
ಸಪ್ತಸಾಗರದಾಚೆ ಗದಗ ಯುವಕನ ಕಮಾಲ್

ಟಾಪ್ 10 ಏಷ್ಯಾ ಯಂಗ್ ಟ್ಯಾಲೆಂಟ್ ಪ್ರಶಸ್ತಿ ಕಿರಣ್ ಮುಡಿಗೆ
ಮಲೇಷಿಯಾ : ಏಷ್ಯಾದ ಯುವ ಪ್ರತಿಭೆಗಳನ್ನು ಹೊರ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ, ಮಾನ್‌ಸ್ಟಾರ್ ಏಷ್ಯಾ ವತಿಯಿಂದ ಟಾಪ್ 10 ಏಷ್ಯಾ ಯಂಗ್ ಟ್ಯಾಲೆಂಟ್ ಪ್ರಶಸ್ತಿ – 2022 ಮತ್ತು ಮ್ಯಾಕ್ಸಿಸ್ ಎಕ್ಸ್‌ಪೀರಿಯನ್ಸ್ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಳ್ಳುವಲ್ಲಿ ಗದಗ ಯುವಕ ಯಶಸ್ವಿಯಾಗಿದ್ದಾನೆ.

ಏಷ್ಯಾದ ವಿವಿಧ ರಂಗಗಳಲ್ಲಿ ಗುರುತಿಸಿಕೊಂಡ ಯುವಕರ ವಿಶಿಷ್ಟ ಪ್ರತಿಭೆಯನ್ನು ಹೊರ ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ, ಮಾನ್‌ಸ್ಟಾರ್ ಏಷ್ಯಾ ವಿಭಿನ್ನ ಕಾರ್ಯಕ್ರಮವನ್ನು ಕಳೆದ ಐದು ವರ್ಷಗಳಿಂದ ಆಯೋಜಿಸುತ್ತಿದೆ. ಇತ್ತೀಚೆಗೆ ಮಲೇಷಿಯಾದ ಕೌಲಾಲಂಪುರದ ಹೃದಯಭಾಗದಲ್ಲಿರುವ ಪಾಂಗ್ಗುಂಗ್ ಬಂಡಾರಾಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಟಾಪ್ 10 ಏಷ್ಯಾ ಯಂಗ್ ಟ್ಯಾಲೆಂಟ್ ಪ್ರಶಸ್ತಿ – 2022 ಪ್ರಶಸ್ತಿಯನ್ನು ಗೆದ್ದ ಮೂಲಕ ಮೊದಲ ಭಾರತೀಯ ಎಂಬ ಹಿರಿಮೆಗೆ ಕಿರಣಕುಮಾರ್ ರೋಣದ್ ಸಾಕ್ಷಿಯಾಗಿದ್ದಾರೆ.

ಗದಗ ಜಿಲ್ಲೆಯ ಅಸಮಾನ್ಯ ಪ್ರತಿಭೆ : ಮೂಲತಃ ಗದಗ ಜೆಲ್ಲೆಯ 24 ವರ್ಷದ ಯುವಕ ಕಿರಣಕುಮಾರ್ ರೋಣದ್ ಪ್ರಸ್ತುತ ಮಲೇಷಿಯಾದ ಕೌಲಾಲಂಪುರ ಯೂನಿವರ್ಸಿಟಿಯಲ್ಲಿ ಡಾಕ್ಟ್ ರೇಟ್ ಪದವಿ ಪಡೆಯುತ್ತಿದ್ದಾರೆ. ವಿಶೇಷ ಪ್ರತಿಭೆ ಹೊಂದಿರುವ ಯುವಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಮೂಲಕ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುತ್ತಿರುವ ಮಾನ್‌ಸ್ಟಾರ್ ಏಷ್ಯಾ ಈ ಬಾರಿ ಕರುನಾಡಿನ ಯುವಕನ ಸಾಧನೆ ಗುರುತಿಸಿ ಪ್ರಶಸ್ತಿ ನೀಡಿದ್ದು ವಿಶೇಷ.
ಪ್ರಶಸ್ತಿ ಮೌಲ್ಯ : ಏಷ್ಯಾದ ಟ್ಯಾಲೆಂಟ್ ಗಳನ್ನು ಗುರುತಿಸುವ ನಿಟ್ಟಿನಲ್ಲಿ ಮಾನಸ್ಟಾರ್ ಅವಾರ್ಡ ನೀಡಿ ಗೌರವಿಸುವ ಈ ವಿಭಿನ್ನ ಕಾರ್ಯಕ್ರಮ ಇದು. ಈ ಪ್ರಶಸ್ತಿ ಗೆದ್ದುಕೊಂಡ ಯುವಕರಿಗೆ ತಮ್ಮ ಭವಿಷ್ಯದ ವೃತ್ತಿ ಬದುಕಿನ ಬೆಳವಣಿಗೆಗೆ ಸಹಕಾರಿಯಾಗಲಿದೆ. ಜೊತೆಗೆ ಹೊರ ಜಗತ್ತಿಗೆ ತಮ್ಮ ಶಕ್ತಿ ಸಾಮರ್ಥ್ಯ ತೋರಿಸಲು ಅವಕಾಶ ಈ ಕಾರ್ಯಕ್ರಮದ ವೇದಿಕೆ ನೀಡುತ್ತಿದೆ.

ಮಲೇಷಿಯಾದ ಖ್ಯಾತನಾಮರು ಈ ಮಾನಸ್ಟಾರ್ ಏಷ್ಯಾದ ನಿರ್ದೇಶಕರ ಮಂಡಳಿಯಲ್ಲಿ ಇದ್ದಾರೆ. ಅದರಂತೆ ಇಲ್ಲಿ ಯಂಗ್ ಟ್ಯಾಲೆಂಟ್ ಪ್ರಶಸ್ತಿ ಪಡೆಯಬೇಕಾದರು ಹಲವಾರು ಸುತ್ತಿನ ಪರೀಕ್ಷೆಗೆ ಒಳಗಾಗಿ ಆಯ್ಕೆ ಸಮೀತಿಯಿಂದ ನಿರ್ದೇಶಿತವಾಗಬೇಕು. ಈ ಬಾರಿ ಏಳಿ ದೇಶಗಳ 26 ವಿಭಾಗಗಳಿಂದ 900 ನಾಮನಿರ್ದೇಶಿತರು ಬಂದಿದ್ದರು. ಇದರಲ್ಲಿ ಹತ್ತು ಯುವ ಪ್ರತಿಭೆಗಳನ್ನು ಗುರುತಿಸಿ ಟಾಪ್ 10 ಏಷ್ಯಾ ಯಂಗ್ ಟ್ಯಾಲೆಂಟ್ ಪ್ರಶಸ್ತಿ – 2022 ನೀಡಿ ಗೌರವಿಸಲಾಗಿದ್ದು, ಇದರಲ್ಲಿ ನಮ್ಮ ಗದಗ ಜಿಲ್ಲೆಯ ಯುವಕ ಕೂಡಾ ಇರುವುದು ಹೆಮ್ಮೆಯ ಸಂಗತಿ.
ವಿನಾಯಕ ಮಠಪತಿ