ಗಾಂಧೀಜಿ ತುಂಡು ಬಟ್ಟೆ ತೊಡುವ ಪ್ರತಿಜ್ಞೆಗೆ ನೂರು ವರ್ಷ : ಯುವಕನ ಆ ಒಂದು ಮಾತು ಗಾಂಧಿ ನಿರ್ಧಾರ ಬದಲಿಸಿತ್ತು
ಮಹಾತ್ಮಾ ಗಾಂಧಿ ಈ ಒಂದು ಹೆಸರು ನಮ್ಮ ದೇಶದ ಮಣ್ಣಿನ ಪ್ರತಿ ಕಣ, ಕಣದಲ್ಲಿ ಸೇರಿಕೊಂಡಿದೆ. ಈ ಜಗತ್ತಿನಲ್ಲಿ ಹಲವರನ್ನು ಗಾಂಧಿಯವರಲ್ಲಿ ಕಾಣುತ್ತಾರೆ. ಆದರೆ ಮತ್ತೊಬ್ಬರನ್ನು ಗಾಂಧೀಜಿಯವರಿಗೆ ಹೋಲಿಕೆ ಮಾಡಿಲ್ಲ. ಇದೇ ಕಾರಣಕ್ಕೆ ಗಾಂಧಿ ವ್ಯಕ್ತಿತ್ವ ಎಂದಿಗೂ ಮಾಸದು.
ಇವತ್ತಿಗೆ ಸರಿ ಸುಮಾರು ನೂರು ವರ್ಷಗಳ ಹಿಂದೆ ಗಾಂಧೀಜಿ ಮಾಡಿದ್ದ ಆ ಒಂದು ಪ್ರತಿಜ್ಞೆಯೊಂದು ಸಾಕು ಈ ದೇಶದ ಬಡಜನರ ಮೇಲೆ ಅವರು ಹೊಂದಿದ್ದ ಪ್ರೀತಿ ಎಂತದ್ದು ಎಂದು ತಿಳಿಯಲು.
ಗಾಂಧೀಜಿ ತುಂಡು ಬಟ್ಟೆ ಸುತ್ತಿರುವ ಬಡವರನ್ನು ಕಂಡರು. ತನ್ನ ದೇಶದಲ್ಲಿ ಉಡುವ ಬಟ್ಟೆಗೂ ಎಂತಹ ದಾರಿದ್ರ್ಯವಿದೆ ಎಂಬುದನ್ನು ಅರಿತ ಇವರು ತನ್ನ ದೇಶವಾಸಿಗಳು ಸಂಪೂರ್ಣ ಮೈಮುಚ್ಚುವ ಬಟ್ಟೆ ಧರಿಸುವವರೆಗೂ ತಾನೂ ತುಂಡು ಬಟ್ಟೆಯನ್ನು ಮಾತ್ರ ಧರಿಸುತ್ತೇನೆಂದು ಪ್ರತಿಜ್ಞೆಗೈದರು. ಗಾಂಧೀಜಿ ಸಾಯುವವರೆಗೂ ತನ್ನ ಮಾತನ್ನು ಉಳಿಸಿಕೊಂಡು ತುಂಡು ಬಟ್ಟೆ ಮಾತ್ರ ಧರಿಸಿದರು.
ಅದು ಗಾಂಧೀಜಿಯವರು ಅಸಹಾಕಾರ ಚಳುವಳಿಯನ್ನು ಘೋಷಿಸಿದ ಸಮಯ. ಗಾಂಧೀಜಿ ದೇಶ ಸಂಚರಿಸುತ್ತಾ ತಮಿಳುನಾಡಿನ ಮಧುರೈಗೆ ತಲುಪಿದರು. ಹೋದ ಕಡೆಯಲ್ಲಾ ಅವರು ವಿದೇಶಿ ಬಟ್ಟೆಗಳನ್ನು ಸುಡಲು ಮತ್ತು ವಿದೇಶಿ ಸರಕಾರದ ಜೊತೆ ಅಸಹಕಾರ ಮೂಡುವಂತೆ ಜನರಲ್ಲಿ ವಿನಂತಿಸುತ್ತಿದ್ದರು. ಮಧುರೈನ ಮೀನಾಕ್ಷಿ ಮಂದಿರದ ವಿಶಾಲ ಅಂಗಳದಲ್ಲಿ ಅವರು ತಮ್ಮ ಈ ವಿನಂತಿಯನ್ನು ಪುನರುಚ್ಛರಿಸಿದರು. ಆಗ ಪ್ರೇಕ್ಷಕರಲ್ಲಿದ್ದ ಒಬ್ಬ ಬಡ ಯುವಕ, “ನನ್ನ ಹತ್ತಿರ ಇರುವುದು ಇಷ್ಟೇ ಬಟ್ಟೆ ಇದನ್ನೂ ಸುಟ್ಟೇನಾದರೆ ನಾನೇನು ತೊಡಲಿ? ಎಂದು ಪ್ರಶ್ನಿಸಿದ.
