ಬೆಳಗಾವಿ : ಸರಕಾರಿ ಜಾಗದ ಮೇಲೆ ಕಳ್ಳ ಅಧಿಕಾರಿಗಳ ಕಣ್ಣು : ಅತಿಕ್ರಮಣಕ್ಕೆ ಕುಮ್ಮಕ್ಕು ಕೊಟ್ಟವರು ಶಾಸಕರಾ…ಅಧಿಕಾರಿಗಳಾ..?

ಬೆಳಗಾವಿ : ಬೆಳಗಾವಿ ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ಜಾಗವನ್ನು ಅಲ್ಪಸಂಖ್ಯಾತರ ಇಲಾಖೆ ಅತಿಕ್ರಮಣ ಮಾಡಿಕೊಂಡು ತಡೆಗೋಡೆ ನಿರ್ಮಿಸಿದ ಕ್ರಮವನ್ನು ಖಂಡಿಸಿ ರಾಮತೀರ್ಥ ನಗರ ನಿವಾಸಿಗಳು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.
ಬೆಳಗಾವಿ ಉತ್ತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಮತೀರ್ಥ ನಗರದಲ್ಲಿರುವ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ಶಾಲೆಯ ಮುಂದಿನ ಬುಡಾ ಇಲಾಖೆಗೆ ಸೇರಿದ್ದ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದಲ್ಲದೆ ತಡೆಗೋಡೆ ನಿರ್ಮಾಣ ಮಾಡಿದ್ದ ಕ್ರಮ ಖಂಡಿಸಿ ಮಾಜಿ ಸೈನಿಕರ ಸಂಘದ ಸದಸ್ಯರು ಸೇರಿದಂತೆ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು.
ಸಾರ್ವಜನಿಕರ ಪ್ರತಿಭಟನೆ ಬಿಸಿ ತಟ್ಟುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಅತಿಕ್ರಮಣವಾಗಿದ್ದ ಜಾಗವನ್ನು ತೆರವುಗೊಳಿಸುವ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಬೆಳಗಾವಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮುಂದೆ ನಿಂತು ಜೆಸಿಬಿ ಯಂತ್ರದ ಸಹಾಯದಿಂದ ಅನಧಿಕೃತವಾಗಿ ನಿರ್ಮಾಣ ಮಾಡಿದ್ದ ಕಲ್ಲಿನ ಕಾಂಪೌಂಡ್ ತೆರವುಗೊಳಿಸಿದರು.
ಇನ್ನೂ ಖಾಲಿ ಇರುವ 20 ಗುಂಟೆ ಜಾಗವನ್ನು ಮಾಜಿ ಸೈನಿಕರ ಸಂಘ ಕಳೆದ 2020 ರಿಂದ ತಮಗೆ ನೀಡುವಂತೆ ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆದರೆ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳು ಜಮೀನನ್ನು ಅನಧಿಕೃತವಾಗಿ ವಶಪಡಿಸಿಕೊಂಡರೂ ಬುಡಾ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮುರಗೇಂದ್ರಗೌಡ ಪಾಟೀಲ್, ಮಹಾಂತೇಶ್ ವಕ್ಕುಂದ, ಉಪ ಮೇಯರ್ ಹಣಮಂತ ಕೊಂಗಾಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

