Select Page

ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿದ ಹೆಬ್ಬಾಳ್ಕರ್ – ಗೋಕಾಕ್ ಕುರಿತು ಹೇಳಿದ್ದೇನು?

ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿದ ಹೆಬ್ಬಾಳ್ಕರ್ – ಗೋಕಾಕ್ ಕುರಿತು ಹೇಳಿದ್ದೇನು?

ಬೆಳಗಾವಿ: ಕ್ಷೇತ್ರದ ಅಭಿವೃದ್ಧಿ ಆದರೂ ಕೆಲವರಿಗೆ ಸಹಿಸಲು ಆಗುತ್ತಿಲ್ಲ. ಸ್ವಯಂ ಘೋಷಿತ ನಾಯಕ ಗೋಕಾಕ ಶಾಸಕರು ತಮ್ಮಲ್ಲಿರುವ ಸಂಕುಚಿತ ಭಾವನೆ ಬಿಂಬಿಸುತ್ತಿದ್ದಾರೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಾಗ್ದಾಳಿ ನಡೆಸಿದರು.

ತಾಲೂಕಿನ ಪಂತಬಾಳೇಕುಂದ್ರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ಚುನಾವಣೆ ಎರಡು ತಿಂಗಳ ಇದ್ದಾಗ ನಮ್ಮ ಕ್ಷೇತ್ರಕ್ಕೆ ಬಂದಿದ್ದೀರಿ. ಕೋವಿಡ್, ಪ್ರವಾಹ ಇದ್ದಾಗ ಎಲ್ಲಿ ಹೋಗಿದ್ರಿ..? ಎಂದು ರಮೇಶ ಜಾರಕಿಹೊಳಿ ಅವರನ್ನು ಪ್ರಶ್ನಿಸಿದರು.

ರಮೇಶ ಜಾರಕಿಹೊಳಿ ಅವರು 23 ವರ್ಷ ಶಾಸಕರಾಗಿ ಕೆಲಸ ಮಾಡಿದ್ದಾರೆ. ಅವರಿಗೆ 16 ವರ್ಷ ಅವರದ್ದೆ ಸರಕಾರಗಳು ಸಿಕ್ಕಿವೆ. ಆದಾಗ್ಯೂ  ಏನನ್ನೂ ಅಭಿವೃದ್ಧಿ ಮಾಡದವರು ಕೇವಲ 4 ವರ್ಷದ ಶಾಸಕನಾದ ನನಗೆ ಹೇಳುತ್ತಿದ್ದಾರೆ ಎಂದರು.

ಗೋಕಾಕ್ ನಲ್ಲಿ ಪೊಲೀಸ್ ಠಾಣೆ, ತಹಸೀಲ್ದಾರ ಕಚೇರಿ, ಸಬ್ ರಜಿಸ್ಟ್ರಾರ್ ಕಚೇರಿ ಹೇಗೆ ಕೆಲಸ ಮಾಡುತ್ತಿದೆ? ಎಂದು ಪ್ರಶ್ನಿಸಿದ ಲಕ್ಷ್ಮೀ ಹೆಬ್ಬಾಳಕರ, ಗೋಕಾಕದಲ್ಲಿ ಒಂದು ಎಕರೆ ಜಮೀನು ಖರೀದಿಗೆ ಅಥವಾ ಮಾರಾಟಕ್ೆ 10 ಲಕ್ಷ ಕೊಡಬೇಕು. ರಮೇಶ ಜಾರಕಿಹೊಳಿ ಅವರ ಕ್ಷೇತ್ರ ರಿಪಬ್ಲಿಕ್ ಆಫ್ ಗೋಕಾಕ್ ಆಗಿದೆ ಎಂದು ತಿವಿದರು.

ಕಾಂಗ್ರೆಸ್ ನಲ್ಲಿದ್ದ ರಮೇಶ ಜಾರಕಿಹೊಳಿ ಅವರು ನೂರಾರು ಕೋಟಿಗೆ ತಮ್ಮನ್ನು ತಾವೇ ಮಾರಿಕೊಂಡು ನನಗೆ ಭ್ರಷ್ಟಾಚಾರದ ಪಾಠ ಹೇಳಲು ಬಂದಿದ್ದಾರೆ.
ಮಾನ್ಯ ಗೋಕಾಕ್ ಕ್ಷೇತ್ರದ ಶಾಸಕರೇ ಭ್ರಷ್ಟಾಚಾರ ಒಂದು ಕಡೆ ಇರಲಿ. ಕ್ಷೇತ್ರದ ಜನರ ಕಬ್ಬಿನ ಬಿಲ್ ಕೊಟ್ಟು ಮಾತನಾಡಿ. ನಂದಿಹಳ್ಳಿಯಲ್ಲಿ ನಿಮ್ಮ ಹೆಸರು ಬರದಿಟ್ಟು ಓರ್ವ ರೈತ ಆತ್ಮಹತ್ಯೆ ಮಾಡಿಕೊಂಡ. ಅದೂ ರಾಹುಲ್ ಗಾಂಧಿಯವರು ಬಂದ ದಿನವೇ ಆತ್ಮಹತ್ಯೆ ಆಗಿದೆ. ನಮ್ಮ ಕ್ಷೇತ್ರದ ಜನರ ಬಾಕಿ ಹಣ ಕೊಟ್ಟು ಮಾತನಾಡಿ” ಎಂದು ಸವಾಲೆಸೆದರು.

ಸ್ವಯಂ ಘೋಷಿತ ನಾಯಕರಿಗೆ ಪ್ರಶ್ನೆ ಮಾಡುತ್ತೇನೆ. ಅವರು ನಾಗೇಶ ಮನ್ನೊಳ್ಕರ್ ಅವರನ್ನು ಕರೆದುಕೊಂಡು ಓಡಾಡುತ್ತಿದ್ದಾರೆ. ನಾಗೇಶ ಮನ್ನೋಳಕರ್ ಹಿಂದಿನ ಚುನಾವಣೆ ರಾತ್ರಿ ನಮ್ಮ ಮನೆಗೆ ಬಂದಿದ್ದರು. 40 ಲಕ್ಷ ಕೊಟ್ಟರೆ ನಿಮ್ಮ ಕಾಂಗ್ರೆಸ್ ಸೇರುತ್ತೇನೆ ಎಂದಿದ್ದರು. ಈ ಬಗ್ಗೆ ಮಳೆಕರಣಿ ದೇವಿಯ ಎದುರು ಶಪಥ ಮಾಡಲು ನಾನು ಸಿದ್ಧವಿದ್ದೇನೆ ಎಂದು ಹೆಬ್ಬಾಳಕರ್ ಹೇಳಿದರು.
ವೀರಕುಮಾರ, ವಿವೇಕರಾವ್ ಪಾಟೀಲ, ಮಹಾಂತೇಶ ಕವಟಗಿಮಠ ಅವರನ್ನು ಮನೆಗೆ ಕಳಿಸಿದ್ದು ರಮೇಶ ಜಾರಕಿಹೊಳಿ. ನಾನೊಬ್ಬ ಹೇಗೋ ಬಚಾವಾಗಿದ್ದೇನೆ. ನನಗೆ ಸತೀಶ್ ಜಾರಕಿಹೊಳಿ ಸಾಕಷ್ಟು ಬಾರಿ ಎಚ್ಚರಿಸಿದ್ದರು. ರಮೇಶ ಜಾರಕಿಹೊಳಿಗೆ ಎಲ್ಲರನ್ನೂ ಮನೆಗೆ ಕಳಿಸುವವರೆಗೆ ಒಟ್ಟು ಸಮಾಧಾನ ಇಲ್ಲ ಎಂದರು.

ರಾಜಹಂಸಗಡದಲ್ಲಿ ನಾನು ನಿರ್ಮಾಣ ಮಾಡಿರುವ ಮೂರ್ತಿ ಉದ್ಘಾಟನೆ ಮಾಡಲು ಹೊರಟ್ಟಿದ್ದೀರಿ. ಮಾಜಿ ಶಾಸಕ ಸಂಜಯ ಪಾಟೀಲ್ ಗೆ, ನಿಮಗೆ ಏನು ಹಕ್ಕಿದೆ. ಅಲ್ಲಿನ ಮಣ್ಣನ್ನು ಮಾರಾಟ ಮಾಡಿ ದುಡ್ಡು ಮಾಡಿದ್ದೀರಿ. 10 ವರ್ಷ ಅವಧಿಯಲ್ಲಿ ಸಂಜಯ ಪಾಟೀಲ್ ಕ್ಷೇತ್ರಕ್ಕೆ ತಂದ ಅನುದಾನ ಕೇವಲ 20 ಕೋಟಿ. ನಿಮ್ಮ ಶಾಸಕ ನಿಧಿಯಿಂದ ಪುತ್ಥಳಿ ನಿರ್ಮಾಣ ಮಾಡಲು ಏಕೆ ಸಾಧ್ಯವಾಗಲಿಲ್ಲ? ಗೋಮಟೇಶ ವಿದ್ಯಾಪೀಠಕ್ಕೆ ಅಕ್ರಮವಾಗಿ 40 ಲಕ್ಷ ಹಣ ತಗೊಂಡು ಹೋದರು. ಶಿಕ್ಷಣ ಸಂಸ್ಥೆ ದಕ್ಷಿಣ ಕ್ಷೇತ್ರದಲ್ಲಿ ಇದ್ದರೂ ಅಕ್ರಮವಾಗಿ ಹಣ ತೆಗೆದುಕೊಂಡು ಹೋದರು. ಗ್ರಾಮೀಣ ಕ್ಷೇತ್ರದಲ್ಲಿ ಏನೇನೂ ಮಾಡಲಿಲ್ಲ ಎಂದು ಸಂಜಯ ಪಾಟೀಲ ಅವರ ವಿರುದ್ಧ ವಾಗ್ಮಳೆ ಸುರಿಸಿದರು.

ರಾಜಹಂಸಗಡ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಂಜಯ ಪಾಟೀಲ ಶಿವಾಜಿ ಪುತ್ಥಳಿಗೆ ನನ್ನ ಬಳಿ ಹಣ ಕೇಳಿದ್ದ ಎನ್ನುವುದು ಸುಳ್ಳು. ಕೇಳಿದ್ದರೆ ನೂರಕ್ಕೆ ನೂರರಷ್ಟು ಕೊಡುತ್ತಿದ್ದೆ. ಆತನ ಮುಖವನ್ನೇ ನಾನು ಇನ್ನೂ ನೋಡಿಲ್ಲ. ಈಗ ಲಕ್ಷ್ಮೀ ಹೆಬ್ಬಾಳಕರ್ ಅಭಿವೃದ್ಧಿಪಡಿಸಿರುವ ರಾಜಹಂಸಗಡವನ್ನು ಉದ್ಘಾಟಿಸಲು ಇವರಿಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.

Advertisement

Leave a reply

Your email address will not be published. Required fields are marked *

error: Content is protected !!