿದೆ.
ಸುಮಾರು 50 ವರ್ಷಗಳಷ್ಟು ಹಳೆಯ ಕಟ್ಟಡ ಇದು. ಒಂದೆಡೆ ಗೋಡೆಗುಂಟ ಸೋರುತ್ತಿದ್ದರೆ, ಮತ್ತೊಂದೆಡೆ ಒಡೆದ ಹಂಚುಗಳಿಂದ ನೀರು ಸೋರುತ್ತಿದೆ. ಹಾಗಾಗಿ, ಅಲ್ಲಲ್ಲಿ ಬಕೆಟ್ ಗಳನ್ನು ಇಟ್ಟು ಸೋರುವ ನೀರು ಸಂಗ್ರಹಿಸಲಾಗುತ್ತಿದೆ.
ಆದರೂ ಇಡೀ ಕಚೇರಿ ತುಂಬಾ ನೀರೋ ನೀರು ಎನ್ನುವಂತಾಗಿದ್ದು, ಸಿಬ್ಬಂದಿಗೆ ಸಾಕು ಸಾಕಾಗಿ ಹೋಗಿದೆ. ಇತ್ತ ಬಾಯಿ ಬಿಟ್ಟು ಏನಾದರೂ ಹೇಳಿದರೆ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರದ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ ಎಂದು ಸೋರುವ ಕಚೇರಿಯಲ್ಲೆ ಕಾಯಕ ಮಾಡುವ ಅನಿವಾರ್ಯತೆ ಇಲ್ಲಿನ ಸಿಬ್ಬಂದಿಗಳಿಗೆ ಎದುರಾಗಿದೆ.
ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿರುವ ಪ್ರಭಾರ ಡಿಡಿಪಿಐ ಮೋಹನಕುಮಾರ ಹಂಚಾಟೆ, ಇದು ಬಹಳ ಹಳೆಯ ಕಟ್ಟಡ. ಕಳೆದ ಮೂರನಾಲ್ಕು ದಿನಗಳಿಂದ ನಿರಂತರ ಮಳೆಯಿಂದ ಈ ರೀತಿ ಆಗಿದೆ. ಹಾಗಾಗಿ, ಎರಡ್ಮೂರು
ದಿನಗಳಲ್ಲಿ ತಾತ್ಕಾಲಿಕವಾಗಿ ಪ್ಲಾಸ್ಟಿಕ್ ಮತ್ತು ತಗಡುಗಳನ್ನು ಹಾಕಿ, ಮಳೆ ನೀರು ಸೋರದಂತೆ ನೆರಳಿನ ವ್ಯವಸ್ಥೆ ಮಾಡುತ್ತೇವೆ. ಅಲ್ಲದೇ ಇದು ಲೋಕೋಪಯೋಗಿ ಇಲಾಖೆ ಕಟ್ಟಡ ಆಗಿದ್ದರಿಂದ ಇದನ್ನು ನವೀಕರಣ ಮಾಡುವ ಸಂಬಂಧ ಇಂಜಿನಿಯರ್ ಸಂಪರ್ಕಿಸಿದ್ದು, ಅವರು ಎಸ್ಟಿಮೇಟ್ ಮಾಡಿ
ಕೊಡುತ್ತೇನೆ ಎಂದಿದ್ದಾರೆ. ಅದನ್ನು ಸರ್ಕಾರಕ್ಕೆ ಕಳಿಸುತ್ತೇವೆ. ಆದಷ್ಟು ಬೇಗನೇ ಸರ್ಕಾರದಿಂದ ಮಂಜೂರಾತಿ ಪಡೆದುಕೊಂಡು ಕಟ್ಟಡ ನವೀಕರಣ ಮಾಡಲಾಗುವುದು ಎಂದು ಹೇಳಿದರು.
ಒಟ್ಟಿನಲ್ಲಿ ದಿನನಿತ್ಯ ನೂರಾರು ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ತಮ್ಮ ಕೆಲಸಗಳಿಗೆ ಡಿಡಿಪಿಐ ಕಚೇರಿಗೆ ಬರುತ್ತಾರೆ. ಆದರೆ, ಒಂದು ಸುಸಜ್ಜಿತ ಕಟ್ಟಡ ನಿರ್ಮಿಸಲು ಆಗದ ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.