ಆಗ ಗಾಂಧೀಜಿ, “ನೀನು ಇಂತಹ ಒಂದು ಲುಂಗಿಯನ್ನು ತೊಡು, ವಿದೇಶಿ ಬಟ್ಟೆಗಳನ್ನು ಸುಡುವುದು ಧರ್ಮ” ಎಂದರು. ಆದರೆ ರಾತ್ರಿ ಪೂರ್ತಿ ಗಾಂಧೀಜಿ ತುಂಬಾ ಚಿಂತೆಯಲ್ಲಿದ್ದರು. ಆ ಬಡ ಯುವಕನ ಮಾತುಗಳು ಗಾಂಧೀಜಿಯವರ ಕಿವಿಗಳಲ್ಲಿ ಕೊರೆಯುತ್ತಿದ್ದವು. ಬೆಳಗಾದ ನಂತರ ಅವರು ತಮ್ಮ ಮಿತ್ರ ರಾಜಾಜಿಗೆ ಹೇಳಿದರು. “ದೇಶದ ಬಡ ಜನರಲ್ಲಿ ನಾನೂ ಒಬ್ಬವನಾಗುವುದಕ್ಕೋಸ್ಕರ ಇನ್ನು ಮುಂದೆ ಮಂಡಿಯವರಿಗೆ ಮಾತ್ರ ಪಂಚೆಯನ್ನಷ್ಟೇ ಧರಿಸುತ್ತೇನೆ. ಷರ್ಟ್ ಮುಂತಾದ ಹೊಲಿದ ಬಟ್ಟೆಗಳನ್ನು ಹಾಕಿಕೊಳ್ಳುವುದಿಲ್ಲ” ಎಂದರು.
1920 ರ ಸಮಯದಲ್ಲಿ ಶೇ.1.5 ಗಜ ಬಟ್ಟೆ ಜನರಿಗೆ ಸಿಗುವಂತಿತ್ತು. ಗಾಂಧೀಜಿ ತಮ್ಮ ಅವಶ್ಯಕತೆಯನ್ನು ದೇಶದ ಕಡುಬಡವನಾದ ವ್ಯಕ್ತಿಯ ಮಟ್ಟಕ್ಕೆ ಸೀಮಿತಗೊಳಿಸಿದರು. ರಾಜಾಜಿ ಈ ಘೋರ ತ್ಯಾಗಕ್ಕೆ ವಿರೋಧ ವ್ಯಕ್ತಪಡಿಸಿದರು. ಚಳಿಗಾಲದ ಕಷ್ಟಗಳನ್ನು ನೆನಪು ಮಾಡಿಸಿದರು. ಗಾಂಧೀಜಿ ಮಾತ್ರ ತಮ್ಮ ನಿರ್ಣಯಕ್ಕೆ ದೃಢಚಿತ್ತರಾಗಿದ್ದರು. ಆ ದಿನದ ಸಾಮಾನ್ಯ ಸಭೆಗೆ ಅವರು ತುಂಡು ಪಂಚೆಯುಟ್ಟು ಹೋದರು. ಅಂದಿನಿಂದ ಅವರು ಪೂರ್ತಿ ಬಟ್ಟೆ ಧರಿಸಲೇ ಇಲ್ಲ.
ಡಿಸೆಂಬರ್‌ನಲ್ಲಿ ಭಯಂಕರ ಚಳಿ ಮತ್ತು ಮಂಜಿನಲ್ಲೂ ವಿದೇಶ ಮತ್ತು ಯುರೋಪ್ ಯಾತ್ರೆಯಲ್ಲೂ ಅವರು ತುಂಡು ಪಂಚೆ ಉಟ್ಟು ಬೂಟು, ಸಾಕ್ಸು ಇಲ್ಲದೇ ಬರೀ ಚಪ್ಪಲಿಯಲ್ಲಿ ಹೊರಟರು. ಬರೀ ಶಾಲೊಂದನ್ನು ಹೊದ್ದು ಮಂಜುಗಾಳಿಯನ್ನು ತಡೆದರು. 20 ನೇ ಡಿಸೆಂಬರ್ 1921ರ ದಿನವದು ಗಾಂಧೀಜಿ ತಮ್ಮ ದೇಶವಾಸಿಗಳ ಬಡತನವನ್ನು ಪೂರ್ತಿಯಾಗಿ ತಮ್ಮದಾಗಿಸಿಕೊಂಡರು.
( ಸುಮಿತ್ರಾ ಗಾಂಧಿ ಕುಲಕರ್ಣಿಯವರ ಮಹಾತ್ಮ ಗಾಂಧಿ – ನನ್ನ ತಾತ ಪುಸ್ತಕ )