ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಬೃಹತ್ ಟ್ರಾಕ್ಟರ್ ರ‍್ಯಾಲಿ
ಅರಭಾವಿ ಕ್ಷೇತ್ರದಲ್ಲಿ ಮೂರನೇ ಬಾರಿ ಮೊಳಗಿದ ಮೇರಾ ಭಾರತ ಮಹಾನ್
ಗೋಕಾಕ : ನಾಳೆ ನಡೆಯಲಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ಯ ಅರಭಾವಿ ಬಿಜೆಪಿ ಮಂಡಲದಿಂದ ಬೃಹತ್ ಟ್ರ್ಯಾಕ್ಟರ್ ರ‍್ಯಾಲಿಯನ್ನು ರವಿವಾರದಂದು ಇಲ್ಲಿಯ ಎನ್‌ಎಸ್‌ಎಫ್‌ದಲ್ಲಿ ಚಾಲನೆ ನೀಡಲಾಯಿತು. ಯುವ ಧುರೀಣ ಸರ್ವೋತ್ತಮ ಭೀಮಶಿ ಜಾರಕಿಹೊಳಿ ಅವರು ಈ ರ‍್ಯಾಲಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಅರಭಾವಿ ಶಾಸಕ ಹಾಗೂ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಈ ಟ್ರಾಕ್ಟರ್ ರ‍್ಯಾಲಿಯಲ್ಲಿ ನೂರಾರು ರೈತರು ಭಾಗಿಯಾಗಿದ್ದರು. 257 ಟ್ರ್ಯಾಕ್ಟರ್ ರ‍್ಯಾಲಿಗೆ ಎನ್‌ಎಸ್‌ಎಫ್‌ದಲ್ಲಿ ಚಾಲನೆ ನೀಡಿದ್ದು, ಗೋಕಾಕದಿಂದ ಲೋಳಸೂರ, ಅರಭಾವಿ, ದುರದುಂಡಿ, ಬಡಿಗವಾಡ, ಗಣೇಶವಾಡಿ, ದಂಡಾಪೂರ ಕ್ರಾಸ್, ರಾಜಾಪೂರ, ತುಕ್ಕಾನಟ್ಟಿ ಮಾರ್ಗವಾಗಿ ನಾಗನೂರ ಪಟ್ಟಣದ ಮಹಾಲಿಂಗೇಶ್ವರ ಮಠದಲ್ಲಿ ಸಮಾರೋಪಗೊಂಡಿತು.
ಸರ್ವೋತ್ತಮ ಜಾರಕಿಹೊಳಿ ಅವರು ಈ ಸಂದರ್ಭದಲ್ಲಿ ಮಾತನಾಡಿ, 75ನೇ ಸ್ವಾತಂತ್ರ್ಯ ಉತ್ಸವವನ್ನು ನಾವೆಲ್ಲರೂ ಅದ್ದೂರಿಯಿಂದ ಆಚರಿಸುತ್ತಿದ್ದೇವೆ. ಈಗಾಗಲೇ ಪ್ರತಿ ಮನೆ-ಮನೆಗಳ ಮೇಲೆ ತಿರಂಗಾ ರಾರಾಜಿಸುತ್ತಿದೆ. ಜೊತೆಗೆ ಆರಭಾವಿ ಮತಕ್ಷೇತ್ರದಲ್ಲಿ ಕೆಎಮ್‌ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಾರಥ್ಯದಲ್ಲಿ ಈಗಾಗಲೇ ಎರಡು ಬಾರಿ ಬೈಕ್ ರ‍್ಯಾಲಿ ಮಾಡಲಾಗಿದೆ. ರೈತರು ಸಹ ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಳ್ಳಲು ಅವರಿಗಾಗಿಯೇ ಟ್ರಾಕ್ಟರ್ ರ‍್ಯಾಲಿ ಆಯೋಜಿಸಿದ್ದೇವೆ. ಅದ್ದೂರಿಯಾಗಿ ನಾವೆಲ್ಲರೂ ನಾಳಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದೇವೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ, ಅರಭಾವಿ ಮಂಡಲ ಬಿಜೆಪಿ ಅಧ್ಯಕ್ಷ ಮಹಾದೇವ ಶೆಕ್ಕಿ, ಬಿಜೆಪಿ ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮಶಿ ಮಾಳೆದವರ, ರೈತಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ ಮೂಡಲಗಿ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು.