ಶಿಕ್ಷಕ ಎಂಬ ವೃತ್ತಿಗೆ ಹೇಳಿ ಮಾಡಿಸಿದ ವ್ಯಕ್ತಿತ್ವ – ಗಿರೀಶ್ ವಿ. ಬಡಿಗೇರ
ನಮ್ಮ ಜೀವನ ಕಾಲಘಟ್ಟದಲ್ಲಿ ವಯಸ್ಸಿಗನುಗುಣವಾಗಿ ಶಿಕ್ಷಣವು ಸಾಗುತ್ತಿರುತ್ತದೆ. ಅದರಲ್ಲಿ ನಾವು ಕಲಿಯುವ ಪ್ರತಿ ತರಗತಿಯಲ್ಲಿಯೂ ವಿವಿಧ ವಿಷಯಗಳನ್ನು ಕಲಿಯುವ ರೀತಿಯಲ್ಲಿ ಅದನ್ನು ಬೋಧಿಸುವ ಶಿಕ್ಷಕರು ನಮಗೆ ಒಬ್ಬರಿಗಿಂತ ಒಬ್ಬರು ವಿಶೇಷವಾಗಿ ಕಾಣುತ್ತಾರೆ. ಅದರಲ್ಲೂ ನಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಶಿಕ್ಷಕರು ನಮ್ಮ ಮನಸ್ಸಿನಲ್ಲಿ ಹಚ್ಚು ಹಸಿರಾಗಿ ಉಳಿದು ಬಿಡುತ್ತಾರೆ. ಏಕೆಂದರೆ ಆ ವಯಸ್ಸಿನಲ್ಲಿ ಮಕ್ಕಳಿಗೆ ಏನೂ ಬೋಧಿಸಿದರು ಅದು ನೇರವಾಗಿ ಹೃದಯಕ್ಕೆ ತಲಪುತ್ತದೆ. ಇನ್ನು ಇದನ್ನು ಕಲಿಸುವ ಶಿಕ್ಷಕರು ನಮ್ಮಲ್ಲಿ ಅಚ್ಚಳಿಯದೆ ಉಳಿದು ಬಿಡುತ್ತಾರೆ. ಆ ನಮ್ಮ ಬಾಲ್ಯದ ತುಂಟಾಟಗಳು ಅರಗಿಸಿಕೊಂಡು, ಕೋತಿ ಚೇಷ್ಟೆಗಳಿಗೆ ನಿಧಾನವಾಗಿ ಬ್ರೇಕ್ ಹಾಕುತ್ತಾ ಅದರೊಂದಿಗೆ ವಿದ್ಯಾಭ್ಯಾಸವನ್ನು ಮಾಡಿಸುತ್ತಾ ವಿದ್ಯಾರ್ಥಿಯ ಶೈಕ್ಷಣಿಕ ಏಳ್ಗೆಯೆಡೆಗೂ ಗಮನ ಹರಿಸಿ ವಿದ್ಯಾವಂತರಾಗಿ ಮಾಡುವುದು ಅಂದರೇ ಸಾಮಾನ್ಯ ಸಂಗತಿಯೇನಲ್ಲ! ತುಂಬಾ ಕಷ್ಟಕರ. ಅದರಲ್ಲೂ ಹಾಸ್ಟೇಲಿನಲ್ಲಿ ಇದ್ದು ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಸಂಭಾಳಿಸುವುದು, ಎರಡು ಕೋತಿ ಮರಿಗಳನ್ನು ಸಾಕಿದಂತೆಯೇ ಸರಿ. ಆ ಪ್ರಾಯದಲ್ಲಿ ನಮ್ಮ ಕಿತಾಪತಿಗಳು ಮತ್ತು ಕೀಟಲೆಗಳು ಅಷ್ಟರ ಮಟ್ಟಿಗೆ ಇರುತ್ತವೆ.
