ವಿಶ್ವೇಶ್ವರಯ್ಯ ತಾಂತ್ರಿಕ ವಿವಿ 22ನೇ ಘಟಿಕೋತ್ಸವ
ವಿದ್ಯಾರ್ಥಿಗಳು ದೇಶದ ಶಕ್ತಿಯಾಗಿ ಬೆಳೆಯಿರಿ: ಪ್ರೊ. ಟಿ.ಜಿ ಸೀತಾರಾಮ್
ಬೆಳಗಾವಿ : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದ ನಂತರ, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಕಾಣುತ್ತಿದೆ. ವಿದ್ಯಾರ್ಥಿಗಳು ಹೊಸ ಆವಿಷ್ಕಾರದ ಜೊತೆಗೆ ಸ್ವಯಂ ಉದ್ಯೋಗ ಸ್ಥಾಪಿಸುವ ಮೂಲಕ ದೇಶದ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕು ಎಂದು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅಧ್ಯಕ್ಷರಾದ ಪ್ರೊ. ಟಿ.ಜಿ ಸೀತಾರಾಮ್ ಅವರು ಹೇಳಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಶುಕ್ರವಾರ (ಫೆ.24) ನಡೆದ ವಿಟಿಯು 22 ನೇ ಘಟಿಕೋತ್ಸವದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ದೇಶದ ದೊಡ್ಡ ತಾಂತ್ರಿಕ ವಿಶ್ವ ವಿದ್ಯಲಯಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕೂಡ ಒಂದಾಗಿದೆ. ಈ ಘಟಿಕೋತ್ಸವದಲ್ಲಿ 700ಕ್ಕು ಅಧಿಕ ವಿದ್ಯಾರ್ಥಿಗಳು ಪಿ.ಹೆಚ್.ಡಿ ಪದವಿ ಪ್ರದಾನ ಮಾಡಲಾಗಿದೆ. ಸರ್.ಎಂ ವಿಶ್ವೇಶ್ವರಯ್ಯ ವಿಶ್ವ ವಿದ್ಯಾಲಯ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಯ ನಂತರ ವಿದ್ಯಾರ್ಥಿಗಳ ಭೌತಿಕ ಬೆಳವಣಿಗೆ ಹೆಚ್ಚಾಗಿದೆ.ಈ ಮೊದಲು ಶಿಕ್ಷಣ ಪಡೆಯುವುದು ಬೇರೆಯದ್ದೇ ರೀತಿಯಲ್ಲಿತ್ತು. ಮೊಬೈಲ್, ಕಂಪ್ಯೂಟರ್ ತಂತ್ರಜ್ಞಾನ ಯುಗದಲ್ಲಿ ಎನ್. ಇ. ಪಿ ಶಿಕ್ಷಣ ನೀತಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗಿದೆ. ಯಾವುದೇ ಸ್ಥಳದಲ್ಲಿ ತಂತ್ರಜ್ಞಾನ ಸಹಾಯದ ಮೂಲಕ ಸುಲಭವಾಗಿ ಶಿಕ್ಷಣ ಪಡೆಯಬದಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳತ್ತ ಹೆಜ್ಜೆ ಇಟ್ಟು, ಉದ್ಯೋಗ ಹುಡುಕುವ ಬದಲು ಸ್ವಯಂ ಉದ್ಯೋಗ ಕೈಗೊಂಡು ಇನ್ನಿತರರಿಗೆ ಉದ್ಯೋಗ ನೀಡುವಂತೆ ಬೆಳೆಯಬೇಕು ಇದರಿಂದ ದೇಶದ ಆರ್ಥಿಕತೆ ನಿರುದ್ಯೋಗ ಸಮಸ್ಯೆ ಬಗೆ ಹರಿಯಲಿದೆ. ನಿಮ್ಮ ಬುದ್ಧಿ ಶಕ್ತಿಯ ಮೂಲಕ ತಂತ್ರಜ್ಞಾನ ಬಳಸಿಕೊಂಡುದೇಶಕ್ಕೆ ಮಾದರಿ ವ್ಯಕ್ತಿಗಳಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸಲಹೆ:
