
ಜಗದ್ಗುರು ರೇಣುಕರು ಲೋಕಮಾನ್ಯರು : ಪ್ರೊ. ಗಿರೀಶ್ ಚಂದ್ರ

ಬೆಳಗಾವಿ : ಶ್ರೀ ಜಗದ್ಗುರು ರೇಣುಕಾಚಾರ್ಯರು ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಅಗಸ್ತ್ಯ ಮಹರ್ಷಿಗೆ ಬೋಧಿಸುವುದರೊಂದಿಗೆ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಬೆಂಗಳೂರಿನ ಉಪಕುಲಪತಿ ಪ್ರೊ. ಗಿರೀಶ್ ಚಂದ್ರ ಹೇಳಿದರು.
ಬುಧವಾರ ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಐದು ದಿನಗಳ ಕಾಲ ನಡೆಯುವ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಮಹೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬ ತತ್ವವನ್ನು ಇಡೀ ಲೋಕಕ್ಕೆ ಬಿತ್ತಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಲೋಕಮಾನ್ಯರು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹುಕ್ಕೇರಿ ಔಜಿಕರ ಜ್ಞಾನ ಯೋಗಾಶ್ರಮದ ಶ್ರೀ ಅಭಿನವ ಮಂಜುನಾಥ ಮಹಾರಾಜರು ಮಾತನಾಡಿ, ನಾವು ಎಲ್ಲರೂ ಗಣೇಶ ಉತ್ಸವ ನೋಡುತ್ತೇವೆ. ಆದರೆ, ಬೆಳಗಾವಿ ಹುಕ್ಕೇರಿ ಹಿರೇಮಠದಲ್ಲಿ ಕಳೆದ ವರ್ಷದಿಂದ ಐದು ದಿನ ಜಗದ್ಗುರು ರೇಣುಕಾಚಾರ್ಯರ ಉತ್ಸವವನ್ನು ವೈಶಿಷ್ಟ್ಯ ಪೂರ್ಣವಾಗಿ ಮಾಡುತ್ತಿರುವುದು ರೇಣುಕಾಚಾರ್ಯರ ಭಕ್ತರಿಗೆ ಸಂತಸ ತಂದಿದೆ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಉಪ ಹಣಕಾಸು ಅಧಿಕಾರಿ, ಸಹಾಯಕ ಕುಲಸಚಿವ ವಿದ್ವಾನ್ ಎಂ. ಶಿವಮೂರ್ತಿ ಮಾತನಾಡಿ, ಹುಕ್ಕೇರಿ ಶ್ರೀಗಳು ನಾವು ಮೈಸೂರಿನಲ್ಲಿ ಒಟ್ಟಿಗೆ ಅಧ್ಯಯನ ಮಾಡಿದ್ದೇವೆ. ಇವತ್ತು ಅವರು ಶ್ರೀ ಜಗದ್ಗುರು ರೇಣುಕಾಚಾರ್ಯರು ಬಗ್ಗೆ ಇರುವ ಅಭಿಮಾನ ನಮಗೆಲ್ಲ ಆದರ್ಶ ಎಂದರು.
ಸಾನಿದ್ಯ ವಹಿಸಿ ಮಾತನಾಡಿದ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಐದು ದಿನ ಜರುಗುವ ರೇಣುಕಾಚಾರ್ಯ ಜಯಂತಿ ಉತ್ಸವವು ಶ್ರೀಮದ್ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯರ ಆಜ್ಞಾನುಸಾರ ನಡೆಯುತ್ತಿದೆ ಎಂದರು.
ಹುಕ್ಕೇರಿ ಗುರುಕುಲದ ಮುಖ್ಯಸ್ಥ ವಿದ್ವಾನ್ ಸಂಪತಕುಮಾರ ಶಾಸ್ತ್ರೀಗಳು ಹಾಗೂ ಯಡಿಯೂರಿನ ಸಿದ್ಧಲಿಂಗ ಶಿವಾಚಾರ್ಯ ವೈದಿಕ ಸಂಸ್ಕೃತ ಪಾಠ ಶಾಲೆಯ ವಿದ್ವಾನ್ ಬಸವರಾಜ ಶಾಸ್ತ್ರೀಗಳು ವಿಶೇಷವಾದ ಪೂಜಾ ಕೈಂಕರ್ಯವನ್ನು ನೆರವೆರಿಸಿದರು.
ಈ ಸಂದರ್ಭದಲ್ಲಿ ಯಡಿಯೂರಿನ ಮತ್ತು ಹುಕ್ಕೇರಿಯ 108 ವಿದ್ವಾಂಸರಿಂದ ವಿಶೇಷವಾದ ಪೂಜೆ ಜರುಗಿತು.