ಇನ್ನೂ ಈ ಬಾಲ್ಯದ ಎಲ್ಲ ನೆನಪುಗಳನ್ನು ಒಟ್ಟಿಗೆ ಸಂಗ್ರಹಿಸಿ ಒಂದು ಬಾರಿ ಮೆಲಕು ಹಾಕಿದಾಗ, ನನ್ನ ಆ ಬಾಲ್ಯದ ಮಧುರ ನೆನಪುಗಳು ಹಾಗೆಯೇ ಕಣ್ಣುಕಟ್ಟಿ ನಿಂತತ್ತಿವೆ. ಅದೆಷ್ಟು ಸುಂದರ ನೆನಪುಗಳು, ಆ ಬಾಲ್ಯ ಮರಳಿ ಬಂದರೇ ಸಾಕು ಮತ್ತೇನು ಬೇಡ ಎನ್ನುವಷ್ಟು ಸಾರ್ಥಕತೆ. ಆ ನನ್ನ ಗೆಳೆಯರ ಬಳಗ, ಶಾಲೆ, ಹಾಸ್ಟೇಲ್, ಆಟ, ಪಾಠ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನು ತಮ್ಮ ಸ್ವಂತ ಮಕ್ಕಳಂತೆ ಕಾಣುವ ನನ್ನ ಅಚ್ಚುಮೆಚ್ಚಿನ ಶಿಕ್ಷಕ ವೃಂದ. ಅದರಲ್ಲೂ ನನ್ನಂತ ಓರ್ವ ವಿದ್ಯಾರ್ಥಿಯನ್ನು ಪರಿಪೂರ್ಣತೆಯೆಡಗೆ ಕರೆತಂದ ನನ್ನ ಗುರು ನನ್ನ ಆಗಿನ ಹೈಸ್ಕೂಲ್ ವಾರ್ಡನ್. ಹೈಸ್ಕೂಲಿನಲ್ಲಿ ನನ್ನ ತುಂಟಾಟ ತುಂಬಾ ಹೆಚ್ಚಿತ್ತು. ನಾನೋಬ್ಬ ಶುದ್ಧ ಅಧಿಕ ಪ್ರಸಂಗಿ ಆಗಿದ್ದೆ, ಎಲ್ಲರನ್ನೂ ಗೇಲಿ ಮಾಡುವುದು ಮತ್ತು ಯಾರನ್ನೂ ಎದುರು ವಾದಿಸದೇ ಇದ್ದವನೇ ಅಲ್ಲ. ಈ ಎಲ್ಲ ಕಪಿಬುದ್ದಿಗಳಿಗೆ ಬ್ರೇಕ್ ಹಾಕಿ ನನ್ನ ಸನ್ನಡತೆಯೆಡಗೆ ಕೆರದುಕೊಂಡು ಬಂದವರೇ ನಮ್ಮ ವಾರ್ಡನ್ ಶ್ರೀ. ವಸಂತರಾಜ್ ಸರ್.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿ ಊರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ?, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ. ಅದೇ ಊರಿನ ಸತ್ಯಸಾಯಿ ಗ್ರಾಮದ ಪಂಚಗಿರಿಗಳ ಮಧ್ಯದಲ್ಲಿ ಸ್ಥಾಪಿತವಾದ ಸುಂದರ ಶ್ರೀ ಸತ್ಯಸಾಯಿ ಲೋಕ ಸೇವಾ ಸಮೂಹ ಸಂಸ್ಥೆಯಲ್ಲಿ ನಾನು ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದು. ಇಲ್ಲಿ ಸುಮಾರು ವರ್ಷಗಳಿಂದ ತಮ್ಮ ಪೂರ್ಣ ಜೀವನವನ್ನು ವಿದ್ಯಾರ್ಥಿಗಳ ಏಳ್ಗೆಗಾಗಿ ಮುಡಿಪಾಗಿಟ್ಟು ತಮ್ಮ ಶಿಕ್ಷಣ ಸೇವೆಯನ್ನು ಸಲ್ಲಿಸುತ್ತಿರುವ ಶಿಕ್ಷಕ ವೃಂದದ ಹಿರಿಯ ಜೀವಿ ಮತ್ತು ಆದರ್ಶ ವ್ಯಕ್ತಿ ಎಂದರೇ ನಮ್ಮ ಹೈಸ್ಕೂಲ್ ವಾರ್ಡನ್ ಆಗಿದ್ದ ಶ್ರೀ. ವಸಂತರಾಜ್ ಸರ್. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು, ಶ್ರೀಯುತರು ಲೋಕಸೇವಾ ಸಂಸ್ಥೆಯ ಸಂಸ್ಥಾಪಕರಾದ ಶ್ರೀ. ಮಡಿಯಾಲ ನಾರಾಯಣ ಭಟ್ ಅಣ್ಣನವರ ಗರಡಿಯಲ್ಲಿ ಪಳಗಿದವರು ಮತ್ತು ಅತೀ ಸರಳ ವ್ಯಕ್ತಿತ್ವ ಉಳ್ಳವರು. ಅಣ್ಣನವರಿಂದ ಆಕರ್ಷಿತರಾಗಿ ಮತ್ತು ಶ್ರೀ ಸತ್ಯಸಾಯಿ ಬಾಬಾರವರ ಆಶೀರ್ವಾದಕ್ಕೆ ತಲೆಬಾಗಿ ತಮ್ಮ ಸಂಪೂರ್ಣ ಜೀವನ ಸಮಯವನ್ನು ಶಿಕ್ಷಣಕ್ರಾಂತಿಗೆ ಧಾರೆ ಎರೆದ ಮೇರುಜೀವಿ. ಇವರು ಇಂಗ್ಲಿಷ್ ಭಾಷೆಯಲ್ಲಿ ಆಳವಾದ ಅಧ್ಯಯನ ಮಾಡಿದ್ದು, ನಾವು ಒಂದು ಕನ್ನಡ ಪದಕ್ಕೆ ಇಂಗ್ಲೀಷ್ನಲ್ಲಿ ಏನು ಅನ್ನುತ್ತಾರೆ ಎಂದು ಕೇಳಿದರೇ ಇವರು ಅದಕ್ಕೆ ಹೋಲುವ ಐದಾರು ಸಮನಾರ್ಥಕಪದಗಳನ್ನು ಹೇಳುತ್ತಿದ್ದರು. ಹೀಗೆ ಭಾಷೆಯ ಮೇಲೆ ಅಪೂರ್ವ ಹಿಡಿತವನ್ನು ಸಾಧಿಸಿಕೊಂಡ ದೇಶದ ಕೆಲವೇ ಕೆಲವು ವ್ಯಕ್ತಿಗಳ ಸಾಲಿನಲ್ಲಿ ಅಗ್ರಗಣ್ಯರು, ಈ ವಿಷಯ ಅವರ ಆಪ್ತ ಬಳಗದವರು ಮಾತ್ರ ಬಲ್ಲರು. ಏಕೆಂದರೆ ಇವರಿಗೆ ಪ್ರಚಾರ ಎಂದರೇ ಕಿಂಚಿತ್ತು ಆಗುತ್ತಿರಲಿಲ್ಲ, ಇವರು ಓರ್ವ ನಿಸ್ವಾರ್ಥ ತ್ಯಾಗ ಜೀವಿ. ನಮ್ಮ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಕ್ಕೆ ವೇದಿಕೆ ಮೇಲೆ ಆಹ್ವಾನಿಸಿದರು ಬರುತ್ತಿರಲಿಲ್ಲ, ಒಂದು ವೇಳೆ ಒತ್ತಾಯದ ಮೇರೆಗೆ ಬಂದರೂ ಸಹ ಮಗುವಿನ ಹಾಗೆ ಒಂದು ಮೂಲೆಯಲ್ಲಿ ಬಂದು ನಿಂತು ಬಿಡುತ್ತಿದ್ದರು, ಆ ಘಳಿಗೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಪ್ರೀತಿಯ ಕರತಾಳನ ಮುಗಿಲು ಮುಟ್ಟಿರುತ್ತಿತ್ತು. ಅಷ್ಟರ ಮಟ್ಟಿಗೆ ನಾವು ಅವರನ್ನು ಪ್ರೀತಿಸುತ್ತಿದ್ದೇವು, ನೆನೆಯುತ್ತಿದ್ದೇವು ಮತ್ತು ಆರಾಧಿಸುತ್ತಿದ್ದೇವು.