ತಂತ್ರಜ್ಞಾನ ಕ್ಷೇತ್ರದಲ್ಲಿ ಸರ್ಕಾರ ಅನೇಕ ಯೋಜನೆ ನೀಡಿವೆ ಇದರ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಬೇಕು.ಭಾರತ ದೇಶದಲ್ಲಿ ಸಂಖ್ಯೆ ಅತಿ ಹೆಚ್ಚಾಗಿದೆ ಯುವಕರು, ಸ್ವಯಂ ಉದ್ಯೋಗ ಸ್ಥಾಪಿಸಿ ಉನ್ನತ ವ್ಯಕ್ತಿಗಳಾಗಿ ಬೆಳೆಯಬೇಕು ಇದರಿಂದ ದೇಶದ ಅಭಿವೃದ್ಧಿಗೆ ಸಹಾಯವಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳು ಭವಿಷ್ಯದಲ್ಲಿ ಏಳಿಗೆ ಹೊಂದಲು ಸ್ವಾಮಿ ವಿವೇಕಾನಂದರ ತತ್ವ, ಆದರ್ಶ, ಸಿದ್ಧಾಂತಗಳನ್ನು ಅಳವಡಿಸಿಕೊಳ್ಳಿ, ಇದರಿಂದ ಗುರಿ ಸಾಧಿಸಲು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ (ಎಐಸಿಟಿಇ) ಅಧ್ಯಕ್ಷರಾದ ಪ್ರೊ. ಟಿ.ಜಿ ಸೀತಾರಾಮ್ ಅವರು ತಿಳಿಸಿದರು.
ದೇಶದ ಅಭಿವೃದ್ಧಿಗೆ ತಂತ್ರಜ್ಞಾನ ಅವಶ್ಯಕ:
ದೇಶದ ಅಭಿವೃದ್ದಿಗೆ ತಂತ್ರಜ್ಞಾನ ಅವಶ್ಯಕವಾಗಿದೆ. 27 ವರ್ಷಗಳ ಹಿಂದೆ ಸರ್ ಎಂ. ವಿಶ್ವೇಶ್ವರಯ್ಯ ಅವರ ಸ್ಮರಣೆಗಾಗಿ ಈ ವಿಶ್ವ ವಿದ್ಯಾಲಯ ಸ್ಥಾಪಿಸಲಾಗಿತ್ತು. ಆದರೆ ಈಗ ಬೃಹತ್ ವಿಶ್ವ ವಿದ್ಯಾಲಯವಾಗಿ ಬೆಳೆದಿದೆ. ಸರ್. ಎಂ ವಿಶ್ವೇಶ್ವರಯ್ಯ ಅವರು ಮಹಾನ್ ವ್ಯಕ್ತಿಗಳು, ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದ ಹೆಸರುವಾಸಿಯಾಗಿ, ದೇಶದ ಹೆಮ್ಮೆಯ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ರಾಜ್ಯಪಾಲರು, ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ಹೇಳಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಪದವಿ ಪಡೆಯುವುದು ಅತಿ ಮುಖ್ಯ ಸಂದರ್ಭವಾಗಿದೆ. ಪದವಿ ಪಡೆದ ನಂತರ, ಜಿಲ್ಲೆ, ರಾಜ್ಯ ಹಾಗೂ ದೇಶದ ವಿಕಸನಕ್ಕೆ ನೀವೆಲ್ಲರೂ ಕೈ ಜೋಡಿಸಬೇಕು. ಸರ್.ಎಂ ವಿಶ್ವೇಶ್ವರಯ್ಯ ಅವರ ತಂತ್ರಜ್ಞಾನದ ಕುರಿತ ಸಾಧನೆಗಳನ್ನು ಎಲ್ಲರೂ ಅರಿತು ವೃತ್ತಿ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ತಿಳಿಸಿದರು.
