ಬೆಳಗಾವಿ : ಪತ್ನಿಯಿಂದ ಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂತಿಟ್ಟ ಶವ ಹೊರತಗೆಯುವ ಕಾರ್ಯಾಚರಣೆ ವೇಳೆ ಚಿಕ್ಕೋಡಿ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಕೋಳಿ ಬಲಿ ಕೊಡಲು ಮುಂದಾದ ಘಟನೆ ಬೆಳಕಿಗೆ ಬಂದಿದೆ.
ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನು ಹತ್ಯೆ ಮಾಡಿ ಜಮೀನಿನಲ್ಲಿ ಹೂತು ಹಾಕಿದ್ದ ಪ್ರಕರಣದಲ್ಲಿ ಶವ ಹೊರತೆಗೆಯುವ ಕಾರ್ಯಾಚರಣೆಗ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ನಡೆದಿತ್ತು. ಪ್ರಕರಣದ ತನಿಖೆಯ ಹಿನ್ನೆಲೆಯಲ್ಲಿ ಜಮೀನಿನಲ್ಲಿ ಹೂತಿದ್ದ ಶವವನ್ನು ಹೊರತೆಗೆಯಲು ಚಿಕ್ಕೋಡಿ ಉಪವಿಭಾಗಾಧಿಕಾರಿ ಎಸ್.ಎಸ್. ಸಂಪಗಾವಿ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಪೊಲೀಸರು ಸಿದ್ಧತೆ ನಡೆಸಿದ್ದರು.
ಈ ವೇಳೆ ಶವ ಹೊರತೆಗೆಯುವ ಮೊದಲು ಕೋಳಿ ಬಲಿ ನೀಡಲು ಮುಂದಾಗಿರುವುದು ಕಂಡುಬಂದಿದೆ. ಸ್ಥಳದಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಘಟನೆಯನ್ನು ಚಿತ್ರೀಕರಿಸುತ್ತಿರುವುದನ್ನು ಗಮನಿಸಿದ ಬಳಿಕ ಕೋಳಿಯನ್ನು ಅಲ್ಲಿಂದ ವಾಪಸ್ ಕರೆದೊಯ್ಯಲಾಗಿದೆ ಎನ್ನಲಾಗಿದೆ.
ಶವ ಹೊರತೆಗೆಯುವಂತಹ ತನಿಖಾ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಹಾಗೂ ಕಾನೂನುಬದ್ಧ ಕ್ರಮಗಳನ್ನು ಅನುಸರಿಸಬೇಕಾದ ಸಂದರ್ಭದಲ್ಲಿ ಕೋಳಿ ಬಲಿಯಂತಹ ಆಚರಣೆಗೆ ಮುಂದಾಗಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಆಧುನಿಕ ತಂತ್ರಜ್ಞಾನ ಹಾಗೂ ವೈಜ್ಞಾನಿಕ ತನಿಖೆಯ ಯುಗದಲ್ಲಿಯೂ ಸರ್ಕಾರಿ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಮೂಢನಂಬಿಕೆಗೆ ಅವಕಾಶ ನೀಡಲಾಗುತ್ತಿದೆಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.


