ಮಹಾನ್ ನಾಯಕನ ಭವಿಷ್ಯ ಅಂತ್ಯಗೊಳಿಸಲು ಚುನಾವಣೆ ಸ್ಪರ್ಧೆ – ಸಾಹುಕಾರ್ ಗುಡುಗು
ಬೆಳಗಾವಿ : ಬರುವ ಚುನಾವಣೆಯಲ್ಲಿ ನನಗೆ ಸ್ಪರ್ಧಿಸುವ ಆಸಕ್ತಿ ಇರಲಿಲ್ಲ.ಆದರೆ ನನ್ನ ವಿರುದ್ಧ ಅಪಪ್ರಚಾರ ಮಾಡಿರುವ ಆ ಮಹಾನ್ ನಾಯಕನ ಮಟ್ಟ ಹಾಕುವ ಸಲುವಾಗಿ ಮುಂದಿನ ಚುನಾವಣೆ ಮಾತ್ರ ಸ್ಫರ್ಧೆ ಮಾಡಲಿದ್ದೆನೆ. ನಂತರ ಕಾರ್ಯಕರ್ತರಿಗೆ ಮತ್ತು ಪಕ್ಷದ ಇನ್ನುಳಿದ ನಾಯಕರಿಗೆ ಅವಕಾಶ ಬಿಟ್ಟುಕೊಡುವದಾಗಿ ರಮೇಶ್ ಜಾರಕಿಹೊಳಿ ಹೇಳಿದರು.
ರವಿವಾರ ಸಂಜೆ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಭಾರತೀಯ ಜನತಾ ಪಾರ್ಟಿಯ ಎರಡು ಜಿಪಂ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಈಗಾಗಲೇ ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ ಬರುವ ಚುನಾವಣೆಯಲ್ಲಿ ಸ್ಪರ್ಧಿಸಿದ ನಂತರ ಚುನಾವಣೆಯಿಂದ ನಿವೃತ್ತಿ ಯಾಗಬೇಕೆಂಬ ವಿಚಾರ ಮಾಡಿರುವೆ.
ಬೆಂಗಳೂರಿನ ಮಹಾನ ನಾಯಕ ಮಾಧ್ಯಮದಲ್ಲಿ ನಮ್ಮ ಬಗ್ಗೆ ಅಪಪ್ರಚಾರ ಮಾಡಿಸುತ್ತ ಬಂದಿದ್ದಾನೆ. ಕಳೆದ ಬಾರಿ ಕಾರ್ಯಕ್ರಮದಲ್ಲಿ ನಾನು ಸಾಂದರ್ಭಿಕವಾಗಿ ಮಾತನಾಡಿದ್ದನ್ನು ಬೇರೆ ಬೇರೆ ರೀತಿಯಲ್ಲಿ ಮಾಧ್ಯಮಗಳಲ್ಲಿ ಬಿತ್ತರಿಸಲಾಗಿದೆ. ಆ ಮಹಾನ್ ನಾಯಕನ ರಾಜಕೀಯ ಭವಿಷ್ಯ ಅಂತ್ಯಗೊಳಿಸಲು ಈ ಚುನಾವಣೆ ಸ್ಪರ್ಧಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೇಸ್ ಪಕ್ಷದ ನಾಯಕರು ಸುಳ್ಳು ಆಮಿಷಗಳನ್ನು ಒಡ್ಡಿ ಜನರನ್ನು ದಾರಿ ತಪ್ಪಿಸುವ ಕೆಲಸಮಾಡುತ್ತಿದ್ದು, ಅವರ ಆಮಿಷಗಳಿಗೆ ಒಳಗಾಗದಿರಿ. ನಾನು ಕಾಂಗ್ರೇಸ್ ಪಕ್ಷದಲ್ಲಿ ೧೭ವರ್ಷ ಶಾಸಕನಾಗಿದ್ದೆ. ಆದರೆ ಬಿಜೆಪಿಗೆ ಬಂದ ಮೂರು ವರ್ಷದಲ್ಲಿ ಪಕ್ಷದ ಶಿಸ್ತಿನ ಕಾರ್ಯಕರ್ತನಾಗಿ ಕೇಲಸ ಮಾಡುತ್ತಿದ್ದೆನೆ. ೧೭ವರ್ಷ ಸಿಗದ ಪ್ರೀತಿ ಬಿಜೆಪಿಯಲ್ಲಿ ಸಿಕ್ಕಿದೆ. ಬಿಜೆಪಿ ಪಕ್ಷ ಸ್ವಲ್ಪ ವಿಳಂಭವಾದರು ನೀಡಿದ ಭರವಸೆ ಈಡೇರಿಸುತ್ತೆ ಎಂದರು.