Video-ವಿಕ್ಟರಿ ಸಿಂಬಲ್ ತೋರಿಸಿದ ಚಾಣಕ್ಯ ಶಾ : ಜಿಲ್ಲಾ ನಾಯಕರ ನಡುವೆ ಸಂಧಾನ ಯಶಸ್ವಿ?
ಬೆಳಗಾವಿ : ಬೆಳಗಾವಿ ಜಿಲ್ಲಾ ನಾಯಕರ ನಡುವಿನ ಗುದ್ದಾಟಕ್ಕೆ ಪೂರ್ಣ ವಿರಾಮ ಹಾಕುವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ಯಶಸ್ವಿಯಾದಂತೆ ಕಾಣುತ್ತಿದ್ದು, ಸಭೆಯಿಂದ ಹೊರನಡೆಯುವ ಸಂದರ್ಭದಲ್ಲಿ ವಿಕ್ಟರಿ ಸಿಂಬಲ್ ತೋರಿಸುವ ಮೂಲಕ ಬೆಳಗಾವಿಯಲ್ಲಿ ಶಾ ರಣತಂತ್ರ ಯಶಸ್ವಿಯಾಯಿತಾ ಎಂಬ ಮಾತು ಕೇಳಿಬಂದಿದೆ.
ಶನಿವಾರ ರಾತ್ರಿ ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಂಘಟನಾತ್ಮಕ ಜಿಲ್ಲೆಗಳ ಮುಖಂಡರ ಸಭೆಯ ಮುಂಚೆ ಆರ್ ಎಸ್ ಎಸ್ ನ ಪ್ರಮುಖರ ಜೊತೆ ಮೂರು ಗಂಟೆಗಳ ವರೆಗೆ ಅಮಿತ್ ಶಾ ಸಭೆ ನಡೆಸಿದರು. ಪ್ರಸ್ತುತ ಬೆಳವಣಿಗೆ ಕುರಿತು ಮಾಹಿತಿ ಪಡೆದ ಅವರು ನಂತರ ಜಿಲ್ಲಾ ಮುಖಂಡರ ಸಭೆಯಲ್ಲಿ ಹಲವು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಮುಂಬರುವ ಚುನಾವಣೆಯಲ್ಲಿ ಒಗ್ಗಟ್ಟಾಗಿ ಪಕ್ಷದ ಗೆಲುವಿಗೆ ಶ್ರಮಿಸಿ. ವೈಯಕ್ತಿಕ ಗುದ್ದಾಟ ಬದಿಗಿಟ್ಟು ಜಿಲ್ಲೆಯಲ್ಲಿ ಹೆಚ್ಚು ಬಿಜೆಪಿ ಶಾಸಕರನ್ನ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲು ಶಾ ಸೂಚಿಸಿದ್ದಾರೆ ಎನ್ನಲಾಗಿದೆ.
ಸಭೆ ನಂತರ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಜಿಲ್ಲಾ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮುಂಬರುವ ಚುನಾವಣೆಯಲ್ಲಿ ಎಲ್ಲರೂ ಇಂದೇ ತಾಯಿ ಮಕ್ಕಳಂತೆ ಕೆಲಸ ಮಾಡಿ ಅಧಿಕ ಕ್ಷೇತ್ರ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ರಾಜ್ಯ ಪ್ರವಾಸ ಕೈಗೊಳ್ಳಲಿದ್ದು ರಾಜ್ಯದ ಎಲ್ಲಾ ನಾಯಕರು ಸೇರಿಕೊಂಡು ಕೆಲಸ ಮಾಡುತ್ತೇವೆ ಎಂದರು.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣಾ ಅಂಗಡಿ, ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಸೇರಿದಂತೆ ಶಾಸಕರು ಹಾಗೂ ಪಕ್ಷದ ಮುಖಂಡರು ಉಪಸ್ಥಿತರಿದ್ದರು.