Select Page

Advertisement

ಕನ್ನಡಮ್ಮನ ಸೇವೆಗೆ ಟೊಂಕಕಟ್ಟಿ ನಿಂತ ಬೆಳಗಾವಿ ಪ್ರತಿಭೆ

ಕನ್ನಡಮ್ಮನ ಸೇವೆಗೆ ಟೊಂಕಕಟ್ಟಿ ನಿಂತ ಬೆಳಗಾವಿ ಪ್ರತಿಭೆ

ಅಗ್ನಿಶಾಮಕ ದಳದಲ್ಲಿದ್ದುಕೊಂಡು ಸಾಹಿತ್ಯ ಕೃಷಿ ಮಾಡುತ್ತಿರುವ ಶಿವಲಿಂಗ

ಇನ್ನೂರು ಕನ್ನಡ ಹಾಡು ರಚಿಸಿ ಯುವಕರಿಗೆ ಮಾದರಿಯಾದ ಯುವ ಸಾಹಿತಿ

ದಿಗ್ಗಜ ಕಲಾವಿದರನ್ನು ಹಳ್ಳಿಗೆ ಕರೆಸುವ ಮೂಲಕ ಸಾಹಿತ್ಯ ಪ್ರೇಮಿಗಳ ಹೃದಯ ಗೆದ್ದ ಯುವಕ

ಬೆಳಗಾವಿ : ಸಾಮಾನ್ಯವಾಗಿ ಸರ್ಕಾರಿ ನೌಕರಿ ಸಿಕ್ಕರೆ ಸಾಕು ಈ ಜೀವನ ಸಾರ್ಥಕವಾಯ್ತು ಎಂಬ ಭಾವನೆ ಹೊಂದಿರುವವರನ್ನು ಈ ಸಮಾಜದಲ್ಲಿ ನೋಡಬಹುದು. ಆದರೆ ಸರ್ಕಾರಿ ಕಾಯಕದ ಜೊತೆಗೆ ಕನ್ನಡ ಸಾಹಿತ್ಯ ಕೃಷಿ ಮಾಡುತ್ತಾ ಸಂತೃಪ್ತಿ ಜೀವನ ನಡೆಸುತ್ತಿರುವವರು ಗೋಕಾಕ್ ತಾಲೂಕಿನ ಯುವಕ ಶಿವಲಿಂಗ ದಾನನ್ನವರ್.

ಶಿವಲಿಂಗ ದಾನನ್ನವರ್ ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಖಾನಟ್ಟಿ ಗ್ರಾಮದವರು. ಬಿಎಡ್ ಪದವಿ ಪೂರೈಸಿರುವ ಇವರು ಸಧ್ಯ ಅಗ್ನಿಶಾಮಕ ದಳ ಪೈರ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದಾರೆ.‌ ಆದರೆ ಶಿವಲಿಂಗ ಅವರ ಕನ್ನಡ ಪ್ರೇಮದ ಕುರಿತು ಹೇಳಬೇಕಾದರೆ  ಚಿಕ್ಕವಯಸ್ಸಿನಲ್ಲೇ ಸಾಹಿತ್ಯ ರುಚಿ ಹೊಂದಿದಂತವರು ಕನ್ನಡ ಸಾಹಿತಿಗಳ ಪುಸ್ತಕ ಓದುತ್ತ ಕೊನೆಗೆ ತಮ್ಮೊಳಗೆ ಒಬ್ಬ ಸಾಹಿತಿಯನ್ನು ಪೋಷಿಸಿದವರು ಇವರು. ಸರಳ ಭಾಷೆಯಲ್ಲಿ ಕಥೆ, ಕವನ, ಕಾದಂಬರಿ ಹಾಗೂ ಸಂಗೀತ ಸಾಲುಗಳನ್ನು ಬರೆಯುವ ಇವರ, ಅಕ್ಷರ ಅಭಿಮಾನಿಗಳು ಅಸಂಖ್ಯಾತ.

