ಬೆಂಗಳೂರು:ಈ ಬಾರಿ ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿಯನ್ನು ಬೆಳಗಾವಿಯ ಪ್ರಜಾವಾಣಿ ವರದಿಗಾರ ಇಮಾಮ್‌ಹುಸೇನ್‌ ಗೂಡುನವರ ಅವರಿಗೆ ನೀಡಲಾಗಿದೆ.

ಯುವ ಪತ್ರಕರ್ತರಿಗೆ ನೀಡುವ ವಾರ್ಷಿಕ ಪ್ರಶಸ್ತಿ ೫ ಸಾವಿರ ರೂ. ನಗದು ಮತ್ತು ಫಲಕ ಹೊಂದಿರುತ್ತದೆ.

ನವೆಂಬರ್ ೧೪ ರಂದು ಸಚಿವ ಸತೀಶ್ ಜಾರಕಿಹೊಳಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ವಿ.ವಿ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಅವರ ಸಮ್ಮುಖದಲ್ಲಿ ಬೆಳಗಾವಿ ನಗರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ರೋಹಿತ್ ಯುವ ವಯಸ್ಸಿನಲ್ಲೇ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ ತಮ್ಮ ತೋಟದ ಬಾವಿಯಲ್ಲಿ ಈಜಲು ಹೋಗಿ ಅಕಾಲಿಕ ಮರಣ ಹೊಂದಿದವರು. ಅವರ ಹೆಸರಿನಲ್ಲಿ ಅವರ ತಂದೆ, ತಾಯಿ ಈ ಪ್ರಶಸ್ತಿ ನೀಡುತ್ತ ಬಂದಿದ್ದಾರೆ.

ಇಮಾಮ್‌ಹುಸೇನ್‌ ಗೂಡುನವರ ಸೇರಿದಂತೆ ನಾಲ್ವರು ಪತ್ರಕರ್ತರು ಇದುವರೆಗೆ ಈ ಪ್ರಶಸ್ತಿ ಪಡೆದವರಾಗಿದ್ದಾರೆಂದು ಐಎಂಎಸ್‌ಆರ್ ಅಧ್ಯಕ್ಷ ಪ್ರೊ. ಕೆ.ವಿ. ನಾಗರಾಜ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
—–