ಅದರಂತೆಯೇ, ನಮ್ಮ ವಾರ್ಡನ್ ಸರ್ ಕೂಡಾ ಅಷ್ಟೇ ಪ್ರೀತಿ ವಾತ್ಸಲ್ಯದಿಂದ ನಮ್ಮನ್ನು ಕಾಣುತ್ತಿದ್ದರು. ಇವರಿಗೆ ನಮ್ಮ ಹೈಸ್ಕೂಲಿನ ಪ್ರತಿಯೊಬ್ಬ ವಿದ್ಯಾರ್ಥಿಯ ಹೆಸರು, ಅವರ ಪಾಲಕರ ಹೆಸರು, ಊರು, ಅವನು ಪಡೆದ ಅಂಕ, ಅವನ ವಿಶೇಷ ಅಭಿರುಚಿ, ತುಂಟಾಟ ಮತ್ತು ಅವನ ಕುರಿತಂತೆ ಇಂಚಿಂಚು ಮಾಹಿತಿ ಅವರಿಗೆ ನೆನಪಿನಲ್ಲಿರುತ್ತಿತ್ತು. ಪ್ರತಿ ತಿಂಗಳ ಮೊದಲ ಭಾನುವಾರದ ಪಾಲಕರ ಸಭೆ ಬಂತು ಎಂದರೇ ನಮ್ಮ ಪಾಲಕರ ಮುಂದೆ ನಮ್ಮ ಜಾತಕ ಜಾಲಾಡಿ ಬಿಡುತ್ತಿದ್ದರು. ಅಷ್ಟರ ಮಟ್ಟಿಗೆ ಅವರ ತರ್ಕಜ್ಞಾನ. ಇದು ಬರೀ ಅಲ್ಲಿ ಓದುವಾಗ ಮಾತ್ರವಲ್ಲ, ಈಗ ಕೂಡಾ ಮೊನ್ನೆ ಮುದ್ದೇನಹಳ್ಳಿಗೆ ಹೋದಾಗ ಪ್ರೇಮಾಮೃತಂನಲ್ಲಿ ಭೇಟಿ ಮಾಡಿ ನಮಸ್ಕರಿಸಿ ಸಾಯಿರಾಮ್ ಸರ್, ನಾನು ಗಿರೀಶ್ ಬಡಿಗೇರ ಎಂದಾಕ್ಷಣ ನನ್ನ ಪೂರ್ಣ ಮಾಹಿತಿಯ ಡೈರಿ ಓಪನ್ ಆಗಿ, ನನ್ನೆಲ್ಲ ಚೇಷ್ಟೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿ ಕಿವಿ ಹಿಂಡಿದರು.
ಹೈಸ್ಕೂಲಿನಲ್ಲಿ ನಾನೊಬ್ಬ ಒಳ್ಳೆಯ ವಿದ್ಯಾರ್ಥಿ ಆಗಿದ್ದೆ, ಕನ್ನಡ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೆ. ಓದುವುದರಲ್ಲಿ ಸ್ವಲ್ಪ ಹಿಂದೆ, ಇದರರ್ಥ ದಡ್ಡನೆಂದಲ್ಲ. ಆ ಕಡೆಗೆ ಕೊಂಚ ಆಸಕ್ತಿ ಕಡಿಮೆ ಅಷ್ಟೇ. ಬಿಟ್ಟರೇ ಇನ್ನೂ ಪಠ್ಯೇತರ ಎಲ್ಲ ಚಟುವಟಿಕೆಗಳಲ್ಲಿ ನನ್ನ ಪ್ರಾತಿನಿಧ್ಯತೆ ಇರುತ್ತಿತ್ತು. ನನ್ನ ಎಲ್ಲ ಕಾರ್ಯಗಳಿಗೂ ನಮ್ಮ ವಾರ್ಡನ್ ಸರ್ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸುತ್ತಿದ್ದರು. ನನ್ನ ಬಗ್ಗೆ ಅವರಿಗೆ ಇದ್ದ ವಿಶೇಷ ಕಾಳಜಿಯನ್ನು ನಾ ಹೇಗೆ ಮರೆಯಲಿ?