ಹಳ್ಳಿಯಲ್ಲಿ ಕನ್ನಡ ಜಾತ್ರೆ :  ಚಿಕ್ಕ ವಯಸ್ಸಿನಿಂದಲೂ ಇವರು ಕನ್ನಡ ಭಾಷೆ ಹಾಗೂ ಸಾಹಿತ್ಯದ ಕುರಿತಾದ ಒಲವು ಹೊಂದಿದ್ದರಿಂದ ತಮ್ಮದೇ ಸಿರಿ ಸಂಗಮ‌ ಎಂಬ ಸಂಘಟನೆ ಕಟ್ಟಿ ಗಡಿನಾಡಿನಲ್ಲಿ ಭುವನೇಶ್ವರಿ ಜಾತ್ರೆ ಮಾಡಿದವರು. ಹುಟ್ಟೂರಾದ ಖಾನಟ್ಟಿಯಲ್ಲಿ ಪ್ರತಿ ವರ್ಷವೂ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಾ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ಖ್ಯಾತ ಕನ್ನಡ ಸಾಹಿತಿಗಳನ್ನು ತಮ್ಮ ಹಳ್ಳಿಗೆ ಕರೆಸಿ 10 ಸಾವಿರ ರೂ. ನಗದು ಸೇರಿ ಕರುನಾಡ ಸಿರಿ ಪ್ರಶಸ್ತಿ ನೀಡಿ ಗೌರವಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಖ್ಯಾತ ಚಲನಚಿತ್ರ ನಟ, ನಟಿಯರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು, ಹಿರಿಯ ಪತ್ರಕರ್ತರು ಹಾಗೂ ಸಾಮಾಜಿಕ ಹೋರಾಟಗಾರನ್ನು ತಮ್ಮ ಹಳ್ಳಿ ಜನರಿಗೆ ಪರಿಚಯಿಸುವ ಕೆಲಸ ಮಾಡಿದ್ದಾರೆ ಸಾಹಿತಿ ಶಿವಲಿಂಗ.

ಸಣ್ಣ ವಯಸ್ಸಿನಲ್ಲಿ ಸಾಹಿತ್ಯ ಕೃಷಿ : ಹೌದು ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯದ ಆಕರ್ಷಣೆ ಹೊಂದಿದ ಶಿವಲಿಗ ಇಲ್ಲಿಯವರೆಗೆ ಮೂಕ ಹಕ್ಕಿ ಹಾಡಿತು, ಗೂಡು ಬಿಟ್ಟ ಹಕ್ಕಿ, ಗಡಿನಾಡು ಮಲ್ಲಿಗೆ, ಕಲ್ಲಲ್ಲಿ ಅರಳಿದ ಕನ್ನಡ ನಾಡು, ಬೆಳ್ಳಿ ಮೋಡ ನಕೈತಿ, ಹೂ ದುಂಬಿ, ಬಾನಂಗಳದಲ್ಲಿ ಅವಳು ಎಂಬ ಏಳು ಪುಸ್ತಕ ಬರೆದಿದ್ದಾರೆ. ಅಷ್ಟೇ ಅಲ್ಲದೆ ಮೂರು ಕಾದಂಬರಿ, ಒಂದು ನಾಟಕ ಹಾಗೂ ಎರಡು ಕವನ ಸಂಕಲನಗಳು ಬಿಡುಗಡೆ ಸಿದ್ದವಾಗಿವೆ. ಕೇವಲ ಬರವಣಿಗೆ ಮಾತ್ರವಲ್ಲದೆ. ಧ್ವನಿ ಮುದ್ರಿಕೆಗಳನ್ನು ಮಾಡುತ್ತಿರುವ ಇವರ ಹಾರ್ಟ್ ಸಿಗ್ನಲ್ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರೇಮ ಬಾಂಧವ್ಯ, ಮನಸ್ಸೇ ಹುಷಾರ್, ಪ್ರೇಮ ಪ್ರಪಂಚ, ಬೆಳಕು ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಧ್ವನಿ ಮುದ್ರಿಕೆ ಮಾಡಿದ್ದಾರೆ.

