
BREAKING : ರಾಜಾಹುಲಿ ಬಿ.ಎಸ್ ಯಡಿಯೂರಪ್ಪ ಮಹತ್ವದ ನಿರ್ಧಾರ ಘೋಷಣೆ

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಹತ್ವದ ನಿರ್ಧಾರ ಘೋಷಣೆ ಮಾಡಿದ್ದು, 2023 ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.

ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಾಹುಲಿ. ಬರುವ ಚುನಾವಣೆ ರಣತಂತ್ರ ಹೆಣೆದಿದ್ದು ಪುತ್ರ ವಿಜಯೇಂದ್ರ ಅವರಿಗೆ ಅವರು ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರ ಬಿಟ್ಟು ಕೊಡುವ ತೀರ್ಮಾನ ಘೋಷಣೆ ಮಾಡಿದ್ದಾರೆ.
ಇನ್ನೂ ಯಡಿಯೂರಪ್ಪನವರ ಈ ನಿರ್ಧಾರ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸುತ್ತಿದೆ. ಪದೇ ಪದೇ ಬಿಜೆಪಿ ಹೈಕಮಾಂಡ್ ವರಿಷ್ಠರು ವಿಜಯೇಂದ್ರ ಅವರಿಗೆ ಟಿಕೆಟ್ ನಿರಾಕರಣೆ ಮಾಡುತ್ತಾ ಬಂದಿತ್ತು. ಸಧ್ಯ ಯಡಿಯೂರಪ್ಪನವರ ಈ ನಿರ್ಧಾರವನ್ನು ಯಾವ ರೀತಿಯಲ್ಲಿ ಅರಗಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿಜಯೇಂದ್ರ ಅವರನ್ನು ಮೈಸೂರಿನಿಂದ ಕಣಕ್ಕೆ ಇಳಿಸಬೇಕೆಂಬ ಲೆಕ್ಕಾಚಾರ ಕೈಗೊಡಲಿಲ. ನಂತರ ಉಪ ಚುನಾವಣೆ ಹಾಗೂ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ಪ್ರಯತ್ನ ಯಡಿಯೂರಪ್ಪ ಮಾಡಿದ್ದರು ಸಾಧ್ಯವಸಗಿರಲಿಲ್ಲ. ಆದರೆ ಇವತ್ತು ರಾಜಾಹುಲಿ ಬಹಿರಂಗವಸಗಿ ಪುತ್ರನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಘೋಷಣೆ ಮಾಡಿರುವ ಹಿಂದೆ ಅನೇಕ ರಾಜಕೀಯ ನಡೆಗಳು ಇರುವುದು ಸ್ಪಷ್ಟ.
ಕಳೆದ ನಾಲ್ಕು ದಶಕಗಳ ಸುಧೀರ್ಘ ರಾಜಕೀಯ ಜೀವನದಲ್ಲಿರುವ ಬಿ.ಎಸ್ ಯಡಿಯೂರಪ್ಪ ಅವರು ಬಿಜೆಪಿ ಪಕ್ಷ ಕಟ್ಟಿದಾಗಿನಿಂದ ಹಿಡಿದು ನಂತರ ಅಧಿಕಾರಕ್ಕೆ ತರುವ ಮಟ್ಟಿಗೆ ಬೆಳೆಸಿದ್ದರು. ಪ್ರಸ್ತುತ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಇವರನ್ನು ವಯಸ್ಸಿನ ಕಾರಣ ನೀಡಿ ಬಿಜೆಪಿ ಹೈಕಮಾಂಡ್ ಕೆಳಗಿಳಿಸಿ ಆ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಅವರನ್ನು ನೇಮಕ ಮಾಡಿತ್ತು.
ಈಗಾಗಲೇ ಯಡಿಯೂರಪ್ಪನವರ ಒಬ್ಬ ಪುತ್ರ ಬಿ.ವೈ ರಾಘವೇಂದ್ರ ಶಿವಮೊಗ್ಗ ಜಿಲ್ಲೆಯ ಸಂಸದರಾಗಿದ್ದು. ಇನ್ನೊಬ್ಬ ಪುತ್ರ ವಿಜಯೇಂದ್ರ ಬಿಜೆಪಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಿಂಗಾಯತ ನಾಯಕ ಎಂದೇ ಖ್ಯಾತಿ ಹೊಂದಿರುವ ಯಡಿಯೂರಪ್ಪ ನಂತರದ ಸ್ಥಾನವನ್ನು ಅವರ ಪುತ್ರ ವಿಜಯೇಂದ್ರ ತುಂಬುವ ಲಕ್ಷಣದ ಹಿನ್ನಲೆಯಲ್ಲಿ ಇಂದು ತಾವು ಪ್ರತಿನಿಧಿಸುವ ಶಿಕಾರಿಪುರ ಕ್ಷೇತ್ರವನ್ನು ಪುತ್ರನಿಗೆ ತ್ಯಾಗ ಮಾಡಿದ್ದಾರೆ.
ಒಟ್ಟಿನಲ್ಲಿ ಚುನಾವಣೆ ರಾಜಕಾರಣದಿಂದ ಯಡಿಯೂರಪ್ಪ ಹಿಂದೆ ಸರಿಯುವುದಾಗಿ ಘೋಷಣೆ ಮಾಡಿದ್ದರು ಸಹಿತ ಅವರ ಪ್ರಭಾವ ಹಾಗೂ ಪಕ್ಷದ ಮೇಲಿನ ಹಿಡಿತ ಅಷ್ಟಾಗಿ ಕಡಿಮೆಯಾಗಲ್ಲ ಎಂಬುದು ಸ್ಪಷ್ಟ.