ಭಾರತ ವಿಶ್ವ ಗುರು ಸ್ಥಾನ ಪಡೆಯುವ ಭರವಸೆ:
ರಾಷ್ಟ್ರೀಯ ಹೊಸ ಶಿಕ್ಷಣ ಪದ್ಧತಿಯಿಂದ ಈಗ ಶಿಕ್ಷಣ ಕ್ಷೇತ್ರ ಮತ್ತಷ್ಟು ಸುಧಾರಣೆ ಹಂತದಲ್ಲಿದೆ. ಶಿಕ್ಷಣ ಕ್ಷೇತ್ರ ಮುಂದಿನ ದಿನಗಳಲ್ಲಿ ದೇಶದ ದೊಡ್ಡ ಕ್ಷೇತ್ರವಾಗಿ ಬೆಳೆಯಲಿದೆ. ದೇಶದ ಆರ್ಥಿಕ ಬೆಳವಣಿಗೆಯಿಂದ ಬರುವ ದಿನಗಳಲ್ಲಿ ಭಾರತ ವಿಶ್ವ ಗುರು ಸ್ಥಾನ ಪಡೆಯಲಿದೆ ಎಂದು ಭರವಸೆ ನೀಡಿದರು.
ಶ್ರೇಷ್ಠ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳ ವೃತ್ತಿ ಜೀವದಲ್ಲಿ ಮಹತ್ತರ ಸಾಧನೆ ಮಾಡಬೇಕು.ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ಮೊದಲ ಸ್ಥಾನದಲ್ಲಿದೆ. ಭಾರತದ ಸಮಗ್ರ ಅಭಿವೃದ್ದಿಗೆ ಎನ್. ಇ. ಪಿ ಶಿಕ್ಷಣ ನೀತಿ ಸಹಕಾರಿ ಆಗಲಿದೆ ಎಂದು ರಾಜ್ಯಪಾಲರು, ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ಥಾವರಚಂದ್ ಗೆಹ್ಲೋಟ್ ಅವರು ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಕುಲಸಚಿವರಾದ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವರಾದ ಟಿ.ಎನ್ ಶ್ರೀನಿವಾಸ, ಮಾಜಿ ಕುಲ ಸಚಿವರು, ಪ್ರಸ್ತುತ ಕಾರ್ಯಕಾರಿ ಪರಿಷತ್ ಸದಸ್ಯರಾದ ಪ್ರೊ.ಎಂ.ಎಸ್ ಶಿವಕುಮಾರ್, ಹಣಕಾಸು ಅಧಿಕಾರಿ ಎಂ. ಎ ಸ್ವಪ್ನ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ:
ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಟೊಯೋಟಾ ಕಿರ್ಲೋಸ್ಕರ್ ಮೋಟರ್ಸ್ ಉಪಾಧ್ಯಕ್ಷರಾದ ವಿಕ್ರಮ್ ಕಿರ್ಲೋಸ್ಕರ್, WABCO India Ltd, and TVS Automotive Solutions Pvt, Ltd ಅಧ್ಯಕ್ಷರಾದ ಎಮ್. ಲಕ್ಷ್ಮೀನಾರಾಯಣ, Belgaum Ferrocast India Pvt, Ltd ವ್ಯವಸ್ಥಾಪಕ ನಿರ್ದೇಶಕರಾದ ಸಚಿನ್ ಸಬ್ನಿಸ್ ಅವರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿ ಪ್ರಧಾನ ಮಾಡಿ ಗೌರವಿಸಲಾಯಿತು.
ವಿಟಿಯು ಇತಿಹಾಸದಲ್ಲೇ ಪ್ರಥಮ ಬಾರಿಗೆ 18 ಚಿನ್ನದ ಪದಕ ಪ್ರಧಾನ:
ವಿವಿಧ ವಿಭಾಗಗಳಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಪದಕ ಹಾಗೂ ಪದವಿ ಪ್ರಧಾನ ಮಾಡಲಾಯಿತು. ಈ ವೇಳೆ ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾದ ಮುರುಳಿ.ಎಸ್ 18 ಚಿನ್ನದ ಪದಕ ಪಡೆಯುವ ಮೂಲಕ ವಿಟಿಯು ಇತಿಹಾಸದಲ್ಲೇ ಮೊದಲ ಬಾರಿ 18 ಚಿನ್ನದ ಪದಕ ಗಳಿಕೆಗೆ ಪಾತ್ರರಾದರು.
