ಬೆಳಗಾವಿ : ಕಬ್ಬಿನ ಬಿಲ್ ವಿಚಾರವಾಗಿ ಕರ್ನಾಟಕದಲ್ಲಿ 3600 ರೂ. ಮೊದಲ ಕಂತಿನಲ್ಲಿ ಕೊಡುವುದಾಗಿ ಕಾರ್ಖಾನೆಗಳು ಒಪ್ಪಿಕೊಂಡಿವೆ. ಆದರೆ ಮಹಾರಾಷ್ಟ್ರದಲ್ಲಿ ರಾಜು ಶೆಟ್ಟಿ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ಮಣಿದ ಸರ್ಕಾರ 4,200 ದರ ಘೋಷಣೆ ಮಾಡಿವೆ.

ಆದರೆ ಸಧ್ಯ ಕರ್ನಾಟಕ ರೈತರಲ್ಲಿ ಮೂಡಿರುವ ಪ್ರಶ್ನೆ, ನಮಗೆ ಯಾಕೆ 3,600 ಮಹಾರಾಷ್ಟ್ರಕ್ಕೆ ಹೋಲಿಸಿದರೆ 600 ರೂ. ಕಡಿಮೆ ಆಗಲು ಕಾರಣ ಏನು ಎಂಬುದು. ಆದರೆ ಇದಕ್ಕೆ ಈಗಾಗಲೇ ರೈತ ಮುಖಂಡರು ಉತ್ತರ ನೀಡಿದ್ದು ಇನ್ನೊಮ್ಮೆ ವಿವರಣೆ ನೋಡಬಹುದು.

ಕಬ್ಬಿನ ರಿಕವರಿ ಮೇಲೆ ಬೆಲೆ ನಿಗದಿ ಮಾಡುವ ಹಂತಕ್ಕೆ ಕಾರ್ಖಾನೆಗಳು ಬಂದಿದ್ದು ಮಹಾರಾಷ್ಟ್ರ ಭಾಗದಲ್ಲಿ ಸುಮಾರು 13 ರಷ್ಟು ರಿಕವರಿ ಇದೆ. ಸರಿಸುಮಾರು 14 ತಿಂಗಳಿಗೆ ಅಲ್ಲಿನ ಕಬ್ಬು ಕಟಾವು ಆಗುತ್ತವೆ. ಆದರೆ ನಮ್ಮಲ್ಲಿ ಇದು ಭಿನ್ನವಾಗಿದೆ.

ರಾಜ್ಯದ ಕಬ್ಬು ಬೆಳೆಯ ರಿಕವರಿ 11 ಕ್ಕೆ ಕಡಿಮೆ ಇದ್ದು ಪ್ರಸ್ತುತ ಸಕ್ಕರೆ ಬೆಲೆ ಆಧರಿಸಿ ಮೊದಲ ಕಂತಿನಲ್ಲೇ 3600 ದರ ಸಿಗಲಿದೆ. ಇದಾದ ನಂತರ ಮಧ್ಯಂತರ ಅವಧಿಯಲ್ಲಿ ಸಕ್ಕರೆ ಬೆಲೆ ಏರಿಕೆಯಾದಂತೆ ಇದರ ಲಾಭ ರೈತರಿಗೆ ಸಿಗಲಿದೆ.

ಪ್ರಸ್ತುತ ಸಕ್ಕರೆ ಮಾರುಕಟ್ಟೆ ಗಮನಿಸಿದರೆ ಮುಂದಿನ ದಿನಗಳಲ್ಲಿ ಈಗಿರುವ ದರಕ್ಕಿಂತ ಹೆಚ್ಚಾಗಬಹುದು.‌ ಹಾಗೇನಾದರೂ ಆದರೆ ಕಬ್ಬಿಗೆ 4200 ರ ವರೆಗೆ ದರ ಸಿಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಈ ಕುರಿತು ರೈತರು ವದಂತಿಗೆ ಕಿವಿಗೊಡದೆ ಕಬ್ಬು ಕಟಾವಿಗೆ ಅನುವು ಮಾಡಿಕೊಡುವಂತೆ ರೈತ ಮುಖಂಡರು ಮನವಿ ಮಾಡಿದ್ದಾರೆ.