
ಕೇಂದ್ರ ಬಜೆಟ್ ; ನಾಯಕರ ಪ್ರತಿಕ್ರಿಯೆ

ಮೂಡಲಗಿ : ರೈತರು, ಮಹಿಳೆಯರು, ಯುವಜನತೆ ಹಾಗೂ ಬಡ ವರ್ಗದ ಜನರ ಜೀವನಮಟ್ಟ ಸುಧಾರಿಸುವುದು ಸೇರಿದಂತೆ ದೇಶದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿ, ಬಡತನ ಮುಕ್ತ ಭಾರತ ನಿರ್ಮಾಣಕ್ಕೆ ನಾಂದಿ ಹಾಡುವ ವಿಕಸಿತ ಭಾರತ ನಿರ್ಮಾಣದ ದೃಢ ಹೆಜ್ಜೆಗೆ ಈ ಬಜೆಟ್ ಪೂರಕವಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು 2025-26 ನೇ ಸಾಲಿನ ಬಜೆಟ್ ನಲ್ಲಿ ಕೃಷಿ, ಶಿಕ್ಷಣ, ಆರೋಗ್ಯ, ಕೈಗಾರಿಕೆ, ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಪೂರಕವಾಗಿದೆ.
ಕೃಷಿ ಎನ್ನುವುದು ಭಾರತದ ಅಭಿವೃದ್ಧಿಯ ಮೊದಲ ಇಂಜಿನ್ ಆಗಿದೆ. ಪ್ರಧಾನ ಮಂತ್ರಿ ಧನಧಾನ್ಯ ಕೃಷಿ ಯೋಜನೆಯಿಂದ 1.7 ಕೋಟಿ ರೈತರಿಗೆ ಅನುಕೂಲವಾಗುತ್ತಿದೆ. ಈ ಯೋಜನೆಯಿಂದ ಕಡಿಮೆ ಉತ್ಪಾದಕತೆ ಹೊಂದಿರುವ 100 ಜಿಲ್ಲೆಗಳನ್ನು ಒಳಗೊಂಡ ಕೃಷಿ ಯೋಜನೆ ರೂಪಿಸಲಾಗುತ್ತಿದೆ. ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್ ಕ್ರೆಡಿಟ್ ಕಾರ್ಡ್ನ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.
ರೈತರ ಅನುಕೂಲಕ್ಕಾಗಿ ವಾರ್ಷಿಕ 12.7 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯದ 3 ಯೂರಿಯಾ ಪ್ಲಾಂಟ್ ನಿರ್ಮಾಣ. ಗುಣಮಟ್ಟದ ಹತ್ತಿಗಾಗಿ ಹೆಚ್ಚುವರಿ ಉದ್ದವಾದ ಪ್ರಧಾನ ಹತ್ತಿ ಪ್ರಭೇದಗಳಿಗೆ ಸಹಾಯ ಮಾಡಲು ಐದು ವರ್ಷಗಳ ಕಾಲ ಹತ್ತಿ ಉತ್ಪಾದಕತೆಗಾಗಿ ಮಿಷನ್ ಘೋಷಣೆ. ಯುವಕರನ್ನು ಕೃಷಿ ಕ್ಷೇತ್ರಕ್ಕೆ ಆರ್ಕಷಿಸಲು ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಬೆಳಗಾವಿ : ದೇಶದ ಕೃಷಿ, ಸಾರಿಗೆ, ಕೈಗಾರಿಕೆ, ಉದ್ಯೋಗ , ವೈದ್ಯಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳು ಅಭಿವೃದ್ಧಿಗೆ
ಕೇಂದ್ರ ಸರ್ಕಾರ ಪೂರಕ ಬಜೆಟ್ ಮಂಡನೆ ಮಾಡಿದೆ. 12 ಲಕ್ಷಗಳ ವರೆಗಿನ ಆದಾಯ ತೆರಿಗೆ ವಿನಾಯಿತಿ ನೀಡಿರುವ ವಿಕಸಿತ ಭಾರತ ಕನಸು ನನಸಾಗಿಸುವ ಬಜೆಟ್ ಇದಾಗಿದೆ.
ದೇಶದ ಅಭಿವೃದ್ಧಿಗಾಗಿ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ.
