ರಾಯಬಾಗ ಬಿಜೆಪಿಗೆ ಸಿದ್ಧಾರ್ಥ ವಾಡೆನ್ನವರ ಹೆಸರು ಪ್ರಸ್ತಾಪ
ಬೆಳಗಾವಿ : ಎಸ್ಸಿ ಮೀಸಲು ಕ್ಷೇತ್ರವಾದ ರಾಯಬಾಗ ಮತಕ್ಷೇತ್ರದಲ್ಲಿ ಕಳೆದ ಮೂರು ಬಾರಿ ಬಿಜೆಪಿಯ ದುರ್ಯೋಧನ ಐಹೊಳೆ ಆಯ್ಕೆಯಾಗುವ ಮೂಲಕ ನಾಲ್ಕನೇ ಬಾರಿ ಸ್ಪರ್ಧೆಗೆ ತಯಾರಿ ನಡೆಸಿದ್ದಾರೆ. ಈ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಅಚ್ಚರಿ ಹೆಸರು ಪ್ರಸ್ತಾಪವಾಗಿದ್ದು ಎಲ್ಲೆಡೆ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಲೇಖಕ, ಅಂಕಣಕಾರ, ಸಮಾಜಸೇವಕ ಸಿದ್ಧಾರ್ಥ ವಾಡೆನ್ನವರ್ ಹೆಸರು ರಾಯಬಾಗ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದ್ದು, ಪಕ್ಷ ಈ ಬಾರಿ ಹೊಸಬರಿಗೆ ಮಣೆ ಹಾಕುವುದಾ ಎಂಬ ಚರ್ಚೆ ಮೂಡಿದೆ. ಗುಜರಾತ್ ಮಾದರಿಯಲ್ಲಿ ಟಿಕೆಟ್ ಹಂಚಿಕೆ ಲೆಕ್ಕಾಚಾರದಲ್ಲಿರುವ ಬಿಜೆಪಿಗೆ ಸ್ಥಳೀಯ ಮಟ್ಟದಲ್ಲಿ ಉತ್ತಮ ವಾತಾವರಣ ಹೊಂದಿರುವ ವ್ಯಕ್ತಿ ಹಾಗೂ ಗೆಲ್ಲುವ ಅಭ್ಯರ್ಥಿ ಆಯ್ಕೆಯತ್ತ ಹೆಚ್ಚು ಗಮನ ಹರಿಸಿದೆ ಎಂದು ಹೇಳಲಾಗುತ್ತದೆ.
ಸಿದ್ಧಾರ್ಥ್ ಬೆನ್ನಿಗೆ ಯುವ ಒಡೆ : ತಮ್ಮ ಬರಹಗಳ ಮೂಲಕ ಓದುಗರ ದೊಡ್ಡ ಬಳಗ ಹೊಂದಿರುವ ಸಿದ್ಧಾರ್ಥ ವಾಡೆನ್ನವರ್ ಅನೇಕ ಸಾಮಾಜಿಕ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಳೆದ ಮೂರು ಬಾರಿಗೆ ಶಾಸಕರಾಗಿರುವ ದುರ್ಯೋಧನ ಐಹೊಳೆ ಬದಲಿಗೆ ಪಕ್ಷ ಯುವಕರಿಗೆ ಮಣೆ ಹಾಕುವ ಉದ್ದೇಶದಿಂದ ಸಿದ್ದಾರ್ಥ ವರಿಗೆ ಟಿಕೆಟ್ ನೀಡಿದರು ಅಚ್ಚರಿ ಇಲ್ಲ.
ಬೆಂಗಳೂರು ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ಸಿದ್ಧಾರ್ಥ ಹೆಸರು ಪ್ರಸ್ತಾಪ : ಶನಿವಾರ ಬೆಂಗಳೂರಿನಲ್ಲಿ ನಡೆದ ರಾಜ್ಯ ಬಿಜೆಪಿ ಕೋರ್ ಕಮೀಟಿ ಸಭೆಯಲ್ಲಿ ರಾಯಬಾಗ ಮತಕ್ಷೇತ್ರಕ್ಕೆ ಸಿದ್ದಾರ್ಥ ವಾಡೆನ್ನವರ ಹೆಸರು ಬಲವಾಗಿ ಕೇಳಿ ಬಂದಿದ್ದು ಇವರ ಹೆಸರನ್ನು ಹೈಕಮಾಂಡ್ ಗೆ ಕಳುಹಿಸುವ ನಿರ್ಧಾರಕ್ಕೂ ಪಕ್ಷ ಬಂದಿದೆ ಎಂದು ಹೇಳಲಾಗುತ್ತಿದೆ.