ಸಾಹುಕಾರ್ ತಂತ್ರಕ್ಕೆ ಹೆಬ್ಬಾಳ್ಕರ್ ತಿರುಮಂತ್ರ
ಹಿಂದುಳಿದ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟ ಶಾಸಕಿ ಹೆಬ್ಬಾಳ್ಕರ್
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸಹೋದರರ ಮಧ್ಯೆ ಸವಾಲ್
ಬೆಳಗಾವಿ : ಮುಂದಿನ ಮೂರು ತಿಂಗಳು ನನ್ನ ವಿರುದ್ಧದ ರಾಜಕೀಯ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿವುದಿಲ್ಲ ಎಂದು ಮೌನವೃತ ತಾಳಿರುವ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಎದುರಾಳಿ ರಮೇಶ್ ಜಾರಕಿಹೊಳಿ ವಿರುದ್ಧ ಈ ಬಾರಿ ಚಾಣಾಕ್ಷತನದಿಂದ ಹೋರಾಡಲು ಸಕಲ ಸಿದ್ದತೆ ಮಾಡಿಕೊಂಡಂತೆ ಕಾಣುತ್ತದೆ. ಅವರ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡದೆ ನೇರವಾಗಿ ಮತದಾರರ ಮುಂದೆ ತಮ್ಮ ಸಂಕಟ ತೋಡಿಕೊಳ್ಳುವ ಮೂಲಕ ಚುನಾವಣೆಗೆ ಸಿದ್ದರಾಗಿದ್ದಾರೆ.
ಹೌದು ಕಳೆದ ಕೆಲವು ದಿನಗಳ ಹಿಂದೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ನಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದಾರೆ. ಮುಂದಿನ ಮೂರು ತಿಂಗಳು ನಾನು ಯಾವುದೇ ರೀತಿಯ ಆರೋಪಗಳಿಗೆ ಉತ್ತರಿಸಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಚುನಾವಣೆ ಸಮೀಪದಲ್ಲಿ ರಮೇಶ್ ಜಾರಕಿಹೊಳಿ ಮಾಡಿದ್ದ ಆರೋಪ ಜಿಲ್ಲೆಯ ಜನರಲ್ಲಿ ಗೊಂದಲವನ್ನು ಉಂಟುಮಾಡಿತ್ತು.
ಹಿಂದುಳಿದ ವರ್ಗಗಳ ಸಮಾವೇಶದ ಮೂಲಕ ಪ್ರತ್ಯುತ್ತರ : ಕಳೆದ ಕೆಲವು ದಿನಗಳ ಹಿಂದೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಭರ್ಜರಿ ಸಮಾವೇಶ ಆಯೋಜನೆ ಮಾಡಿದ್ದರು. ಇದಾದ ನಂತರ ಹೆಬ್ಬಾಳ್ಕರ್ ವಿರುದ್ಧ ಗಂಭೀರ ಆರೋಪಗೈದಿದ್ದರು. ಇವೆಲ್ಲವನ್ನೂ ಸೂಕ್ಷ್ಮವಾಗಿ ಅರಿತ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಂಗಳವಾರ ಸಂಜೆ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಕಾರ್ಯಕರ್ತರ ಸಮಾವೇಶ ಆಯೋಜಿಸುವ ಮೂಲಕ ಮತಯಾಚನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜಕೀಯ ಎದುರಾಳಿಗಳು ತಮ್ಮ ಮೇಲೆ ಮಾಡುತ್ತಿರುವ ಆರೋಪವನ್ನು ಭಾವನಾತ್ಮಕವಾಗಿ ಜನರ ಮುಂದಿಡುವ ಪ್ರಯತ್ನ ನಡೆಸಿದ್ದಾರೆ.
