Select Page

Advertisement

ಜಾರಕಿಹೊಳಿ ಕುಟುಂಬಕ್ಕೆ ರಾಜಕಾರಣ ಹೊಸದಲ್ಲ ; ಪ್ರಿಯಾಂಕಾ ಪರ ಹೆಬ್ಬಾಳ್ಕರ್ ಭರ್ಜರಿ ಪ್ರಚಾರ

ಜಾರಕಿಹೊಳಿ ಕುಟುಂಬಕ್ಕೆ ರಾಜಕಾರಣ ಹೊಸದಲ್ಲ ; ಪ್ರಿಯಾಂಕಾ ಪರ ಹೆಬ್ಬಾಳ್ಕರ್ ಭರ್ಜರಿ ಪ್ರಚಾರ

ರಾಯಭಾಗ : ಜಾರಕಿಹೊಳಿ ಕುಟುಂಬಕ್ಕೆ ರಾಜಕಾರಣ ಹೊಸದಲ್ಲ. ಪ್ರಿಯಾಂಕಾ ಜಾರಕಿಹೊಳಿ ಮುಗ್ದ ಹೆಣ್ಣುಮಗಳು, ಆದರೆ ತುಂಬಾ ಬುದ್ದಿವಂತೆ. ಈ ಯುವ ನಾಯಕಿಯನ್ನು ಗೆಲ್ಲಿಸುವ ಮೂಲಕ ಚಿಕ್ಕೋಡಿ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ರಾಯಭಾಗದಲ್ಲಿ
ಸೋಮವಾರ ಪ್ರಿಯಾಂಕಾ  ಜಾರಕಿಹೊಳಿ ಪರ ಪ್ರಚಾರದ ಸಭೆಯಲ್ಲಿ ಮಾತನಾಡಿದ ಸಚಿವರು,  ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಬಡವರ ಹಸಿವನ್ನ ನೀಗಿಸಿದ್ದಾರೆ. ಚುನಾವಣೆಗೂ ಮುನ್ನ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಸದಾ ಬಡವರ ಕಷ್ಟಕ್ಕೆ ಮಿಡಿಯುವ ಪಕ್ಷ. ಬಡವರ ಏಳಿಗೆಗಾಗಿ ಈ ದೇಶಕ್ಕೆ  ಹಲವು ಕಾರ್ಯಕ್ರಮಗಳನ್ನು ಕೊಟ್ಟ ಇತಿಹಾಸವಿದೆ. ಕಾಂಗ್ರೆಸ್ ಬಡವರ ಬಗ್ಗೆ ಚಿಂತಿಸುತ್ತಿದ್ದರೆ, ಬಿಜೆಪಿ ಶ್ರೀಮಂತರ ಏಳಿಗೆಗೆ ಮಾತ್ರ ಶ್ರಮಿಸುತ್ತಿದೆ ಎಂದು ಮಹಿಳಾ  ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಬಾರದು ಎಂದು ಬಿಜೆಪಿ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಗಲಾಟೆ ಎಬ್ಬಿಸಿದ್ದರು ಎಂದು ಆರೋಪಿಸಿದರು. ನಾನು ಕೂಡ ರಾಮ ಭಕ್ತಳೆ. ಅಯೋಧ್ಯೆಯಲ್ಲಿ ನಿರ್ಮಾಣವಾದ ರಾಮಮಂದಿರಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂಪಾಯಿ ದೇಣಿಗೆ ನೀಡಿದ್ದೇನೆ.

ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಬಡವರ ಬಗ್ಗೆ ಇಟ್ಟುಕೊಂಡಿರುವ ಚಿಂತನೆಗಳು ರಾಮರಾಜ್ಯದ ಪರಿಕಲ್ಪನೆ ಹೊಂದಿವೆ ಎಂದರು. ಬಿಜೆಪಿಯವರ ರೀತಿ ಬೂಟಾಟಿಕೆಗೆ ರಾಮ ರಾಮ ಎನ್ನುವುದಿಲ್ಲ ಎಂದು ಹೇಳಿದರು. ಬದ್ಧತೆಗೆ ಮತ್ತೊಂದು ಹೆಸರೇ ಕಾಂಗ್ರೆಸ್ ಎಂದು ಸಚಿವರು ಹೇಳಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾತಾಡಿದ್ರೆ ಸಾಕು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಒಂದೇ ಒಂದು ಸೀಟನ್ನು ಅಲ್ಪಸಂಖ್ಯಾತರಿಗೆ ನೀಡಿಲ್ಲ. ಎಲ್ಲಿ ಹೋಯಿತು ಅವರ ಮಾತು ಎಂದು ಟೀಕಿಸಿದರು.

ಬಹಿರಂಗ ಸಭೆಯಲ್ಲೇ ಸತೀಶ್ ಅಣ್ಣನವರು ಚಿಕ್ಕೋಡಿಗೆ ಕುರುಬ ಸಮುದಾಯದ ವ್ಯಕ್ತಿಗೆ ಟಿಕೆಟ್ ನೀಡಬೇಕು ಎಂದು ಕೇಳಿದ್ದರು. ಆದರೆ, ಸಿದ್ದರಾಮಯ್ಯ, ಹಿರಿಯ ಶಾಸಕರಾದ ಲಕ್ಷ್ಮಣ್ ಸವದಿ ಮತ್ತು ನನ್ನ ಸಲಹೆ ಮೇರೆಗೆ ಪ್ರಿಯಾಂಕಾಳನ್ನು ಆಯ್ಕೆ ಮಾಡಲಾಯಿತು ಎಂದರು.

ಪ್ರಿಯಾಂಕಾಳಿಗೆ ಒಂದು ಅವಕಾಶ ಕೊಡಿ. ಕರ್ನಾಟಕದ ಹಾಗೂ ಚಿಕ್ಕೋಡಿ ಧ್ವನಿಯಾಗಿ ದೆಹಲಿಯಲ್ಲಿ ಕೆಲಸ ಮಾಡುತ್ತಾಳೆ. ಓದಿಕೊಂಡಿರುವ ಪ್ರಿಯಾಂಕಾಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ಆಕೆಯನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಸತೀಶ್ ಜಾರಕಿಹೊಳಿ ಅವರ ಇಬ್ಬರು ಮಕ್ಕಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸತೀಶ್ ಅಣ್ಣನವರನ್ನು ರಾಜಕಾರಣದಲ್ಲಿ, ಸಮಾಜಸೇವೆಯಲ್ಲಿ ನೋಡಿದ್ದೆ, ಇಂದು ಅವರನ್ನು ತಂದೆ ಪಾತ್ರದಲ್ಲಿ ನೋಡಿದ್ದು ಖುಷಿ ನೀಡಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ, ಶಾಸಕರುಗಳಾದ ರಾಜು ಕಾಗೆ, ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ, ಗಣೇಶ ಹುಕ್ಕೇರಿ, ಎಸ್.ಬಿ ಘಾಟಗೆ, ಗಜಾನನ ಮಂಗಸೂಳಿ, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ, ಮುಖಂಡರಾದ ವೀರಕುಮಾರ ಪಾಟೀಲ, ಎ.ಬಿ.ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ಮಹಾವೀರ ಮೋಹಿತೆ, ಡಾ.ಮಗದುಮ್ಮ, ಸಂಜು ಬಾನೆ, ಡಿ.ಎಸ್.ನಾಯಕ, ನಿರ್ಮಲಾ ಪಾಟೀಲ, ಯಲ್ಲಪ್ಪ ಶಿಂಗೆ, ಸಿದ್ಧಾರೂಢ್ ಬಂಡಗರ್, ಶಂಕರಗೌಡ ಪಾಟೀಲ, ಸದಾಶಿವ ದೇಶಿಂಗೆ ಮೊದಲಾದವರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!