ಬೆಂಗಳೂರು : ಸಿಎಂ ಚಿನ್ನದ ಪದಕಕ್ಕೆ ಆಯ್ಕೆಯಾದ ಪೊಲೀಸ್ ಇನ್ಸ್‌ಪೆಕ್ಟರ್‌ ಕುಮಾರ್ ಅವರಿಗೆ ಲೋಕಾಯುಕ್ತ ಶಾಕ್ ನೀಡಿದೆ. ಲೋಕಾಯುಕ್ತ ದಾಳಿ ವಿಚಾರ ತಿಳಿಯುತ್ತಿದ್ದಂತೆ, ಇನ್ಸ್‌ಪೆಕ್ಟರ್‌ ಮನೆಯಲ್ಲೇ ಇಲಾಖೆಯ ಜೀಪ್ ಬಿಟ್ಟು ಎಸ್ಕೇಪ್ ಆಗಿದ್ದಾರೆ.

ಗುತ್ತಿಗೆದಾರ ಚೆನ್ನೇಗೌಡ ಹಾಗೂ ಕುಟುಂಬಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಇನ್ಸ್‌ಪೆಕ್ಟರ್‌ ಕುಮಾರ್‌ರಿಂದ ಕಿರುಕುಳ ನೀಡುತ್ತಿದ್ದ ಆರೋಪ ಕೇಳಿ ಬಂದಿದೆ

ಸುಳ್ಳು ಕೇಸ್ ಹಾಕಿ ಚೆನ್ನೇಗೌಡರ 4 ಕೋಟಿ ರೂ. ಮೌಲ್ಯದ ಮನೆಯನ್ನ ಹೇಳಿದವರಿಗೆ ಕಡಿಮೆ ಮೊತ್ತಕ್ಕೆ ನೋಂದಣಿ ಮಾಡಿಕೊಡುವಂತೆ ಇನ್ಸ್‌ಪೆಕ್ಟರ್‌ ಕುಮಾರ್ ಕಿರುಕುಳ ನೀಡುತ್ತಿದ್ದರು. ಚೆನ್ನೇಗೌಡ ಪತ್ನಿ ಸರ್ಕಾರಿ ಉದ್ಯೋಗದಲ್ಲಿದ್ದು, ಇವರಿಬ್ಬರಿಗೂ ಇನ್ಸ್‌ಪೆಕ್ಟರ್‌ ಕಿರುಕುಳ ಕೊಟ್ಟಿದ್ದರು.

ಈ ಹಿಂದೆ ದಾಖಲಾಗಿದ್ದ ಕೇಸ್ ಒಂದನ್ನು ಬಿ ರಿಪೋರ್ಟ್‌ಗೆ ಹಾಕುತ್ತೇನೆ. ಮನೆಯನ್ನು ಬರೆದುಕೊಡಿ ಎಂದು ಇನ್ಸ್‌ಪೆಕ್ಟರ್‌ ಕುಮಾರ್ ಅವರು ಚೆನ್ನೇಗೌಡ ಅವರ ಮನೆಗೆ ಕೆಲ ಪುಂಡರನ್ನ ನುಗ್ಗಿಸಿ ದಾಂಧಲೆ ಮಾಡಿಸಿದ್ದರು. ಪುಂಡರ ದಾಂಧಲೆಯನ್ನು ಚೆನ್ನೇಗೌಡ ಅವರು ವಿಡಿಯೋ ಮಾಡಿಕೊಂಡಿದ್ದರು

ಪೊಲೀಸ್ ಇನ್ಸ್‌ಪೆಕ್ಟರ್‌, ಸಂಬಂಧಿಯೊಬ್ಬರಿಗೆ ಕಡಿಮೆ ಬೆಲೆಗೆ ಮನೆ ಕೊಡಿಸಲು ಪ್ಲ್ಯಾನ್ ಮಾಡಿದ್ದರು. 4 ಕೋಟಿ ರೂ. ಮೌಲ್ಯದ ಮನೆಯನ್ನ 60 ಲಕ್ಷ ರೂ.ಗೆ ಕೊಡುವಂತೆ ಚೆನ್ನೇಗೌಡ ದಂಪತಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಮನೆ ನೋಡಿಕೊಂಡು ಬರಲು ಠಾಣೆಯ ಹೆಡ್ ಕಾನ್ಸ್‌ಟೇಬಲ್ ಉಮೇಶ್ ಅವರ ಜೊತೆ ಅವರ ಸಂಬಂಧಿಕರನ್ನ ಕಳುಹಿಸಿದ್ದರು.

ಇನ್ಸ್‌ಪೆಕ್ಟರ್‌ ಸೂಚನೆಯಂತೆ ಇಬ್ಬರು ವ್ಯಕ್ತಿಗಳೊಂದಿಗೆ ಮನೆ ನೋಡಬೇಕೆಂದು ಹೆಡ್ ಕಾನ್ಸ್‌ಟೇಬಲ್ ಉಮೇಶ್ ಅವರು ಚೆನ್ನೇಗೌಡ ಅವರ ಮನೆಗೆ ನುಗ್ಗಿದ್ದರು. ಮಾ. 18ರಂದು ಸಮಯ 3:25 ನಿಮಿಷಕ್ಕೆ ಕೆಂಪು ಬಣ್ಣದ ಕೆಎ 42 ಪಿ 0919 ನೋಂದಣಿಯ ಬ್ರೀಝಾ ಕಾರಿನಲ್ಲಿ ಮನೆಗೆ ಬಂದಿದ್ದರು.

ಈ ಬಗ್ಗೆ ಪ್ರಶ್ನಿಸಿದ ಚೆನ್ನೇಗೌಡ ಅವರು ವಿಡಿಯೋ ಸಹ ಮಾಡಿದ್ದರು. ಈ ವೇಳೆ ಸ್ಟೇಷನ್‌ನಿಂದ ಕಾರು ಸಮೇತ ಕರೆದುಕೊಂಡು ಬರುವುದಾಗಿ ಹೇಳಿದ್ದಾರೆ ಎಂದು ಹೆಡ್ ಕಾನ್ಸ್ಟೇಬಲ್ ಉಮೇಶ್ ಅವರು ಅಲ್ಲಿಂದ ಎಸ್ಕೇಪ್ ಆಗಿದ್ದರು ಎಂದು ಆರೋಪಿಸಲಾಗಿದೆ