ಅದ್ಧೂರಿಯಾಗಿ ರಾಯಣ್ಣ ಜಯಂತಿ ಆಚರಣೆ : ಗಮನಸೆಳೆದ ಯುವಕರ ಟ್ರ್ಯಾಕ್ಟರ್ ರ್ಯಾಲಿ
ರಾಯಬಾಗ : ಬ್ರಿಟಿಷ್ ಸಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 224 ನೇ ಜಯಂತೋತ್ಸವದ ಅದ್ಧೂರಿ ಕಾರ್ಯಕ್ರಮವನ್ನು ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
75 ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನವರ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ಬೃಹತ್ ರ್ಯಾಲಿಯನ್ನು ರಾಯಣ್ಣ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಉದ್ಘಾಟಿಸಿದರು. ಸಾವಿರಾರು ಯುವಕರು ರಾಯಣ್ಣ ಜಯಘೋಷದೊಂದಿದೆ ಬೈಕ್ ಹಾಗೂ ಟ್ರ್ಯಾಕ್ಟರ್ ರ್ಯಾಲಿ ಮೂಲಕ ಪಟ್ಟಣದ ವಿವಿಧ ಬೀದಿಗಳ ಮೂಲಕ ಸಂಚರಿಸಿತು.
ಈ ಸಂದರ್ಭದಲ್ಲಿ ಮುಖಂಡರಾದ ಸಿದ್ರಾಮ ಶೇಗುಣಶಿ, ಸಂತೋಷ್ ಅರಭಾವಿ, ಹಾಲಪ್ಪ ಶೇಗುಣಶಿ, ಗೋಪಾಲ ತೇರದಾಳ, ಭೀಮಪ್ಪ ಬನಶಂಕರಿ ಹಾಗೂ ಶಿವು ಗೋಕಾಕ್, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮ ಆಯೋಜಕ ಹಾಗೂ ಯುವ ಮುಖಂಡ ಸಂತೋಷ ಅರಭಾವಿ ಮಾತನಾಡುತ್ತಾ. ಇಂದಿನ ಯುವಕರಲ್ಲಿ ಕ್ರಾಂತಿಕಾರಿಗಳ ಹೋರಾಟ ಹಾಗೂ ದೇಶಭಕ್ತಿ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು. ಲಕ್ಷಾಂತರ ಯುವಕರ ತ್ಯಾಗ ಬಲಿದಾನದ ಪ್ರತೀಕವಾಗಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದನ್ನು ನಾವು ಯಾವತ್ತೂ ಮರೆಯಬಾರದು. ಜೊತೆಗೆ ಸ್ವಾತಂತ್ರ್ಯ ಹೋರಾಟಗಾರ ರಾಯಣ್ಣ ಹುಟ್ಟಿದ ದಿನವೇ ನಮಗೆ ಸ್ವಾತಂತ್ರ್ಯ ಲಭಿಸಿದ್ದು, ಅವರು ದೇಹತ್ಯಾಗ ಮಾಡಿದ್ದ ದಿನಾಂಕ ನಮ್ಮ ದೇಶದ ಸಂವಿಧಾನ ಅಸ್ತಿತ್ವಕ್ಕೆ ಬಂದಿದ್ದು ದೇಶದ ಪುಣ್ಯ ಎಂದು ಸ್ಮರಿಸಿದರು.
ಸ್ವಾತಂತ್ರ್ಯ ಹೋರಾಟಗಾರರನ್ನು ಒಂದು ಜಾತಿಗೆ ಸೀಮಿತ ಮಾಡಿರುವುದು ದುರಾದೃಷ್ಟ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರಿಗೆ ಯಾವುದೇ ಜಾತಿ ಭೇದವಿಲ್ಲ, ಇವರ ಬದುಕಿನ್ನು ಪ್ರತಿಯೊಬ್ಬ ಭಾರತೀಯ ಅನುಸರಿಸಿ ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ. ಪ್ರಸ್ತುತ ಭಾರತ ಜಗತ್ತಿಗೆ ವಿಶ್ವಗುರುವಾಗಿ ಬೆಳೆಯುತ್ತಿದೆ. ದೇಶಕ್ಕಾಗಿ ನಮಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ದೇಶಕ್ಕಾಗಿ ಕೊಟ್ಟಿದ್ದು ಏನು ಎಂಬ ಪ್ರಶ್ನೆ ಹಾಕಿಕೊಳ್ಳಬೇಕು ಎಂದರು.
ಮುಗಳಖೋಡ ಪಟ್ಟಣದ ದ್ವಾರದಿಂದ ಟ್ಯಾಕ್ಟರ್ ಹಾಗೂ ಬೈಕ್ ಜಾತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸಕಲವಾದ್ಯ ಮೇಳಗಳು ಹಾಗೂ ಡಿಜೆ ಸಾಂಗ್ ನೊಂದಿಗೆ ಸಾಗಿದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಾ ಶ್ರೀ ಗಜಾನನ ದೇವಸ್ಥಾನವನ್ನು ತಲುಪಿದ ಬಳಿಕ ವೇದಿಕೆ ಕಾರ್ಯಕ್ರಮದೊಂದಿಗೆ ಸಮಾರೋಪಗೊಂಡಿತು. ಈ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ಪರಸ್ಪರ ಭಂಡಾರ ಎರಚುತ್ತ, ಸಿಡಿಮದ್ದು ಸಿಡಿಸಿ ನೃತ್ಯ ಮಾಡುವ ಮೂಲಕ ಕುಣಿದು ಕುಪ್ಪಳಿಸಿದರು.
ಈ ಸಂದರ್ಭದಲ್ಲಿ ಪಿಎಸ್ಐ ಖೋತ್, ಪೊಲೀಸ್ ಸಿಬ್ಬಂದಿ ಆರ್ ಎಸ್ ಲೋಹಾರ, ಪಟ್ಟಣದ ಪ್ರಮುಖರು, ಪುರಸಭೆ ಸದಸ್ಯರು ಹಾಗೂ ಮುಗಳಖೋಡ ಪಟ್ಟಣದ ನಾಗರಿಕರು ಹಾಗೂ ಸುತ್ತಲಿನ ಗ್ರಾಮದ ರಾಯಣ್ಣ ಅಭಿಮಾನಿಗಳು ಹಾಜರಾಗಿದ್ದರು.