ಸಂಬಂಧಿಕನ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ
ಚಿಕ್ಕೋಡಿ : ಸಂಬಂಧಿಕ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿಗೆ ಚಿಕ್ಕೋಡಿ 7 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 18 ಸಾವಿರ ರೂ ದಂಡ ವಿಧಿಸಿ ಬುಧವಾರ ತೀರ್ಪು ಪ್ರಕಟಿಸಿದೆ.
ಅಥಣಿ ತಾಲೂಕಿನ ತೇವರಟ್ಟಿ ಗ್ರಾಮದ ಆರೋಪಿ ಭೀಮಣ್ಣಾ ಭರಮು ಚಿಪ್ಪರಗಿ ಇತನಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಕಳೆದ 2007 ರಂದು ಅಣ್ಣಪ್ಪ ನೇಮಣ್ಣಾ ಚಿಪ್ಪರಗಿ ಕೊಲೆಯಾದ ವ್ಯಕ್ತಿ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬೆಂಗಳೂರಿನ ಗ್ಲಾಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ ಚಿಪ್ಪರಗಿ ಕಾರ್ಖಾನೆ ಬಂದ್ ಆದ ಬಳಿಕ ಗುಜರಾತಕ್ಕೆ ಹೋಗಿ ಕೆಲಸ ನಿರ್ವಹಿಸುತ್ತಿದ್ದ. ಒಮ್ಮೆ ಊರಿಗೆ ಬಂದಾಗ ಅರೋಪಿ ಭೀಮಣ್ಣಾ ನನಗೂ ಕೆಲಸ ಕೊಡಿಸು ಅಂತ ಕೇಳಿಕೊಂಡಾಗ ಅಣ್ಣಪ್ಪ ಆರೋಪಿಯನ್ನು ಗುಜರಾತಿಗೆ ಕರೆದುಕೊಂಡು ಹೋಗಿ ಕೆಲಸ ಕೊಡಿಸಿದ್ದ. ಆದರೆ ಬಹಳ ದಿನ ಕೆಲಸ ಮಾಡದೇ ಮರಳಿ ಊರಿಗೆ ಬಂದ್ ಆರೋಪಿಗೆ ಮನೆಯವರು ತಾತ್ಸಾರ ಮನೋಭಾವ ತೋರುತ್ತಿದ್ದರು.
ನೋಡು ಅಣ್ಣಪ್ಪ ಕಾರ್ಖಾನೆಯಲ್ಲಿ ಕೆಲಸ ಮಾಡಿ ಮನೆ ಕಟ್ಟಿಸಿಕೊಂಡ ನೀನೆನು ಮಾಡುತ್ತೀಯಾ ಊರಲ್ಲಿ ಒಕ್ಕಲುತನ ಮಾಡುತ್ತೀಯಾ ಅಂತ ಹೇಳಿದಾಗ ಕೋಪಗೊಂಡ ಆರೋಪಿಯು ಅಣ್ಣಪ್ಪನನ್ನು ಕೊಲೆ ಮಾಡಿರುವ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ 7 ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಎಲ್.ಚೌವ್ಹಾಣ ಅವರು ಆರೋಪಿತನಿಗೆ ಜೀವಾವಧಿ ಶಿಕ್ಣೆ ಹಾಗೂ 18 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ವೈ.ಬಿ.ತುಂಗಳ ವಾದ ಮಂಡಿಸಿದರು.ಪ್ರಕರಣದ ತನಿಖೆ ಮಾಡಿ ಅಥಣಿ ಸಿಪಿಐ ಶೇಖರೆಪ್ಪ ಎಚ್.ಅವರು ಆರೋಪಿ ಮೇಲೆ ದೋಷಾರೋಪಣೆ ಸಲ್ಲಿಸಿದ್ದರು.