Select Page

Advertisement

ಅಭಿಯಂತರ ದಿನ – ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ವಿಶೇಷ ಲೇಖನ

ಅಭಿಯಂತರ ದಿನ – ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನದ ಪ್ರಯುಕ್ತ ವಿಶೇಷ ಲೇಖನ

“ನೀನು ಯಾವುದೇ ಕೆಲಸವನ್ನು ಮಾಡು, ಅದನ್ನು ಪ್ರೀತಿಯಿಂದ ಮಾಡು. ನೀನೊಬ್ಬ ರಸ್ತೆ ಕಸಗುಡಿಸುವವನೇ ಆಗಿರಬಹುದು, ಆದರೆ ನೀನು ಮಾಡಿದ ಕೆಲಸ ಹೇಗಿರಬೇಕೆಂದರೇ, ಬೇರೆ ಯಾವ ರಸ್ತೆಯೂ ನೀನು ಕಸಗುಡಿಸಿದ ರಸ್ತೆಯಷ್ಟು ಸ್ವಚ್ಛವಾಗಿರಬಾರಾದು” ಹೀಗೆ ಹೇಳಿದ್ದು ಬೇರಾರೂ ಅಲ್ಲ. ಇಡೀ ಜಗತ್ತಿಗೇ ಓರ್ವ ಇಂಜೀನೀಯರ್ ನ ಮಹತ್ವ ಸಾರಿದ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯನವರು.

ಒಂದು ಕಾಲದಲ್ಲಿ ಕರ್ನಾಟಕ ರಾಜ್ಯವು ಅಭಿವೃದ್ಧಿಯ ವಿಷಯದಲ್ಲಿ ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿರುವಾಗ ನಾಡಿಗೊಂದು ಯೋಜಿತ ರೂಪುರೇಷೆಗಳನ್ನು ನೀಡಿ, ಕರ್ನಾಟಕವನ್ನು ಗಮನಾರ್ಹ ಸಾಧನೆಯೆಡಗೆ ಕೊಂಡೊಯ್ದು, ತಾವು ಮೈಸೂರು ಸಂಸ್ಥಾನದ ದಿವಾನರಾಗಿದ್ದ ಕಾಲದಲ್ಲಿ ಕನ್ನಂಬಾಡಿ ಅಣೆಕಟ್ಟು, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಮೈಸುರು ಸ್ಯಾಂಡಲ್ ಸೋಪ್ ಕಾರ್ಖಾನೆ ಹೀಗೆ ಹತ್ತು ಹಲವಾರು ವಿಶಿಷ್ಟ ಯೋಜನೆಗಳನ್ನು ರೂಪಿಸಿ, ಸ್ಥಾಪಿಸಿದ ಪ್ರಾಮಾಣಿಕ ದಕ್ಷ ಆಡಳಿತಗಾರ, ಧೀಮಂತ ವ್ಯಕ್ತಿತ್ವವುಳ್ಳ ಹೆಸರಾಂತ ಅಭಿಯಂತರ, ಎಲ್ಲದಕ್ಕೂ ಮಿಗಿಲಾಗಿ ಓರ್ವ ಕನ್ನಡಿಗ, ಇವರ ಜನ್ಮದಿನವನ್ನು ದೇಶದಾದ್ಯಂತ “ಅಭಿಯಂತರ ದಿನ”(ಇಂಜೀನಿಯರ್ಸ ಡೇ)ಯನ್ನಾಗಿ ಆಚರಿಸುತ್ತಿರುವುದು ನಮಗೆ ಅತ್ಯಂತ ಖುಷಿ ಮತ್ತು ಗೌರವ ತರುವ ಸಂಗತಿ.

ಸರ್ ಎಂ. ವಿ. ಅವರ ವಂಶಜರು ಮೂಲತಃ ಆಂಧ್ರಪ್ರದೇಶದವರು. ಆದರೆ ಇವರ ಕುಟುಂಬ ಕರ್ನಾಟಕಕ್ಕೆ ಬಂದು ನೆಲಸಿ ಸುಮಾರು ವರ್ಷಗಳಾಗಿದ್ದವು. ಈ ಕನ್ನಡ ಪುಣ್ಯಭೂಮಿಯಲ್ಲಿ ಜನಿಸಿ, ಕನ್ನಡದ ಕೀರ್ತಿ ಪತಾಕೆಯನ್ನು ಇಡೀ ಜಗದಗಲ ಹಾರಿಸಿದ ಮಹನೀಯ ವಿಶ್ವೇಶ್ವರಯ್ಯನವರು. ಇಂದು ಇವರ 159ನೇ ಜನ್ಮವರ್ಷ. 1915ರಲ್ಲಿಯೇ ನಮಗೆ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿಕೊಡುವುದರ ಮೂಲಕ ಕನ್ನಡ ನಾಡುನುಡಿಗಾಗಿ ಒಂದು ಕಿಚ್ಚನ್ನು ಹೊತ್ತಿಸಿ ಮರೆಯಾದ ಈ ಮಾಣಿಕ್ಯವನ್ನು ಇಂದು ನಾವೆಲ್ಲರೂ ನೆನೆಯಲೇ ಬೇಕು.

