ಅಥಣಿ: ರಸ್ತೆ ಅಪಘಾತದಲ್ಲಿ 23 ವರ್ಷದ ಯುವಕನೊಬ್ಬ ಮೃತಪಟ್ಟಿರುವ ಘಟನೆ ಅಥಣಿ ಹೊರವಲಯದ ಮುರಗುಂಡಿ–ಅಥಣಿ ರಸ್ತೆಯ ಮಧ್ಯಮಾರ್ಗದಲ್ಲಿ ನಡೆದಿದೆ. ಸಂಬರಗಿ ಗ್ರಾಮದ ಮೂಲದ ಮೋಹನ ಅಶೋಕ ಮೀಸಾಳ (23) ಮೃತ ಯುವಕ.

ವಿಜಯಪುರ–ಸಂಕೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ 2.30ರ ಸುಮಾರಿಗೆ ಈ ಭೀಕರ ಅಪಘಾತ ಸಂಭವಿಸಿದೆ. ಹೆಲ್ಮೆಟ್ ಧರಿಸದೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಮೋಹನ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಘಟನೆ ಮಾಹಿತಿ ತಿಳಿದು ಅಥಣಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಕುರಿತು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.