ಅದೇ ರೀತಿಯಲ್ಲಿ ಕುರಂಜಿ ವೆಂಕಟರಮನ್ ಗೌಡ ಕಾಲೇಜು ಆಫ್ ಇಂಜಿನಿಯರಿಂಗ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಕೃತಿ.ಎಸ್ 8 ಚಿನ್ನದ ಪದಕ,ಬೆಂಗಳೂರು ಎ.ಸಿ.ಎಸ್ ಕಾಲೇಜ ಆಫ್ ಇಂಜಿನಿಯರಿಂಗ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಆಫ್ ಇಂಜಿನಿಯರಿಂಗ್ ವಿಭಾಗದ ಸ್ವಾತಿ.ಎಸ್ 7 ಚಿನ್ನದ ಪದಕ, ಪದವಿ ಪ್ರಧಾನ ಮಾಡಲಾಯಿತು.
ಬೆಂಗಳೂರಿನ ಸರ್.ಎಂ ವಿಶ್ವೇಶ್ವರಯ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಲೆಕ್ಟ್ರಿಕಲ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಸುಶ್ಮಿತಾ ಎಸ್. ವಿ 6 ಚಿನ್ನದ ಪದಕ, ಬಿ.ಎನ್. ಎಮ್. ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಪೂಜಾ ಬಾಸ್ಕೇರ ವಿಧ್ಯಾರ್ಥಿನಿ 6 ಚಿನ್ನದ ಪದಕ, ಪದವಿ ಪ್ರಧಾನ ಮಾಡಲಾಯಿತು.
ಆರ್.ಎನ್.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಸ್ಟ್ರುಮೆಂಟೇಷನ್ ವಿಭಾಗದ ಅಭಿಲಾಷ ಎಮ್.4 ಚಿನ್ನದ ಪದಕ, ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇನ್ಫರ್ಮೇಷನ್ ಸೈಯನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಯುವಿಕಾ ರಮೇಶ್ ಬಾಬು 4 ಚಿನ್ನದ ಪದಕ, ಆರ್.ಎನ್.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಬಿಎ ವಿಭಾಗದ ಹರ್ಷವರ್ಧಿನಿ.ಜೆ 4 ಚಿನ್ನದ ಪದಕ, ಬಿಎಂಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅರ್ಜುನ್. ಯು. ಕೆ 3 ಚಿನ್ನದ ಪದಕ ಹಾಗೂ ದಾವಣಗೆರೆ ಯುಬಿಟಿಡಿ ಕಾಲೇಜ್ ಆಫ್ ಇಂಜಿನಿಯರಿಂಗ್ ಎಂ.ಟೆಕ್ ವಿಭಾಗದ ಸಂಗೀತ ಜಿ. ಆರ್ 2 ಚಿನ್ನದ ಪದಕ, ಪದವಿ ಪಡೆದುಕೊಂಡರು.
ವಿವಿಧ ವಿಭಾಗಗಳ ಪದವಿ ಪ್ರಧಾನ :
ಘಟಿಕೋತ್ಸವದಲ್ಲಿ ಬಿಇ/ಬಿ.ಟೆಕ್-51905, ಬಿ.ಪ್ಲಾನ್-9, ಬಿ.ಆರ್ಕ್-1032, ಎಂಬಿಎ-4279, ಎಂಸಿಎ-2028, ಎಂ.ಟೆಕ್-1363, ಎಂ.ಆರ್ಕ್-82 ಮತ್ತು 1 ಪಿಜಿ ಡಿಪ್ಲೊಮಾ ಮತ್ತು ಸಂಶೋಧನಾ ಅಧ್ಯಯನ ಮುಗಿಸಿದ 700 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಹಾಗೂ 2 ಎಂ.ಎಸ್.ಸಿ ಬೈ ರಿಸರ್ಚ್, 04 ಇಂಟಿಗ್ರೇಡಿಯಟ್ ಡ್ಯುಯಲ್ ಡಿಗ್ರಿ ಪದವಿಗಳನ್ನು ಪ್ರದಾನ ಮಾಡಲಾಯಿತು.