ಸಧ್ಯ ಅಗ್ನಿಶಾಮಕ ದಳದಲ್ಲಿ ಪೈರ್ ಮ್ಯಾನ್ ಶಿವಲಿಂಗ : ಇಷ್ಟೆಲ್ಲ ಸಾಹಿತ್ಯ ಕೃಷಿ ಮಾಡಿರುವ ಶಿವಲಿಂಗ ಸರ್ಕಾರಿ ನೌಕರ. ಕೊಡುಗು ಜಿಲ್ಲೆ ಗೋಣಿಕೊಪ್ಪದಲ್ಲಿ ಅಗ್ನಿಶಾಮಕ ದಳದಲ್ಲಿ ಪೈರ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ನಿರಂತರ ಕೆಲಸದ ಮಧ್ಯೆ ಸಿಗುವ ಬಿಡುವಿನ ವೇಳೆಯಲ್ಲಿ ಹಾಡು, ಕಥೆ, ಕವನ ಸಂಕಲನ ಹಾಗೂ ಕಾದಂಬರಿ ಬರೆಯುತ್ತಾರೆ ಶಿವಲಿಂದ ದಾನನ್ನವರ್. ಕಳೆದ ಐದು ವರ್ಷಗಳಿಂದ ಅಗ್ನಿಶಾಮಕ ಇಲಾಖೆಯಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಕನ್ನಡದ ಕೆಲಸ ಮಾಡುತ್ತಿರುವ ವಿಶಿಷ್ಟ ವ್ಯಕ್ತಿ ಇವರು.

ಇಲ್ಲಿಯವರೆಗೆ 200 ಹಾಡು ರಚನೆ : ಇದುವರೆಗೆ ಶಿವಲಿಂಗ ಸುಮಾರು ಇನ್ನೂರು ಹಾಡುಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಪ್ರಮುಖವಾಗಿ. ಭಾವಗೀತೆ,  ಭಕ್ತಿಗೀತೆ, ಜಾನಪದ ಗೀತೆಗಳು, ರೈತ ಗೀತೆಗಳು,ಹಾಳಾಗುತ್ತಿರುವ ನದಿಗಳ ಕುರಿತು ಜಾಗೃತಿ ಹಾಡುಗಳು, ವರದಕ್ಷಿಣೆ, ಕೂರೋನಾ ಜಾಗೃತಿ ಹಾಡುಗಳು, ಹಾಗೇ ಉತ್ತರ ಕರ್ನಾಟಕದಲ್ಲಿ  ಪ್ರವಾಹಕ್ಕೆ ತತ್ತರಿಸಿದ ಜನರ ನೂವಿಗೆ ಹಾಡಿನ ರೋಪ ನೀಡಿದ್ದಾರೆ. 2 ವರ್ಷಗಳ ಹಿಂದೆ ಕಳಸಾ ಬಂಡೂರಿ ಮಹದಾಯಿ ಯೋಜನೆ ಜಾರಿಯ ಕುರಿತು, ರೈತರ ಹೋರಾಟ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ. ಇವರ. ಕಳಸಾ ಬಂಡೂರಿ ಹೋರಾಟ : ವರುಷವಾದ್ರು ಮುಗಿಯದ ತಿಕ್ಕಾಟ ಎಂಬ ಗೀತೆ ರಚಿಸಿ ರೈತರ ಹೃದಯವನ್ನು ಗೆದ್ದಿದ್ದಾರೆ.