ಸರ್. ಎಂ. ವಿಶ್ವೇಶ್ವರಯ್ಯನವರ ಪೂರ್ಣ ಹೆಸರು ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಮೋಕ್ಷಗುಂಡಂ ಎಂಬುವುದು ಅವರ ಮನೆತನದ ಹೆಸರು, ಸೆಪ್ಟೆಂಬರ್ 15, 1860ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಶ್ರೀ ಶ್ರೀನಿವಾಸ ಶಾಸ್ತ್ರಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮ ದಂಪತಿಗಳ ಪುಣ್ಯ ಉದರದಲ್ಲಿ ವಿಶ್ವೇಶ್ವರಯ್ಯನವರು ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮುದ್ದೇನಹಳ್ಳಿಯಲ್ಲೇ ಪಡೆದರು. ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ, ವಿಶ್ವೇಶ್ವರಯ್ಯನವರು ಬಾಲ್ಯದಲ್ಲಿ ತುಂಬಾ ಚಾಣಾಕ್ಷರಾಗಿದ್ದರು. ವಿದ್ಯಾಭ್ಯಾಸದಲ್ಲಿ ಎಲ್ಲರಿಗಿಂತಲೂ ಮುಂದೆ ಇದ್ದು, ಶಿಕ್ಷಕರಿಗೆ ಪ್ರೀತಿ ಪಾತ್ರರಾಗಿದ್ದರು. ಇವರ ಪ್ರತಿಭೆಯನ್ನು ಗುರುತಿಸಿ ಇವರ ಸೋದರಮಾವ ಎಚ್‌. ರಾಮಯ್ಯನವರು ಬೆಂಗಳೂರಿಗೆ ಕರೆ ತರುತ್ತಾರೆ. ನಂತರ ಬೆಂಗಳೂರಿನಲ್ಲಿಯೇ ತಮ್ಮ ಮುಂದಿನ ಶಿಕ್ಷಣವನ್ನು ಪೂರೈಸುತ್ತಾರೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗ ಅವರಿಗೆ ಸರಕಾರದಿಂದ ವಿದ್ಯಾರ್ಥಿ ವೇತನ ಸಿಗುತ್ತಿತ್ತು. ಆದರೆ ಬದುಕಿನ ಬಂಡಿ ದೂಡಲು ಈ ಹಣ ಸಾಕಾಗುತ್ತಿರಲಿಲ್ಲ. ಆಗ ಮನೆಯಲ್ಲಿ ಮಕ್ಕಳಿಗೆ ಪಾಠ ಹೇಳಿ, ಮತ್ತೇನಾದರೂ ಕೆಲಸ ಮಾಡಿ ಹಣವನ್ನು ಸಂಪಾದಿಸುತ್ತಿದ್ದರು. ಒಮ್ಮೊಮ್ಮೆ ಊರಿಗೆ ಬರಲು ಹಣವಿಲ್ಲದ ಸಮಯದಲ್ಲಿ ನಡೆದುಕೊಂಡೇ ಮುದ್ದೇನಹಳ್ಳಿಯವರೆಗೂ ಸುಮಾರು 60ಕಿಮೀ ನಡೆದುಕೊಂಡೇ ಬಂದ ನಿದರ್ಶನಗಳಿವೆ. ಅಷ್ಟರ ಮಟ್ಟಿಗೆ ಇವರ ಜೀವನ ಕಷ್ಟಕರವಾಗಿತ್ತು‌. ಅಂತಹ ಪರಿಸ್ಥಿತಿಯಲ್ಲಿಯೂ 1881ರಲ್ಲಿ ಮದರಾಸು ಕಾಲೇಜಿನಿಂದ BA ಪದವಿ ಪಡೆದರು. ತದನಂತರ ಆಗಿನ ಮೈಸೂರು ದಿವಾನರಾಗಿದ್ದ ರಂಗಚಾರ್ಲು ಅವರನ್ನು ಭೇಟಿ ಮಾಡಿ ಸರಕಾರದ ಸಹಾಯದಿಂದ ಪುಣೆಯ ಇಂಜಿನೀಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪೂರೈಸಿದರು.

ತಮ್ಮ ಶಿಕ್ಷಣ ಮುಗಿದ ಕೂಡಲೇ 1884ರಲ್ಲಿ ಮುಂಬಯಿ ಸಂಸ್ಥಾನಕ್ಕೆ ಸೇರಿದ ನಾಸಿಕ್ ಜಿಲ್ಲೆಯ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನೀಯರ್ ಆಗಿ ಸರ್ ಎಂ.ವಿ. ತಮ್ಮ ವೃತ್ತಿ ಜೀವನವನ್ನು ಆರಂಭಿಸುತ್ತಾರೆ. ಕೆಲಸ ಎಂದು ಬಂದಾಗ ಯಾರ ಜೊತೆಗೂ ಯಾವುದಕ್ಕೂ ರಾಜಿ ಮಾಡಿಕೊಳ್ಳುತ್ತಿರಲಿಲ್ಲ. ಅಂದಿನ ಕೆಲಸ ಅಂದೇ ಮಾಡಿ ಮುಗಿಸುತ್ತಿದ್ದರು. ಅವರು ಕೈ ಹಾಕಿದ ಕೆಲಸಕ್ಕೆ ನೂರಕ್ಕೆ ನೂರರಷ್ಟು ನ್ಯಾಯವನ್ನು ಒದಗಿಸಿ ಕೊಡುತ್ತಿದ್ದರು. ಅಷ್ಟು ಪ್ರಾಮಾಣಿಕವಾಗಿ ಕೆಲಸವನ್ನು ಮಾಡುತ್ತಿದ್ದರು. ಹೀಗೆ 1894ರಲ್ಲಿ ಒಂದು ನಗರಕ್ಕೆ ಅತೀ ಕಡಿಮೆ ಸಮಯದಲ್ಲಿ ಮತ್ತು ಕಡಿಮೆ ಖರ್ಚಿನಲ್ಲಿ ಕೆಲಸವನ್ನು ಮುಗಿಸಿ ಅಲ್ಲಿನ ಗವರ್ನರ್ ಅವರಿಂದ ಮೆಚ್ಚುಗೆ ಮತ್ತು ಹೊಗಳಿಕೆಯನ್ನು ಗಳಿಸಿಕೊಂಡಿದ್ದರು.1897ರಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಜಪಾನ್ ಪ್ರವಾಸ ಕೈಗೊಂಡು ಅಲ್ಲಿನ ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿ ಮಾಡುವ ಕಾರ್ಯಶೈಲಿಯನ್ನು ಗಮನಿಸಿ, ನಾವು ಇದನ್ನು ನಮ್ಮ ದೇಶದಲ್ಲಿ ಈ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹುಮ್ಮಸ್ಸು ಪಟ್ಟವರು‌. ನಂತರ ಹಾಗೆಯೇ ಇಂಗ್ಲೆಂಡ್ ಪ್ರವಾಸ ಕೈಗೊಂಡ ಸಮಯದಲ್ಲಿ ಅಲ್ಲಿನ ಒಂದು ಕಂಪನಿಗೆ ಭೇಟಿ ನೀಡುತ್ತಾರೆ, ಅಲ್ಲಿ ಯಾವುದೋ ಒಂದು ಯಂತ್ರ ಕೆಟ್ಟು ಕರ್ಕಶ ಶಬ್ದ ಮಾಡುತ್ತಿತ್ತು, ಅದು ಯಾವುದು? ಏನಾಗಿದೆ? ಎಂದು ಸ್ವತಃ ತಾವೇ ಸುಮಾರು 100 ಮೆಟ್ಟಿಲುಗಳನ್ನು ಹತ್ತಿ ನೋಡಿ, ಅದಕ್ಕೆ ಪರಿಹಾರ ನೀಡಿ ಮರಳುತ್ತಾರೆ. ಇದು ಅವರಿಗೆ ತಮ್ಮ ಕೆಲಸದ ಮೇಲಿದ್ದ ನಿಷ್ಠೆ ಮತ್ತು ಆಸಕ್ತಿಗೆ ಹಿಡಿದ ಕೈಗನ್ನಡಿ.