ಹೀಗೇ ಒಮ್ಮೆ ಹತ್ತನೇಯ ತರಗತಿಯಲ್ಲಿದ್ದಾಗ, ಪಬ್ಲಿಕ್ ಪರೀಕ್ಷೆಗಳ ದಿನಾಂಕ ಘೋಷಣೆ ಆಗಿದ್ದವು, ಎಲ್ಲರೂ ಇಡೀ ಪುಸ್ತಕವನ್ನು ಓದಿ ಮುಗಿಸುವ ಕಾತುರದಲ್ಲಿದ್ದರು. ನಮಗೆ ಓದಲು ಅಂತೇ ಪ್ರತಿನಿತ್ಯ ಸ್ಟಡೀ ಅವರ್ಸ್ ಇರುತ್ತಿತ್ತು. ನಮಗೆ ಇಷ್ಟವಾದ ಜಾಗದಲ್ಲಿ ಕೂತು ಓದಲು ಅನುಮತಿಯೂ ಇತ್ತು. ನಾನು ನನ್ನ ಗೆಳೆಯರಾದ ಗಂಗಾಧರ ಮಠಪತಿ (ಈಗ ಶ್ರೀ ಸತ್ಯಸಾಯಿ ಪ್ರೇಮನಿಕೇತನಂ.ಅಂಜುಟಗಿ ಬಿಜಾಪುರ ಶಾಲೆಯ ವಾರ್ಡನ್) ಮತ್ತು ಕಿರಣ ಬಿದರಿ (ಈಗ ಇಂಜಿನಿಯರ್) ಮೂವರು ಕೂಡಾ ಬಿಜಾಪೂರಿನ ಮಾತಿನ ಮಲ್ಲರೇ. ನಾವು ನಮ್ಮ ಅಭ್ಯಾಸಕ್ಕೆ ಆಯ್ದುಕೊಂಡ ಜಾಗ ನಮ್ಮ ಹೈಸ್ಕೂಲ್ ಕಟ್ಟಡದ ಎರಡನೇ ಮಹಡಿಯ ಮೆಟ್ಟಿಲುಗಳ ಹತ್ತಿರ ಹಾಕಿದ ಬೆಂಚ್ ಗಳು. ನಮ್ಮ ವಾರ್ಡನ್ ಅವರು ಪ್ರತಿದಿನ ಹಾಗೆಯೇ ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಸೂಕ್ಷ್ಮವಾಗಿ ಗಮನಿಸಲು ಎಲ್ಲರ ಹತ್ತಿರವೂ ಒಮ್ಮೆ ಬಂದು ಹೋಗುವವರು, ಅದು ಸುಮಾರು ಮೂರಂತಸ್ತಿನ ಕಟ್ಟಡ, ಅದರ ಮೂಲೆಮೂಲೆಗಳಲ್ಲಿಯೂ ಬಂದು ಸಂಪರ್ಕಿಸಿ ಹೋಗುತ್ತಿದ್ದರು ಅದು ಆ ೬೦ರ ಇಳಿ ವಯಸ್ಸಿನಲ್ಲಿ ಅಂದರೇ ಸಾಮಾನ್ಯ ವಿಷಯವೇ?. ಅಷ್ಟು ಕ್ರಿಯಾಶೀಲ ಮತ್ತು ಚೇತೋಹಾರಿಯಾಗಿದ್ದರು ನಮ್ಮ ವಾರ್ಡನ್. ಅವರ ದೈನಂದಿನ ಕಾರ್ಯಗಳು ಪ್ರಾತಃಕಾಲ ೪ ಗಂಟೆಗೇ ಪ್ರಾರಂಭವಾಗುತ್ತಿದ್ದವು ಅಂದರೇ ನೀವೇ ಒಮ್ನೆ ಊಹಿಸಿಕೊಳ್ಳಿ.
ಇನ್ನೂ ಮರಳಿ ನಮ್ಮ ಹತ್ತನೇಯ ತರಗತಿ ಪರೀಕ್ಷೆ, ನಾವು ಇಲ್ಲಿ ಕೂತು ಓದಿದ್ದಕ್ಕಿಂತ ಹರಟೆ ಹೊಡೆದ ನೆನಪೇ ಜಾಸ್ತಿ ಇವೆ. ಪ್ರತಿದಿನ ಒಬ್ಬರಂತೆ ಬಿಸ್ಕೇಟ್ ಮತ್ತು ಚಾಕೊಲೇಟ್ ತಂದು ತಿನ್ನುವುದರಲ್ಲಿ ವ್ಯರ್ಥ ಮಾಡುತ್ತಿದ್ದೇವು. ಈ ಎಲ್ಲಾ ವಿಷಯವನ್ನು ವಾರ್ಡನ್ ಸರ್ ಅವರು ಸೂಕ್ಷ್ಮವಾಗಿ ಗಮನಿಸಿ, ನಮ್ಮ ಮೇಲೆ ಬಲೆ ಬೀಸಿದರು, ಮೂವರನ್ನು ಮೂರು ದಿಕ್ಕಿಗೆ ಕಳುಹಿಸಿ ಓದಲು ಸಲಹೆ ನೀಡಿದರು, ಅದರಲ್ಲಿ ನನಗೆ ಸ್ವಲ್ಪ ಜೋರಾಗಿಯೇ ಏರು ಧ್ವನಿಯಲ್ಲಿ ಹೇಳಿ ಕಳುಹಿಸಿದರು. ನಂತರ ನಾವು ಬೇರೆ ಬೇರೆ ಸ್ಥಳದಲ್ಲಿ ಕೂತು ಅಧ್ಯಯನ ಮಾಡಲು ಶುರುಮಾಡಿದೆವು. ವಾರ್ಡನ್ ಸರ್ ಮತ್ತೆ ತಮ್ಮ ವಿಸಿಟಿಂಗಗೇ ಬಂದಾಗ ನಮ್ಮತ್ತ ಒಮ್ಮೆ ನೋಡಿ ಮುಗುಳ್ನಕ್ಕು ಮುಂದೆ ಸಾಗುತ್ತಿದ್ದರು. ಹೀಗೇ ಮೂರ್ನಾಲ್ಕು ದಿನಗಳು ಉರುಳಿದ ನಂತರ ನನ್ನನ್ನು ಕರೆದು ಪ್ರೀತಿಯಿಂದ ರಮಿಸಿ, ಆಗೆಲ್ಲ ಸಮುವನ್ನು ಪೋಲು ಮಾಡಬಾರದು, ಇದು ಪರೀಕ್ಷಾ ಸಮಯ, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಹೇಳಿದರು. ಜೊತೆಗೆ ಈ ಬಾರಿಯ ಪ್ರೇಮದೀಪ(ನಮ್ಮ ಸಂಸ್ಥೆಯ ವಾರ್ಷಿಕ ಸೃತಿಸಂಚಿಕೆ) ದಲ್ಲಿ ನಿನ್ನ ಎರಡು ಅಂಕಣಗಳು ಪ್ರಕಟವಾಗಲಿವೆ ಎಂದು ಹೇಳಿ ಕಳುಹಿಸಿದರು, ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ.
ಹೀಗೆ, ವಸಂತರಾಜ್ ಸರ್ ನಮ್ಮನ್ನು ತುಂಬಾ ಪ್ರೀತಿಯಿಂದ ತಿದ್ದಿ ತೀಡುತ್ತಿದ್ದರು. ಅವರಿಂದ ನೋಡಿ ಕಲಿಯುವುದು ಸಾಗರದಷ್ಟಿತ್ತು. ಇವರು ಶಿಕ್ಷಕ ಎಂಬ ವೃತ್ತಿಗೆ ಹೇಳಿ ಮಾಡಿಸಿದಂತಹ ವ್ಯಕ್ತಿತ್ವ. ಎಲ್ಲರನ್ನೂ ಒಂದೇ ಭಾವದಲ್ಲಿ ನೋಡುವ ಮಾತೃಸ್ವರೂಪಿ. ಆಗ ನಮಗೆ ಇವರೇ ತಾಯಿ, ತಂದೆ, ಬಂಧು, ಬಳಗವಾಗಿದ್ದರು. ನಮ್ಮ ಮಧ್ಯದ ಚಿಕ್ಕ ಪುಟ್ಟ ಜಗಳಗಳನ್ನು ಬಗೆಹರಿಸಿ ಒಂದು ಮಾಡುವ ನ್ಯಾಯ ಮೂರ್ತಿ. ಒಂದೇ ಪದದಲ್ಲಿ ಹೇಳಬೇಕಾದರೇ ಇವರೇ ನಮ್ಮ ಸರ್ವಸ್ವವಾಗಿದ್ದರು. ನನ್ನಂತ ಕಲ್ಲನ್ನು ಒಂದು ಸುಂದರ ಶಿಲೆಯನ್ನಾಗಿ ಪರಿವರ್ತಿಸಿದ ಶ್ರೇಯಸ್ಸು ಇವರಿಗೇ ಸಲ್ಲಬೇಕು. ಒಮ್ಮೆ ಆ ದಿನಗಳನ್ನು ಮನನಃ ಮಾಡಿಕೊಂಡರೇ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವುದು, ಇನ್ನೂ ಹೆಚ್ಚಿಗೆ ಹೇಳಿದರೇ ಅತಿಶಯೋಕ್ತಿ ಎನಿಸುತ್ತದೆ. ನನ್ನಂತ ಸಾವಿರಾರು ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರ ನೀಡಿದ ಮತ್ತು ನೀಡುತ್ತಿರುವ ರಾಷ್ಟ್ರ ನಿರ್ಮಾತೃ ಶಿಕ್ಷಕರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.