ಶಂಕರ್ ಗೌಡ ಪಾಟೀಲ್
ನಿಕಟ ಪೂರ್ವ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ
ಕೇಂದ್ರದ ಬಜೆಟ್ ರಾಜ್ಯದ ಯಾವುದೇ ಬೇಡಿಕೆ ಈಡೇರಿಲ್ಲ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಕೇಂದ್ರ ಸರ್ಕಾರದ ಬಜೆಟ್ ರಾಜ್ಯದ ಪಾಲಿಗೆ ಕರಾಳವಾಗಿದೆ. ಕೇಂದ್ರದ ಬಜೆಟ್ನಿಂದ ಕರ್ನಾಟಕದ ಯಾವುದೇ ಬೇಡಿಕೆ ಈಡೇರಿಲ್ಲ. ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ಈ ಬಜೆಟ್ ನೋಡಿದರೆ ರಾಜ್ಯದ ಕೇಂದ್ರ ಸಚಿವರೆಲ್ಲ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರ ಸರ್ಕಾರದ ಬಜೆಟ್ ಅನ್ನು ಟೀಕಿಸಿದ್ದಾರೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿಗೆ ಬಜೆಟ್ ಮಂಡಿಸಿದ್ದು, ಬಜೆಟ್ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು, ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೊಡುವ ಕೆಲಸ ಆಗಿಲ್ಲ. ಕರ್ನಾಟಕ ರಾಜ್ಯದ ಜನರ ತೆರಿಗೆ ಬೇರೆ ರಾಜ್ಯದ ಪಾಲಾಗುತ್ತಿದೆ. ಬಿಹಾರ ರಾಜ್ಯಕ್ಕೆ ಐದಾರು ಯೋಜನೆಗಳನ್ನು ನೀಡಿದ್ದಾರೆ. ಹಾಗಾದರೆ ಕರ್ನಾಟಕದವರು ಏನು ಮಾಡಬೇಕೆಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕ, ಮಲೆನಾಡು ಕರ್ನಾಟಕಕ್ಕೆ ಏನೂ ನೀಡಿಲ್ಲ. ಬೆಂಗಳೂರು ನಗರಕ್ಕೂ ಯಾವುದೇ ಅನುದಾನ ಘೋಷಿಸಿಲ್ಲ. ರಾಜ್ಯದ ಕೇಂದ್ರ ಸಚಿವರು, ಸಂಸದರು ರಾಜ್ಯಕ್ಕೆ ಯೋಜನೆಗಳನ್ನು ತರುವಲ್ಲಿ ವಿಫಲವಾಗಿದ್ದಾರೆ. ರಾಜ್ಯದ ಜನತೆಯ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಇದು ಸಂಪೂರ್ಣ ನಿರಾಶಾದಾಯಕ ಬಜೆಟ್ ಆಗಿದೆ ಎಂದರು.
ಬಜೆಟ್ ನಲ್ಲಿ ಯುವಕರಿಗೆ ನ್ಯಾಯ ಒದಗಿಸುವ ಕೆಲಸವಾಗಿಲ್ಲ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ
ಬೆಳಗಾವಿ: ಕೇಂದ್ರ ಸರ್ಕಾರದ ಬಜೆಟ್ ಮಧ್ಯಮ ವರ್ಗ, ರೈತರು ಸೇರಿದಂತೆ ಎಲ್ಲ ವರ್ಗಗಳನ್ನು ಕಡೆಗಣಿಸಿದೆ. ಬಜೆಟ್ ನಲ್ಲಿ ಯುವಕರಿಗೂ ನ್ಯಾಯ ಒದಗಿಸುವ ಕೆಲಸವಾಗಿಲ್ಲ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಬಣ್ಣಿಸಿದ್ದಾರೆ.
ಸಂಸತ್ತಿನಲ್ಲಿ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡನೆ ನಂತರ ಮಾಧ್ಯಮ ಪ್ರಕಟಣೆಯಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು, ಇಡೀ ದೇಶವೇ ತತ್ತರಿಸಿರುವ ಮತ್ತು ಜನರು ಸಂಕಷ್ಟಕ್ಕೆ ಸಿಲುಕಿರುವ ಬೆಲೆ ಏರಿಕೆ ಸಮಸ್ಯೆಯನ್ನು ಬಗೆಹರಿಸುವಲ್ಲಿ ಬಜೆಟ್ ವಿಫಲವಾಗಿದೆ. ಬಜೆಟ್ ನಲ್ಲಿ ರಾಜ್ಯಕ್ಕೆ ಯಾವುದೇ ಕಲ್ಯಾಣ ಯೋಜನೆಗಳನ್ನು ಘೋಷಿಸಿಲ್ಲ. ಇದೊಂದು ನಿರಾಶಾದಾಯಕ ಬಜೆಟ್ ಎಂದು ತಿಳಿಸಿದ್ದಾರೆ.