ಶಿವಲಿಂಗರನ್ನು ಅರಸಿ ಬಂದ ಪ್ರಶಸ್ತಿಗಳು : ಯುವ ಸಾಹಿತಿ ಶಿವಲಿಂಗ ದಾನನ್ನವರ್ ಅವರನ್ನು ಹುಡುಕಿಕೊಂಡು ಅನೇಕ ಪ್ರಶಸ್ತಿಗಳು ಬಂದಿವೆ. ಪ್ರಶಸ್ತಿ ಪುರಸ್ಕಾರಗಳಿಂದ ಅಂತರ ಕಾಯ್ದುಕೊಂಡಿರುವ ಇವರ ಸರಳತೆ ಮತ್ತಷ್ಟು ವಿಭಿನ್ನ. ‌ಈವರೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ವತಿಯಿಂದ ಸದ್ಭಾವನಾ ಗೌರವ, ಭಾರತೀಯ ಕೃಷಿ ಸಮಾಜ ಕರ್ನಾಟಕ ಘಟಕದಿಂದ ಬಸವಶ್ರೀ ಪುರಸ್ಕಾರ, ಹಾಯ್ ಬೆಂಗಳೂರು ಸಂಪಾದಕರಾಗಿದ್ದ ರವಿ ಬೆಳಗೆರೆ ಅವರಿಂದ ರಾಜ್ಯ ಸಾಹಿತ್ಯ ಯುವ ಪುರಸ್ಕಾರದ ಜಿತೆಗೆ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನ ಹಾಗೂ ವಿವಿಧ ಮಠಗಳಿಂದ ಪುರಸ್ಕಾರ ಪಡೆದುಕೊಂಡಿದ್ದಾರೆ.‌

ಒಟ್ಟಿನಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಗ್ರಾಮೀಣ ಪ್ರತಿಭೆ ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ಸೇವೆ ಸಲ್ಲಿಸುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಯುವ ಸಾಹಿತಿಯ ಕನ್ನಡ ಸೇವೆ ಹೀಗೆ ಮುಂದುವರಿಯಲಿ ಎಂಬುದು ಎಲ್ಲರ ಆಶಯ. ‌

ಚಿಕ್ಕ ವಯಸ್ಸಿನಿಂದಲೂ ಕನ್ನಡದ ಮೇಲೆ ವಿಪರೀತ ವ್ಯಾಮೋಹ. ಕನ್ನಡ ಕಾದಂಬರಿಗಳನ್ನು ಓದುತ್ತಾ ಬೆಳೆದ ನನಗೆ ನಮ್ಮ ತಾಯ್ನಾಡಿಗೆ ಏನಾದರು ಕೊಡುಗೆ ನೀಡಬೇಕು ಎಂಬ ಸಂಕಲ್ಪದೊಂದಿಗೆ ಕನ್ನಡ ಸೇವೆ ಮಾಡುತ್ತಿರುವೆ. ಅಗ್ನಿಶಾಮಕ ದಳದ ಕೆಲಸದ ಜೊತೆ ಜೊತೆಗೆ ಕಥೆ, ಕವನ ಹಾಗೂ ಕಾದಂಬರಿ ಬರೆಯುತ್ತಿರುವೆ.‌ ರೈತ ಗೀತೆ ಹಾಗೂ ಭಾವ ಗೀತೆ ಬರೆಯುತ್ತಾ ಅವರ ಆಕ್ರೋಶ ಹೊರ ಹಾಕುವ ಕೆಲಸ ಮಾಡಿರುವೆ. ಈವರೆಗೆ ಮಾಡಿರುವ ಕೆಲಸ ತೃಪ್ತಿ ತಂದಿದೆ ಆದರೆ ಕನ್ನಡ ಸೇವೆ ಮತ್ತಷ್ಟು ಮಾಡಬೇಕೆಂಬ ಹಂಬಲ ಇದೆ.‌‌

ಶಿವಲಿಂಗ ದಾನನ್ನವರ
ಯುವ ಸಾಹಿತಿ

Advertisement

Leave a reply

Your email address will not be published. Required fields are marked *