ನಮ್ಮ ಕರ್ನಾಟಕಕ್ಕೆ ಇವರ ಕೊಡುಗೆ ಒಂದೇ ಎರಡೇ, ನೂರಾರಿವೆ‌. ಮೈಸೂರಿನ ದಿವಾನರಾಗಿ ಆಯ್ಕೆಯಾದ ನಂತರ ಇವರ ಸೇವೆ ಪ್ರಾರಂಭವಾಗಿ, ಇಂದು ನಮ್ಮ ಮೂರು ರಾಜ್ಯಗಳ ಜೀವಜಲನಾಡಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿದ ಕೃಷ್ಣರಾಜಸಾಗರ ಆಣೆಕಟ್ಟು (ಕನ್ನಂಬಾಡಿ), ಇದರ ಕಟ್ಟಡವು 1911ರಲ್ಲಿ ಪ್ರಾರಂಭವಾಗಿ 1931ರಲ್ಲಿ ಕೊನೆಗೊಂಡಿತು. 1913ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಮೈಸೂರು ಸ್ಯಾಂಡಲ್ ಸೋಪ್ ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಕನ್ನಡ ಸಾಹಿತ್ಯ ಪರಿಷತ್ತು, 1917ರಲ್ಲಿ ಬೆಂಗಳೂರಿನಲ್ಲಿ ಸರ್ಕಾರಿ ಇಂಜೀನೀಯರ್ ಕಾಲೇಜು ಸ್ಥಾಪಿಸಿದರು,1918ರಲ್ಲಿ ಶಿವಮೊಗ್ಗದ ಭದ್ರವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಹೀಗೆ ಅನನ್ಯ ಕೊಡುಗೆಗಳನ್ನು ನಮಗೆ ಧಾರೆ ಎರೆದಿದ್ದಾರೆ.

ಇವರ ಅಪಾರ ಸೇವೆ ಮತ್ತು ಕೊಡುಗೆಗಳನ್ನು ಪರಿಗಣಿಸಿ ಬ್ರಿಟಿಷ್ ಸರ್ಕಾರ “ಸರ್” ಎಂಬ ಬಿರುದು ನೀಡಿ ಗೌರವಿಸಿದೆ. ಮೈಸೂರು ವಿವಿಯಿಂದ ಗೌರವ ಡಾಕ್ಟರೇಟ್ ಪದವಿ, 1931ರಲ್ಲಿ ಬನಾರಸ್ ಹಿಂದೂ ವಿವಿಯಿಂದ ಡಿ.ಲಿಟ್ ಪದವಿ, ಹಾಗೇ ಇದರ ಜೊತೆಗೆ 1955ರಲ್ಲಿ ಭಾರತ ಸರ್ಕಾರ ನೀಡುವ ಅತ್ಯನ್ನುತ ನಾಗರಿಕ ಪುರಸ್ಕಾರವಾದ “ಭಾರತ ರತ್ನ” ಪ್ರಶಸ್ತಿ ಲಭಿಸಿದೆ. ಹೀಗೆ ಅನೇಕ ಪ್ರಶಸ್ತಿ, ಗೌರವಗಳನ್ನು ಸರ್ ಎಂ.ವಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಬೆಳಗಾವಿಯಲ್ಲಿನ ಅತ್ಯಂತ ದೊಡ್ಡ ಭಾರತೀಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ” ಎಂದು ನಾಮಕರಣ ಮಾಡಿರುವುದು ಮತ್ತು ದೆಹಲಿಯ ಒಂದು ಮೋತಿಬಾಗ್ ಎಂಬ ಮೆಟ್ರೋ ನಿಲ್ದಾಣಕ್ಕೆ ಸರ್ ಎಂ. ವಿ ಅವರ ಹೆಸರಿಡುವುದರ ಮೂಲಕ ಅವರಿಗೆ ಗೌರವವನ್ನು ನೀಡಲಾಗಿದೆ‌. ಇವರ ಹೆಸರಿನಡಿ ಪ್ರತಿವರ್ಷ ಹಲವಾರು ಸಂಘ ಸಂಸ್ಥೆಗಳು ಇಂಜೀನೀಯರಿಂಗ್ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ವಿಶೇಷ ಪ್ರಶಸ್ತಿ, ಬಹುಮಾನ ನೀಡುತ್ತವೆ. ದೇಶದ ಹಲವಾರು ಪಾಲಿಟೆಕ್ನಿಕ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳಿಗೆ ಇವರ ಹೆಸರಿಟ್ಟಿರುವುದು ಶ್ಲಾಘನೀಯ. ಅದಕ್ಕೂ ಹೆಚ್ಚಾಗಿ ಇವರ ಸ್ಮರಣೆಗಾಗಿ ಇವರ ಜನ್ಮದಿನವನ್ನು ಭಾರತದಲ್ಲಿ ಪ್ರತಿವರ್ಷ ಸೆಪ್ಟೆಂಬರ್ 15ನ್ನು ಅಭಿಯಂತರರ ದಿನ(ಇಂಜೀನಿಯರ್ಸ ಡೇ) ಯನ್ನಾಗಿ ಆಚರಿಸುತ್ತಿರುವುದು ಅತೀವ ಹೆಮ್ಮೆಯ ವಿಷಯ.

