
ಹೃದಯದಲ್ಲಿ ಸ್ಥಾನ ಕೊಡುತ್ತೇವೆ ; ಅವರಂತೆ ಕಾಲಿನ ಕೆಳಗಲ್ಲ

ಬೆಂಗಳೂರು : ಐಸಿಸಿ ಟಿ20 ವಿಶ್ವಕಪ್ ಗೆದ್ದು ಭಾರತ ಇತಿಹಾಸ ನಿರ್ಮಿಸಿದೆ. ಆದರೆ ಕಪ್ ಗೆದ್ದ ಭಾರತದ ಆಟಗಾರರು ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ಮೂಲಕ ಕಳೆದ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ಆಟಗಾರರ ವಿಕೃತ ಮನಸ್ಥಿತಿಗೆ ಉತ್ತರ ಕೊಟ್ಟಿದ್ದಾರೆ.
2023 ರ ನವೆಂಬರ್ ನಲ್ಲಿ ಭಾರತದ ವಿರುದ್ಧ ಏಕದಿನ ವಿಶ್ವಕಪ್ ಗೆದ್ದ ನಂತರ ಆಸ್ಟ್ರೇಲಿಯಾ ಆಟಗಾರರು ವಿಕೃತಿ ಮೆರೆದಿದ್ದರು. ಕಪ್ ಅನ್ನು ತಮ್ಮ ಕಾಲ ಕೆಳಗೆ ಇಟ್ಟುಕೊಂಡ ಪೋಟೋ ಸಾಕಷ್ಟು ವೈರಲ್ ಆಗಿತ್ತು. ಉತ್ತಮ ಕ್ರಿಕೆಟ್ ತಂಟವಾದರು ಅವರು ನಡೆದುಕೊಂಡ ರೀತಿ ಅನೇಕರಿಗೆ ಬೇಸರ ತರಿಸಿತ್ತು. ಆದರೆ ಇವೆಲ್ಲದ್ದಕ್ಕೂ ಭಾರತೀಯ ಆಟಗಾರರು ವಿಭಿನ್ನವಾಗಿ ನಡೆದುಕೊಂಡಿದ್ದಾರೆ.
ಶನಿವಾರ ಭಾರತ ತಂಡ ಸೌತ್ ಆಫ್ರಿಕಾ ವಿರುದ್ಧ ಟಿ20 ವಿಶ್ವಕಪ್ ಗೆದ್ದ ನಂತರದಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮ ಕ್ರಿಕೆಟ್ ಅಂಗಳಕ್ಕೆ ನಮಿಸಿ ಅಲ್ಲಿನ ಮಣ್ಣಿನ ಕಣವನ್ನು ಬಾಯಲ್ಲಿ ಹಾಕಿಕೊಂಡು ನಮಿಸಿದ್ದು ವಿಶೇಷವಾಗಿತ್ತು. ಗೆದ್ದ ಕ್ರೀಡಾಂಗಣಕ್ಕೆ ಭಾರತೀಯರು ನೀಡುವ ಮರ್ಯಾದೆ ಎದ್ದು ಕಾಣುತ್ತಿತ್ತು.
ಅಷ್ಟೇ ಅಲ್ಲದೆ ಭಾರತೀಯ ಆಟಗಾರರು ಗೆದ್ದ ಕಪ್ ಅನ್ನು ಮಗುವಿನಂತೆ ಎದೆಗೆ ತಬ್ಬಿಕೊಂಡು ಸಂಭ್ರಮಾಚರಣೆ ಮಾಡಿದರು. ಜೊತೆಗೆ ಕ್ರೀಡಾಂಗಣ ಮತ್ತು ನೆರೆದಿದ್ದ ಪ್ರೇಕ್ಷಕರಿಗೆ ನಮಿಸುವ ಮೂಲಕ ನಮ್ಮ ಸಂಸ್ಕೃತಿ ಎತ್ತಿ ಹಿಡಿದಿದ್ದು ವಿಶೇಷವಾಗಿತ್ತು.