ಅನಾಥರ ಮಹಾತಾಯಿ – “ಸಿಂಧುತಾಯಿ ಸಪ್ಕಾಲ್” : ಕಾವ್ಯಾ ಬಿ.ಜೆ
ಅನಾಥರ ತಾಯಿ ಎಂದೇ ಕರೆಯಲ್ಪಡುವ ಡಾ. ಸಿಂಧುತಾಯಿ ಸಪ್ಕಾಲ್ ಎಂಬ ಮಹಾತಾಯಿ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಆದರೆ ಯಾರು ಈ ಸಿಂಧುತಾಯಿ..? ಅಂದಿನ ಪ್ರಧಾನಿ ಇಂದಿರಾಗಾಂಧಿಯನ್ನೇ ಪ್ರಶ್ನೆ ಮಾಡಿದ್ದು ಯಾವ ಕಾರಣಕ್ಕೆ. ಯಾರ ನೋವಿಗೆ ಈ ಮಹಾತಾಯಿ ಹೋರಾಡಿದ್ದು. ಉಟ್ಟ ಬಟ್ಟೆಯ ಮೇಲೆ ಹೊರಬಿದ್ದು ಜೀವನದಲ್ಲಿ ಏನು ಸಾಧನೆ ಮಾಡಿದರು ಎಂಬುದರ ಕುರಿತಾದ ನನ್ನ ನಾಲ್ಕು ನುಡಿಗಳು.
ಹೌದು ಒಬ್ಬ ಹೆಣ್ಣುಮಗಳು ಮನಸ್ಸು ಮಾಡಿದರೆ ಜೀವನದಲ್ಲಿ ಎಂತಹ ಅದ್ಬುತ ಕಾರ್ಯ ಮಾಡಬಹುದು ಎಂಬುದಕ್ಕೆ ಈ ಸಿಂಧುತಾಯಿ ಜೀವಂತ ಉದಾಹರಣೆ. ಅಂದು 14 ನವೆಂಬರ್ 1948 ರಲ್ಲಿ ಮಹಾರಾಷ್ಟ್ರದ ಪಿಂಪ್ರಿ ಮೆಘೆ ಗ್ರಾಮದಲ್ಲಿ ಜನಿಸಿದ ಈ ಸಿಂಧುತಾಯಿ ಮೂಲ ಹೆಸರು ಚಿಂದಿ. ತಮ್ಮ ಕುಟುಂಬಕ್ಕೆ ಅನಗತ್ಯವಾಗಿ ಜನಿಸಿದ ಮಗು ಎಂಬ ಕಾರಣಕ್ಕಾಗಿ ಹರಿದ ಬಟ್ಟೆ ಎಂಬ ಅರ್ಥದಲ್ಲಿ ಸಿಂಧುತಾಯಿ ಅವರನ್ನು ಚಿಂದಿ ಎಂದು ಮನೆಯವರು ಕರೆಯುತ್ತಿದ್ದರು. ಆದರೆ ಮಗಳಿಗೆ ಹೇಗಾದರೂ ಮಾಡಿ ಶಿಕ್ಷಣ ಕೊಡಿಸಬೇಕೆಂದು ಚಿಂದಿ ತಂದೆ ಅಭಿಮಂಜೀ ಜಾನುವಾರು, ಹೆಂಡತಿಗೆ ಗೊತ್ತಿಲ್ಲದಂತೆ ಅವಳನ್ನು ಶಾಲೆಗೆ ಕಳುಹಿಸುತ್ತಿದ್ದರು.
ಮನೆಯಲ್ಲಿನ ಬಡತನ ಹಾಗೂ ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ಚಿಂದಿ ಆಲದ ಮರದ ಎಲೆಗಳಲ್ಲಿ ತನ್ನ ವಿದ್ಯಾಭ್ಯಾಸ ಮುಂದುವರಿಸಿದಳು. ಹೀಗೆ ನಡೆದುಕೊಂಡ ಜೀವನ ಎಲ್ಲಿಯವರೆಗೆ ಸಾಗಿರಬೇಕು ಹೇಳಿ. ಅಂದಿನ ಬಾಲ್ಯ ವಿವಾಹದ ಪಿಡುಗಿಗೆ ಸಿಕ್ಕ ಈ ಮಹಾತಾಯಿ ತನ್ನ 10 ನೇ ವಯಸ್ಸಿನಲ್ಲೇ ತನಗಿಂತ ಇಪ್ಪತ್ತು ವರ್ಷ ಹಿರಿಯನಾದ ಧನಕಾಯುವ ಶ್ರೀಹರಿ ಸಪ್ಕಾಲ್ ಎಂಬುವರ ಜೊತೆ ಮದುವೆಯಾಗುತ್ತದೆ. ಒಲ್ಲದ ಮನಸ್ಸಿನಿಂದ ಬಾಲ್ಯ ವಿವಾಹಕ್ಕೆ ಸಿಲುಕಿ ಚಿಂದಿ ( ಸಿಂಧುತಾಯಿ ) ಪ್ರತಿಕ್ಷಣ ನಲುಗಿ ಸಾಯುತ್ತಿದ್ದಳು.