ಹೆಬ್ಬಾಳ್ಕರ್ ಮೌನಕ್ಕೆ ಕಾರಣ ಏನು? : ಒಂದು ಕಾಲದಲ್ಲಿ ಅತ್ಯಾಪ್ತರಾಗಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಬಾಂಧವ್ಯ ಸದ್ಯ ಪರಸ್ಪರ ವಾಗ್ವಾದದ ಮಟ್ಟಿಗೆ ಹಳಸಿದೆ. ಸಿಡಿ ಪ್ರಕರಣದ ಕುರಿತು ಶಾಸಕ ರಮೇಶ್ ಆಗಾಗ್ಗೆ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಆರೋಪ ಮಾಡುತ್ತಿದ್ದರೂ, ಇವರಿಗೂ ಶಾಸಕಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇವೆಲ್ಲಕ್ಕೂ ಪ್ರಮುಖ ಕಾರಣ ಈಗ ಏನಾದರು ಪ್ರತಿಕ್ರಿಯೆ ನೀಡಿದರೆ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದಂತಾಗುತ್ತದೆ, ಆದ್ದರಿಂದ ಜನರ ಮುಂದೆ ಭಾವನಾತ್ಮಕ ವಿಷಯ ಮಾತಾಡಿ ಮತ ಪಡೆಯುವ ತಂತ್ರ ಹೆಣೆದಿದ್ದು ಇದು ಎಷ್ಟರಮಟ್ಟಿಗೆ ಯಶಸ್ವಿ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.
ಸತೀಶ್ ಜಾರಕಿಹೊಳಿ ಮುಂದಿಟ್ಟುಕೊಂಡು ರಮೇಶ್ ಎದುರಿಸುವ ಯತ್ನ : ಕಳೆದ ಸ್ಥಳೀಯ ಸಂಸ್ಥೆಗಳಿಂದ ನಡೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಸ್ವತಃ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ ಪರ ಶಾಸಕ ಸತೀಶ್ ಜಾರಕಿಹೊಳಿ ಪ್ರಚಾರ ನಡೆಸಿ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಧ್ಯ ಸತೀಶ್ ಜಾರಕಿಹೊಳಿ ಬೆಂಬಲದೊಂದಿಗೆ ಶಾಸಕಿ ಹೆಬ್ಬಾಳ್ಕರ್ ತಮ್ಮ ಪ್ರಚಾರ ಕಾರ್ಯ ಮುಂದುವರಿಸಿದ್ದು ಮುಂದೆಯೂ ರಾಜಕೀಯ ಎದುರಾಳಿ ರಮೇಶ್ ಜಾರಕಿಹೊಳಿ ಅವರನ್ನು ಎದುರಿಸುವ ತಂತ್ರ ಹೆಣೆದಿದ್ದಾರೆ ಎನ್ನಲಾಗುತ್ತಿದೆ.
ರಮೇಶ್ ಜಾರಕಿಹೊಳಿ ಆರೋಪಗಳನ್ನು ಮೆಟ್ಟಿಲಾಗಿಸಿಕೊಳ್ಳುವ ತಂತ್ರ : ಹೌದು ಸಿಡಿ ವಿವಾದ ಕುರಿತಾಗಿ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಶಾಸಕಿ ಹೆಬ್ಬಾಳ್ಕರ್ ಹಾಗೂ ಡಿ.ಕೆ ಶಿವಕುಮಾರ ವಿರುದ್ಧ ಆರೋಪ ಮಾಡಿದರು ಇದಾವುದಕ್ಕೂ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿಲ್ಲ. ರಮೇಶ್ ಜಾರಕಿಹೊಳಿ ಎಷ್ಟೇ ಆರೋಪ ಮಾಡಿದರು ಜನರ ಬಳಿ ಅನುಕಂಪ ಗಿಟ್ಟಿಸಿಕೊಳ್ಳುವ ಮೂಲಕ ಚುನಾವಣೆ ಎದುರಿಸಲು ಶಾಸಕಿ ಹೆಬ್ಬಾಳ್ಕರ್ ಮುಂದಾಗಿದ್ದಾರೆ. ಇನ್ನೂ ಭಾವನಾತ್ಮಕವಾಗಿ ಜನರ ವಿಶ್ವಾಸ ಗಳಿಸಿ ಸುಲಭವಾಗಿ ಚುನಾವಣೆ ಎದಿರಿಸಿದರೆ ಲಾಭ ಪಡೆಯಬಹುದು ಎಂಬ ಲೆಕ್ಕಾಚಾರ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು.