Select Page

1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಖರ್ಚು ಎಷ್ಟಾಗಿತ್ತು ಗೊತ್ತಾ…?

1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಖರ್ಚು ಎಷ್ಟಾಗಿತ್ತು ಗೊತ್ತಾ…?

ಬೆಳಗಾವಿ : ಕುಂದಾನಗರಿ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ನಗರ. ಮಹಾತ್ಮ ಗಾಂಧೀಜಿ ಏಕಮಾತ್ರ ಅಧ್ಯಕ್ಷತೆಯಲ್ಲಿ ನಡೆದಿದ್ದ 39 ನೇ ಕಾಂಗ್ರೆಸ್ ಅಧಿವೇಶನ ಬೆಳಗಾವಿ ನಗರದಲ್ಲಿ ಜರುಗಿತ್ತು. ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಬೇಕು. ದೇಶದ ಜನ ಹಿಂಸೆಯ ಮಾರ್ಗ ತುಳಿಯಬಾರದು. ಅಸಹಕಾರ ಚಳುವಳಿ ಮೂಲಕ ಬ್ರಿಟಿಷರು ದೇಶ ಬಿಟ್ಟು ತೊಡಗುವಂತೆ ಮಾಡಬೇಕು ಎಂದು ಗಾಂಧೀಜಿ ಈ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು. ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿಜಿ ಮಾಡಿದ್ದ ಭಾಷಣದಲ್ಲಿ ದೇಶದ ಜನರಲ್ಲಿ ಒಗ್ಗಟ್ಟು, ಸ್ಥಳೀಯ ಭಾಷೆಯ ಮಹತ್ವ ಹಾಗೂ ಅಸ್ಪೃಶ್ಯತೆ ಕುರಿತು ಮಾತನಾಡಿದ್ದರು.

1924 ರ ಡಿಸೆಂಬರ್ 26, 27 ರಂದು ಎರಡು ದಿನ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ನ 39 ನೇ ಮಹಾಅಧಿವೇಶನ ಬೆಳಗಾವಿ ನಗರದ ಟಿಲಕವಾಡಿ ( ಆಗಿನ ವಿಜಯನಗರ )ದಲ್ಲಿ ಜರುಗಿತ್ತು. ಅಧಿವೇಶನಕ್ಕೆ ಆರು ದಿನ ಮುಂಚಿತವಾಗಿ ಮಹಾತ್ಮ ಗಾಂಧೀಜಿ ರೈಲಿನ ಮೂಲಕ ಬೆಳಗಾವಿಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅಧಿವೇಶನ ನಡೆಯುವ ಆವರಣಕ್ಕೆ ಹೊಂದಿಕೊಂಡಂತೆ ವಿಶೇಷ ರೈಲು ನಿಲ್ದಾಣ ವ್ಯವಸ್ಥೆಯನ್ನು ಮಾಡಲಾಗಿತ್ತು.

ಗೋಪುರ ಶೈಲಿಯ ಪ್ರವೇಶ ದ್ವಾರವನ್ನು ಈ ಅಧಿವೇಶನದಲ್ಲಿ ನಿರ್ಮಾಣ ಮಾಡಲಾಗಿತ್ತು. ಬೆಳಗಾವಿ ನೆಲಕ್ಕೆ ಕಾಲಿಟ್ಟ ತಕ್ಷಣವೇ ಮಹಾತ್ಮ ಗಾಂಧೀಜಿ ಬೆಳಗಾವಿ ಮಣ್ಣನ್ನು ಸ್ಪರ್ಶಿಸಿದ್ದು ಐತಿಹಾಸಿಕ ಗಳಿಗೆಯೆಂದೆ ಹೇಳಬಹುದು. ಆ ಸಂಧರ್ಭದಲ್ಲಿ ಕೇವಲ 30 ಸಾವಿರ ಜನಸಂಖ್ಯೆ ಇದ್ದ ಸಣ್ಣ ನಗರದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಲು ಪ್ರಮುಖ ಕಾರಣವೆಂದರೆ ಬಾಲಗಂಗಾಧರ ತಿಲಕರ ಪ್ರಭಾವ ಮತ್ತು ಮುಂಬೈ ಪ್ರೆಸಿಡೆನ್ಸಿಗೆ ಬೆಳಗಾವಿ ಒಳಪಟ್ಟ ಹಿನ್ನಲೆಯಲ್ಲಿ, ಸ್ವಾತಂತ್ರ್ಯದ ಕಾವು ಜನರಲ್ಲಿ ಜೋರಾಗಿತ್ತು. ಇದೇ ಸಂದರ್ಭದಲ್ಲಿ ,1923 ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷ ಮೌಲಾನಾ ಮಹಮ್ಮದ್ ಅಲಿ ಅವರು ಗಾಂಧೀಜಿಯವರನ್ನು ವೇದಿಕೆಗೆ ಕರೆತಂದಿದ್ದರು.

ಟೆಂಟ್ ನಲ್ಲಿ ಗಾಂಧೀಜಿ ವಾಸ್ತವ್ಯ : ಸರಳ ಜೀವನ ಅಳವಡಿಸಿಕೊಂಡಿದ್ದ ಮಹಾತ್ಮ ಗಾಂಧೀಜಿ ಬೆಳಗಾವಿ ಅಧಿವೇಶನಕ್ಕೆ ಒಂದು ವಾರ ಮುಂಚೆಯೇ ಆಗಮಿಸಿದ್ದರು. ಅಂದಿನ ಮುಖಂಡರು ಗಾಂಧೀಜಿಯವರ ವಾಸ್ತವ್ಯಕ್ಕೆ ಮನೆಗಳಲ್ಲಿ ವ್ಯವಸ್ಥೆ ಮಾಡಿದ್ದರು. ಆದರೆ ಇದಕ್ಕೆ ಒಪ್ಪದ ಇವರು ಅಧಿವೇಶನ ನಡೆಯುತ್ತಿದ್ದ ಸ್ಥಳದಲ್ಲೇ ಒಂದು ಟೆಂಟ್ ಹಾಕಿಕೊಂಡು ಅಲ್ಲಿಯೇ ವಾಸ್ತವ್ಯ ಮಾಡಿದ್ದರು. ಇದೇ ಸಂದರ್ಭದಲ್ಲಿ ಪಕ್ಕದ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಅರಿವು ಮೂಡಿಸಿದ್ದರು.

ಜಿಲ್ಲೆಯ ಹುದಲಿ ಗ್ರಾಮದವರಾದ ಕರ್ನಾಟಕದ ಖಾದಿ ಭಗೀರಥ ಎಂದೇ ಖ್ಯಾತಿ ಹೊಂದಿದ್ದ ಗಂಗಾದರ್ ರಾವ್ ದೇಶಪಾಂಡೆ ಅವರು ಸಂಪೂರ್ಣ ಅಧಿವೇಶನದ ಉಸ್ತುವಾರಿ ತಂಡದಲ್ಲಿದ್ದರು. ಅಂದಿನ ಅಧಿವೇಶನಕ್ಕೆ ಒಟ್ಟು ಕರ್ಚಾಗಿದ್ದು 2,20,829 ಐದು ಆಣೆ ಹಾಗೂ ಆರು ಪೈಸೆ ಆಗಿತ್ತು. ಅಧಿವೇಶನಕ್ಕೆ ಬರುವ ಜನರ ಊಟೋಪಚಾರ ಹಾಗೂ ವಾಸ್ತವ್ಯ ಮಾಡಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಜನರ ಬಾಯಾರಿಕೆ ನೀಗಿಸಲು ಅಧಿವೇಶನ ಸಂದರ್ಭದಲ್ಲಿ  ನಿರ್ಮಾಣವಾದ ಪಂಪ ಸರೋವರ ( ಕಾಂಗ್ರೆಸ್ ಬಾವಿ ) ವೆಚ್ಚ 4,370 ರೂ 3 ಆಣೆ ಆಗಿತ್ತು. ಅಂದಿನಿಂದ ಇಂದಿನವರೆಗೂ ಈ ಬಾವಿ ಬತ್ತಿದ ನಿದರ್ಶನಗಳೇ ಇಲ್ಲ. ಮುಖಂಡರಾದ ಡಾ.ಎನ್‌.ಎಸ್‌. ಹರ್ಡಿಕರ್‌, ಭೀಮರಾವ್‌ ಪೋದ್ದಾರ್‌, ಆರ್‌.ಕೆಂಭಾವಿ, ಎಸ್‌.ಎಲ್‌. ವಾಮನ್‌, ಗೋವಿಂದರಾವ ಯಾಳಗಿ, ಜೀವನರಾವ ಯಾಳಗಿ ಸೇರಿದಂತೆ ಹಲವರು ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡರು. ಇಲ್ಲಿನ ಶಿಸ್ತುಬದ್ಧ ವ್ಯವಸ್ಥೆ ನೋಡಿದ ಗಾಂಧೀಜಿಯವರು ಮುಕ್ತಕಂಠದಿಂದ ಹೊಗಳಿದ್ದರು.

ಪ್ರಾದೇಶಿಕತೆಗೆ ಮಹತ್ವ ನೀಡಿದ್ದ ಅಧಿವೇಶನ : ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಗಳ ಬಗ್ಗೆ ಮಹಾತ್ಮ ಗಾಂಧೀಜಿಯವರಿಗೆ ಇದ್ದ ಕಳಕಳಿಯನ್ನು ಈ ಅಧಿವೇಶನದಲ್ಲಿ ಕಾಣಬಹುದಾಗಿದೆ. ಹುಯಿಲಗೋಳ ನಾರಾಯಣರಾಯರು ರಚಿಸಿದ್ದ ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಹಾಡನ್ನು ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಅಧಿವೇಶನದಲ್ಲಿ ಹಾಡಿ ಎಲ್ಲರ ಪ್ರಶಂಸೆ ಗಳಿಸಿದ್ದು ಸಹ ಇಲ್ಲಿನ ಐತಿಹಾಸಿಕ ಘಟನೆ. ಇದೇ ಸಂದರ್ಭದಲ್ಲಿ ಕನ್ನಡ ಚಳುವಳಿಗೂ ಶಕ್ತಿ ಲಭಿಸಿತ್ತು. ಈ ಅಧಿವೇಶನದಲ್ಲಿ ಮಹಾತ್ಮ ಗಾಂಧೀಯವರ ಜೊತೆ ಮೊತಿಲಾಲ್ ನೆಹರು, ಜವಾಹರಲಾಲ್ ನೆಹರು, ಅನ್ನಿ ಬೆಸಂಟ್, ವಲ್ಲಭ ಭಾಯ್ ಪಟೇಲ್ ಮುಂತಾದವರಿದ್ದರು.

ಅಧಿವೇಶನ ನೆನಪಿಗೆ ವೀರಸೌಧ ನಿರ್ಮಾಣ : ಮಹಾತ್ಮ ಗಾಂಧೀಜಿ ಅಧ್ಯಕ್ಷರಾಗಿದ್ದ ಐತಿಹಾಸಿಕ 1924 ರ ಕಾಂಗ್ರೆಸ್ ಅಧಿವೇಶನದ ಸವಿ ನೆನಪಿಗಾಗಿ ನಗರದ ಟಿಲಕವಾಡಿಯಲ್ಲಿ ವೀರಸೌಧ ನಿರ್ಮಾಣ ಮಾಡಲಾಗಿದೆ. ಅಧಿವೇಶನ ನಡೆದ ಸಂದರ್ಭದಲ್ಲಿ ಇದ್ದ ವಿಶಾಲವಾದ ಜಾಗದಲ್ಲಿ ಇಂದು ಕಟ್ಟಡಗಳು ತಲೆ ಎತ್ತಿದ್ದು ಅಂದಿಗೆ ತೋಡಿದ್ದ ಕಾಂಗ್ರೆಸ್ ಬಾವಿಯಿಂದ ಸಧ್ಯ ಸೌಧ ನೀರ್ಮಿಲಾಗಿದೆ. 1924 ರ ಅಧಿವೇಶನದ ಸಂಪೂರ್ಣ ಮಾಹಿತಿ ಈ ಸೌಧದಲ್ಲಿ ಲಭ್ಯವಿದ್ದು ಅಂದಿನ ಮಹತ್ವದ ಪೋಟೋಗಳನ್ನು ಇಲ್ಲಿ ಇಡಲಾಗಿದೆ. ಜೊತೆಗೆ ಗ್ರಂಥಾಲವನ್ನು ನಿರ್ಮಿಸಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!