Select Page

Advertisement

ಶೀಘ್ರದಲ್ಲೇ ಸರ್ಕಾರದಿಂದ ಮೂಗುದಾರ : ಸತೀಶ ಜಾರಕಿಹೊಳಿ

ಶೀಘ್ರದಲ್ಲೇ ಸರ್ಕಾರದಿಂದ ಮೂಗುದಾರ : ಸತೀಶ ಜಾರಕಿಹೊಳಿ
Advertisement

ಬೆಳಗಾವಿ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲೇ ಜಾರಿಯಾಗಲಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಬ್ಯಾಂಕಗಳು/ಸಹಕಾರಿ ಸಂಘಗಳ/ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನೆಗಳಿಗೆ ಹೋಗಿ ಕಿರುಕುಳ ನೀಡಬಾರದು. ಕಾನೂನು ಬದ್ಧವಾಗಿ ನೋಟಿಸ್ ಜಾರಿ ಮಾಡಿ ಮಾಡಬೇಕು.
ಫೈನಾನ್ಸ್ ಗಳಿಂದ ಪಡೆದ ಸಾಲ ಮನ್ನ ಆಗುತ್ತಿದೆ ಎಂದು ಸಾರ್ವಜನಿಕ ವಲಯಗಳಲ್ಲಿ ನಂಬಿಕೆಯಿದೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಮಧ್ಯಪ್ರವೇಶಿಸಿದೆ. ಇದರಲ್ಲಿ ಸಾಲ ಮನ್ನಾ ಎಂಬ ಪ್ರಶ್ನೆಯೇ ಇಲ್ಲ. ನಿಯಮಾನುಸಾರ ಕಾಲಾವಕಾಶ ನೀಡಿ ಸಾಲ ಮರುಪಾವತಿ ಮಾಡಬೇಕು ಎಂದು ತಿಳಿಸಿದರು.

ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಫೈನಾನ್ಸ್ ಸಂಸ್ಥೆಗಳ ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಮೂಲ ಕಾರಣ ಮಧ್ಯವರ್ತಿಗಳು; ಇವರು ಜನರ ದಾರಿ ತಪ್ಪಿಸಿ ಕಮಿಷನ್ ಪಡೆಯಲು ಸಬ್ಸಿಡಿ ಸಾಲ ಎಂದು ನಂಬಿಸಿ ಅವರ ಹೆಸರಲ್ಲಿ ಸಾಲ ಮಂಜೂರು ಮಾಡಿಸುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ ಎಂದರು.

ಗ್ರಾಮೀಣ ಭಾಗದಲ್ಲಿ ಸಾಲದ ಕಂತು ಸಂಗ್ರಹಣೆಗೆ ಫೈನಾನ್ಸ್ ಸಿಬ್ಬಂದಿಗಳು ಮನೆಗಳಿಗೆ ಹೋದಲ್ಲಿ, ಸಾಲ ಪಡೆದವರು ಫೈನಾನ್ಸ್ ಸಿಬ್ಬಂದಿಗಳಿಗೆ ಹಣ ಪಾವತಿಸಿದೇ ನಿರಾಕರಿಸಿ ಮರಳಿ ಕಳುಹಿಸುವ ವರ್ತನೆಗಳು ಕಂಡು ಬರುತ್ತಿವೆ. ಇದರಿಂದ ಫೈನಾನ್ಸ್ ಸಿಬ್ಬಂದಿಗಳು ಕಂತು ಪಡೆಯಲು ಮನೆಗಳಿಗೆ ಹೋಗಲು ಹೆದರುವ ವಾತಾವರಣ ನಿರ್ಮಾಣವಾಗಿದೆ ಎಂದು ಫೈನಾನ್ಸ್ ಪ್ರತಿನಿಧಿಯೊಬ್ಬರೂ ತಮ್ಮ ಸಮಸ್ಯೆಯನ್ನು ಹೇಳಿದರು.