ಇಷ್ಟೇಲ್ಲಾ ಸಾಧನೆ ಮತ್ತು ಕೊಡುಗೆಗಳನ್ನು ನಮಗೆ ಬಳುವಳಿಯಾಗಿ ನೀಡಿದ ಸರ್. ಎಂ.ವಿ. ಅವರು ಸರಳತೆ ಎಂಬ ಪದಕ್ಕೆ ಹೇಳಿ ಮಾಡಿಸಿದ ವ್ಯಕ್ತಿತ್ವ. ಇವರಿಗೆ ಎಷ್ಟೇ ಗೌರವ ಪ್ರಶಂಸೆಗಳು ಬಂದರೂ, ಅತ್ಯಂತ ವಿನಮ್ರವಾಗಿ ಸ್ವೀಕರಿಸುತ್ತಿದ್ದ ಮೇರು ಜೀವಿ. ತಮ್ಮ ನಿವೃತ್ತಿಯ ದಿನದಂದು ಸರಕಾರಿ ಕಾರಿನಲ್ಲಿ ತಮ್ಮ ಕಛೇರಿಗೆ ಬಂದು, ಅಧಿಕಾರವನ್ನು ಹಸ್ತಾಂತರಿಸಿ, ಅವರ ಸಿಬ್ಬಂದಿ ನೀಡಿದ ಮನಪೂರಕ ಬಿಳ್ಕೊಡುಗೆಯನ್ನು ಸ್ವೀಕರಿಸಿ, ಮರಳಿ ಮನೆಗೆ ತಮ್ಮ ಸ್ವಂತ ಕಾರನ್ನು ತಾವೇ ಚಲಾಯಿಸಿಕೊಂಡು ಬಂದದ್ದನ್ನು ನೆನಪಿಸಿ ಕೊಂಡರೇ ಅದೇಂಥ ಸರಳತೆಯ ಸಾಕಾರ ಮೂರ್ತಿ ಎಂಬುದು ಮನವರಿಕೆಯಾಗುತ್ತದೆ. ಅದರಂತೆಯೇ ಇವರ ಬಳಿ ಸದಾ ಎರಡು ಲೆಕ್ಕಣಿಕೆಗಳು ಇರುತ್ತಿದ್ದವು, ಒಂದು ಸರ್ಕಾರಿ ಕೆಲಸಕ್ಕೆ, ಇನ್ನೊಂದು ವೈಯಕ್ತಿಕ ಕಾರ್ಯಕ್ಕೆ. ಇದು ಅವರ ಪ್ರಾಮಾಣಿಕತೆಯನ್ನು ಪರಿಚಯಿಸುವದಕ್ಕೆ ಒಂದು ಸಣ್ಣ ಉದಾಹರಣೆ. ಸರ್. ಎಂ.ವಿ. ಅವರ ವೇಷಭೂಷಣ, ಮುಖದಲ್ಲಿನ ಗಾಂಭೀರ್ಯ, ಮಾತನಾಡುವ ಸ್ಪಷ್ಟತೆ, ಜೀವನ ಶೈಲಿಯನ್ನು ನೋಡಿದರೆ ಇವರ ಜೀವನ ನಿಜವಾಗಿಯೂ ನಮಗೆಲ್ಲ ಮಾದರಿ. ಇಂತಹ ಸಾರ್ಥಕ ಜೀವನವನ್ನು ನಡೆಸಿದ ಭಾರತರತ್ನ ಸರ್. ಮೋಕ್ಷಗುಂಡಂ ವಿಶ್ವೇಶ್ವರಯ್ಯರವರು 1962ನೇ ಎಪ್ರಿಲ್ 14ರಂದು ನಸುಕಿನ ಜಾವ 2:15ಕ್ಕೆ ನಮ್ಮನ್ನಗಲಿದ್ದು, ಈ ದೇಶಕ್ಕೆ ಬೆಲೆ ಕಟ್ಟಲಾಗದ ನಷ್ಟ. ಹಾಗಿತ್ತು ಅವರ ಜೀವನಶೈಲಿ.

ಗಿರೀಶ್ ವಿಠ್ಠಲ ಬಡಿಗೇರ
ಸಂಪಾದಕರು – ಬೆಳಗಾವಿ ವಾಯ್ಸ್

Advertisement

Leave a reply

Your email address will not be published. Required fields are marked *