ಮೊದಲ ಹೋರಾಟ : ತನ್ನ ಪಕ್ಕದಲ್ಲಿ ನಡೆಯುವ ಅವ್ಯವಹಾರಗಳನ್ನು ನೇರವಾಗಿ ವಿರೋಧಿಸುವ ಗುಣ ಹೊಂದಿದ್ದ ಸಿಂಧುತಾಯಿ ಮೊದಲ ಹೋರಾಟದಲ್ಲಿ ಯಶಸ್ವಿಯಾದಳು. ತಾನು ವಾಸಿಸುತ್ತಿದ್ದ ಊರಿನ ಜನರ ಗೋವಿನ ಸಗಣಿಯನ್ನು ಸಂಗ್ರಹಿಸಿ ಅಕ್ರಮವಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾರಾಟ ಮಾಡುತ್ತಿದ್ದ ಗುಂಪಿನ ವಿರುದ್ಧ ಚಳುವಳಿ ಹಮ್ಮಿಕೊಳ್ಳುತ್ತಾಳೆ. ಈ ಹೋರಾಟದ ಫಲವಾಗಿ ಸ್ವತಃ ಜಿಲ್ಲಾಧಿಕಾರಿ ಅವರ ಹಳ್ಳಿಗೆ ಬರುತ್ತಾರೆ. ಈ ಎಲ್ಲಾ ಘಟನೆಯಿಂದ ರೊಚ್ಚಿಗೆದ್ದ ಗುಂಪು ಸಿಂಧುತಾಯಿ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಅವಳನ್ನು ಗಂಡನಿಂದ ದೂರ ಮಾಡುವ ಕೆಲಸ ಮಾಡುತ್ತಾರೆ. ಸಿಂಧುತಾಯಿ ಮೇಲೆ ಸಿಟ್ಟಾದ ಗಂಡ ಅವಳನ್ನು ದನದ ಕೊಟ್ಟಿಗೆಗೆ ಹಾಕುವ ಕ್ರೂರ ಕೆಲಸ ಮಾಡುತ್ತಾನೆ. ಆದರೆ ಯಾವುದಕ್ಕೂ ಅಳುಕದ ಸಿಂಧುತಾಯಿ ಮಾತ್ರ ತನ್ನ ಬದುಕಿನ ನೋವು ನುಂಗಿ ಜೀವನ ನಡೆಸುತ್ತಾಳೆ.