ಜಿಲ್ಲೆಯಲ್ಲಿ ಕೆಲವು ಫೈನಾನ್ಸ್ ಗಳಿಂದ ಮಾತ್ರ ಬಿರುಸು ವರ್ತನೆಗಳು ಕಂಡು ಬಂದಿದ್ದು, ಉಳಿದ ಫೈನಾನ್ಸ್ ಗಳು ಯಥಾಸ್ಥಿತಿಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಬಗ್ಗೆ ತಪ್ಪು ತಿಳುವಳಿಕೆ ಹೋಗುತ್ತಿದೆ. ವಂಚನೆ ಪ್ರಕರಣಗಳನ್ನು ಹೊರತುಪಡಿಸಿ ಬೇರೆ ಯಾವುದೇ ಫೈನಾನ್ಸ್ ಗಳಿಂದ ತೊಂದರೆಯಾಗಿಲ್ಲ. ಹಾಗಾಗಿ ಫೈನಾನ್ಸ್ ಗಳು ಗ್ರಾಹಕರಿಂದ ಸಾಲ ಮರು ಪಾವತಿ ಪಡೆಯುವಲ್ಲಿ ಕಾನೂನು ಬದ್ಧ ವಸೂಲಾತಿಗೆ ಕ್ರಮ ವಹಿಸಬೇಕು ಸಚಿವ ಜಾರಕಿಹೊಳಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮಾತನಾಡಿ, ನೋಂದಣಿ ಇಲ್ಲದ ಫೈನಾನ್ಸ್ ಸಂಸ್ಥೆಗಳು ಸಾಲ ವಿತರಣೆ ಮಾಡಿ ಹೆಚ್ಚಿನ ಬಡ್ಡಿ ವಸೂಲಿ ಮಾಡಿದಲ್ಲಿ, ಸಹಕಾರ ಕಾಯ್ದೆಯಡಿಯಲ್ಲಿ ಅಂತಹ ಸಂಸ್ಥೆಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಿಯಮಾನುಸಾರ ನೋಂದಣಿ ಇಲ್ಲದ ಸಹಕಾರ ಸಂಸ್ಥೆಗಳು ಕೇವಲ 14% ಶೇಕಡ ರಷ್ಟು ಮಾತ್ರ ಬಡ್ಡಿ ವಿಧಿಸಬಹುದಾಗಿದೆ. ನೋಂದಣಿಯಾಗದ ಕಾರಣ ಇಂತಹ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದು. ಸಾರ್ವಜನಿಕರಿಗೆ ಸಂಸ್ಥೆಗಳಿಂದ ಕಿರುಕುಳ ಬಂದಲ್ಲಿ ಪೊಲೀಸ್ ಠಾಣೆಗೆ ದೂರು ದಾಖಲಿಸಬೇಕು ಅದರ ಬದಲಿಗೆ ಆತ್ಮಹತ್ಯ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿದರು.

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ,
ಸಾಲ ಮರುಪಾವತಿಯ ಸಾಮರ್ಥ್ಯದ ಆಧಾರದ ಮೇಲೆ ಸಾಲಗಳನ್ನು ನೀಡಬೇಕು. ಸಾರ್ವಜನಿಕರು ಏಜೆಂಟರುಗಳ ಮೂಲಕ ಸಾಲ ಪಡೆಯಬಾರದು ತಿಳಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪ್ರೊಬೇಷನರಿ ಐಎಎಸ್ ಅಧಿಕಾರಿ ದಿನೇಶಕುಮಾರ ಮೀನಾ ಹಾಗೂ ಸಹಕಾರ ಸಂಘಗಳ ಜಂಟಿ ನಿಬಂಧಕರು, ಸಹಕಾರ ಸಂಘಗಳ ಉಪನಿಬಂಧಕರು, ಜಿಲ್ಲೆಯ ಎಲ್ಲ ಉಪ ವಿಭಾಗಾಧಿಕಾರಿಗಳು, ಜಿಲ್ಲೆಯ ಎಲ್ಲಾ ತಹಶೀಲ್ದಾರರು, ಜಿಲ್ಲಾ ಅಗ್ರಣಿ ಬ್ಯಾಂಕ್ ವ್ಯವಸ್ಥಾಪಕರು ಸೇರಿಯಂತೆ ವಿವಿಧ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಪೋಟೋ : ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ವಿವಿಧ ಬ್ಯಾಂಕಗಳು, ಸಹಕಾರಿ ಸಂಘಗಳು ಹಾಗೂ ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡುತ್ತಿರುವುದು.

Advertisement

Leave a reply

Your email address will not be published. Required fields are marked *

error: Content is protected !!