ದನದ ಕೊಟ್ಟಿಗೆಯಲ್ಲಿ ಹಸುಗೂಸಿಗೆ ಜನನ : ಜನರ ಮಾತು ಕೇಳಿದ ಗಂಡ ತುಂಬು ಗರ್ಭಿಣಿ ಸಿಂಧುತಾಯಿಯನ್ನು ಹೊರ ಹಾಕುತ್ತಾನೆ. ವಿಪರ್ಯಾಸವೇಂದರೆ ಅದೇ ದನದ ತೊಟ್ಟಿಯಲ್ಲಿ ಸಿಂಧುತಾಯಿ ಮಗುವಿಗೆ ಜನ್ಮ ನೀಡುತ್ತಾಳೆ. ಗಂಡ ನೀಡಿದ ಕಿರುಕುಳದಿಂದ ಬೇಸತ್ತ ಮಹಾತಾಯಿ ತನ್ನ ಮಗುವನ್ನು ಕಟ್ಟಿಕೊಂಡು ಮನೆಬಿಟ್ಟು ಹೊರ ಬರುತ್ತಾಳೆ. ಜೀವನದಲ್ಲಿ ಮಾಡಬಾರದ ತಪ್ಪಿಗೆ ಕೊಟ್ಟ ಶಿಕ್ಷೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರದಿಂದ ರೈಲ್ವೆ ಹಳಿವರೆಗೆ ಬರುತ್ತಾಳೆ. ಆದರೆ ನಾನು ಯಾಕೆ ಸಾಯಬೇಕು. ನನ್ನ ಮಕ್ಕಳನ್ನು ಅನಾಥರನ್ನಾಗಿ ಮಾಡುವುದು ಎಷ್ಟು ಸರಿ…? ಈ ಕ್ರೂರ ಸಮಯದಲ್ಲಿ ಬದುಕಿ ಸಾಧಿಸಬೇಕೆಂದು ನಿರ್ಧಾರ ಮಾಡಿ ಅವ್ವ ಕಲಿಸಿದ ನಾಲ್ಕು ಪದ ಹಾಡು ಹಾಡುತ್ತಾ ಭಿಕ್ಷೆ ಬೇಡುತ್ತಾ ಮಕ್ಕಳನ್ನು ಸಾಕುತ್ತಾಳೆ ಸಿಂಧುತಾಯಿ, ಈ ಮಧ್ಯೆ ಭಿಕ್ಷೆ ಬೇಡಿದ್ದನ್ನು ತನ್ನ ಮಕ್ಕಳ ಜೊತೆ ಅನಾಥ ಮಕ್ಕಳನ್ನು ಸಾಕುವ ಕೆಲಸ ಮುಂದುವರಿಸಿಕೊಂಡು ಬರುತ್ತಾರೆ.
ಇಂದಿರಾಗಾಂಧಿಗೆ ಪ್ರಶ್ನೆ : ನೊಂದವರ ಪಾಲಿಗೆ ಸಹಾಯ : ಮಹಾರಾಷ್ಟ್ರದ ಕೆಲವು ಪ್ರದೇಶ ಹುಲಿಪೀಡಿತವೆಂದು, ಸುಮಾರು ಎರಡು ಸಾವಿರ ಆದಿವಾಸಿಗಳನ್ನ ಸ್ಥಳಾಂತರ ನಡೆಸಲು ಸರ್ಕಾರ ಆದೇಶ ನೀಡಿತ್ತು. ಆದರೆ ಅವರಿಗೆ ಬದಲೀ ವಸತಿಯನ್ನ ನೀಡಲು ನಿರ್ಲಕ್ಷ್ಯ ಮಾಡಲಾಗಿತ್ತು.
ಈ ಸಂಧರ್ಭದಲ್ಲಿ ಆದಿವಾಸಿಗಳ ನೋವಿಗೆ ಧನಿಯಾಗಿ ನಿಂತು ಸರಾಕಾರಕ್ಕೆ ಆದಿವಾಸಿಗಳ ಮನವಿಯನ್ನ ತಲುಪಿಸಿ, ಅವರಿಗೆ ಮರುವಸತಿಯನ್ನ ನೀಡುವಂತೆ ಮಾಡಿದಳು. “ಹುಲಿಯಿಂದ ಸಾವಿಗೆ ಒಳಗಾದ ಹಸುವಿಗೆ ಸಿಗುತ್ತಿದ್ದ ಪರಿಹಾರಧನ, ಒಬ್ಬ ಮನುಷ್ಯ ಸತ್ತರೆ ಯಾಕಿಲ್ಲ..? ಎಂದು ಇಂದಿರಾಗಾಂಧಿಗೇ ಪ್ರಶ್ನಿಸಿ,ಇಂದಿರಾ ಗಾಂಧಿಯಿಂದ ಅವರಿಗೂ ಪರಿಹಾರಧನ ಸಿಗುವಂತೆ ಆದೇಶ ಹೊರಡಿಸುವಂತೆ ಮಾಡಿಸಿದಳು ಸಿಂಧುತಾಯಿ. ಇದರಿಂದಾಗಿ ಆದಿವಾಸಿಗಳ ಪಾಲಿಗೆ ಮಹಾತಾಯಿಯಾದಳು.
ಸಿಂಧುತಾಯಿಯ ದೊಡ್ಡ ಕುಟುಂಬ : ಅನಾಥ ಮಕ್ಕಳಿಗಾಗಿ ಸಿಂಧುತಾಯಿ ಒಂದು ಸ್ವಂತ ಸಂಸ್ಥೆಯನ್ನೇ ಪ್ರಾರಂಭಿಸುತ್ತಾರೆ. ತಂದೆ ತಾಯಿ ಇಲ್ಲದ ಮಕ್ಕಳಿಗೆ ತಾಯಿಯ ಬೆಚ್ಚಗಿನ ನೆರಳಾಗಿ, ಅಪ್ಪನ ಆಸರೆಯಾಗುತ್ತಾ ಈವರೆಗೆ ಸುಮಾರು 1050 ಅನಾಥ ಮಕ್ಕಳಿಗೆ ಹೆತ್ತವ್ವಳಾಗಿದ್ದಾಳೆ ಸಿಂಧುತಾಯಿ. ಇವಳ ಈ ಅದ್ಬುತ ಸಾಧನೆಗೆ ಇಡೀ ಜಗತ್ತೇ ತಲೆಬಾಗಿದೆ. ಅಂದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಸಿಂಧುತಾಯಿ ಇಂದು ಇಡೀ ಸಮಾಜವೇ ಅವಳತ್ತ ತಿರುಗಿ ನೋಡುವಂತ ಸಾಧನೆ ಮಾಡಿದ್ದಾಳೆ. ಇವತ್ತು ಸಿಂಧುತಾಯಿ ಅವರದು ಅತ್ಯಂತ ದೊಡ್ಡ ಕುಟುಂಬ ಅವರು ಕೈ ಹಿಡಿದು ಬೆಳೆಸಿದ ಅನಾಥ ಮಕ್ಕಳು ಇಂದು ದೇಶದ ನಾನಾ ಭಾಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಆದರೆ ಈ ಮಾಹಾತಾಯಿ ಮಾತ್ರ ತನ್ನ ಕೊನೆ ಘಳಿಗೆವರೆಗೂ ಅನಾಥ ಮಕ್ಕಳ ಪಾಲಿಗೆ ಬೆಳಕಾಗಿ ನಿಂತು ನಕ್ಷತ್ರಳಾದಳು.
“ನೊಂದವರ ನೋವಿನ ಮೊಗದಲ್ಲಿ ನಗುವಾಡಿದಾಗ ನನಗೆ ಆನಂದ…. ಬದುಕನ್ನು ಸಾಯಿಸಬಾರದು ಅದನ್ನು ಸವಿಯಬೇಕು” ಎನ್ನುತ್ತಾಳೆ “ಸಿಂಧುತಾಯೀ”
ಒಬ್ಬ ದನ ಕಾಯುವನ ಮಗಳು ಇಂದು ಅನಾಥ ಮಕ್ಕಳ ಪಾಲಿಗೆ ಮಹಾತಾಯಿ. ಸಿಂಧುತಾಯಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌವಿಸಲಾಗಿದೆ. ಇವರಿಗೆ ಪದ್ಮಶ್ರೀ ಸೇರಿದಂತೆ ಒಟ್ಟು 700 ಕ್ಕೂ ಅಧಿಕ ಪ್ರಶಸ್ತಿಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇವರು ಸಾಕಿದ ಮಗ ಸಿಂಧುತಾಯಿ ಕುರಿತು ಪಿಹೆಚ್‌ಡಿ ಮಾಡಿದ್ದಾನೆ. ಸಿಂಧುತಾಯಿ ಕುರಿತು ಚಲನಚಿತ್ರ ಕೂಡಾ ನಿರ್ಮಾಣ ಮಾಡಲಾಗಿದೆ. ಇವರ ಸಹಾಯದಲ್ಲಿ ಬೆಳೆದ ಅದೆಷ್ಟೋ ಅನಾಥ ಮಕ್ಕಳು ಸಧ್ಯ ಅನಾಥಾ ಆಶ್ರಮಗಳನ್ನು ತೆರೆದು ನೊಂದವರ ಸೇವೆ ಮಾಡುತ್ತಿದ್ದಾರೆ. ಈಗಲೂ ಮಹಾರಾಷ್ಟ್ರದಲ್ಲಿ ಸಿಂಧುತಾಯಿ ಸಪ್ಕಾಲ್ ಎಂದೇ ಪ್ರಸಿದ್ದಳು. ಆದರೆ ಇಂದು ಜನವರಿ 5 ರಂದು ಸಿಂಧುತಾಯಿ ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಈ ಮಹಾನ್ ಕಾರ್ಯಕ್ಕೆ ನಮ್ಮ ಒಂದು ದೊಡ್ಡ ಸಲಾಂ.
********************************